ಬಾಳೆಹೊನ್ನೂರು: ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕೆಲಸ ಅರಸಿಕೊಂಡು ಬರುವ ಕೂಲಿ ಕಾರ್ಮಿಕರು ಕನ್ನಡ ಕಲಿತು ನಮ್ಮೊಂದಿಗೆ ಉತ್ತಮ ಸಂವಹನ ಹೊಂದಿರಬೇಕು ಎಂದು ಎನ್.ಆರ್.ಪುರ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.
ಸೀಗೋಡು ದೇವದರ್ಶಿನಿ ಎಸ್ಟೇಟ್‌ನಲ್ಲಿ ಮಂಗಳವಾರ ನಡೆದ ಕಾರ್ಮಿಕರಲ್ಲಿ ಕನ್ನಡಾಭಿಮಾನ, ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಹೃದಯದ ಭಾಷೆಯಾಗಿದ್ದು, ಕಲಿಯಲು ಸುಲಭ ಹಾಗೂ ಪ್ರೀತಿಯ ಭಾಷೆಯಾಗಿದೆ. ಇಲ್ಲಿಗೆ ಕೆಲಸ ಅರಸಿ ಬರುವ ಕಾರ್ಮಿಕರು ಕನ್ನಡ ಕಲಿತು ಎಲ್ಲರೊಂದಿಗೆ ಬೆರೆತು ಕನ್ನಡ ಮಾತನಾಡಿದರೆ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದರು.
ಎನ್.ಆರ್.ಪುರ ತಾಲೂಕು ಕಸಾಪ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಕಾಲೇಜುಗಳು, ಹಳ್ಳಿಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು, ಗ್ರಾಮೀಣ ಪ್ರದೇಶದ ತೋಟಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಭಗವಾನ್ ಮಾತನಾಡಿ, ಕೂಲಿ ಕಾರ್ಮಿಕರಲ್ಲಿ ಸ್ವಚ್ಛತೆ, ಆರೋಗ್ಯ ಹಾಗೂ ಸುತ್ತಮುತ್ತಲಿನ ಉತ್ತಮ ಪರಿಸರ ಉತ್ತಮ ಆರೋಗ್ಯಕ್ಕೆ ಪೂರಕವಾಗಿರಲಿದೆ ಎಂದರು.
ವೈದ್ಯಾಧಿಕಾರಿ ಡಾ. ಆಕರ್ಷ್, ಆಪ್ತ ಸಮಾಲೋಚಕ ಸುಹಾಸ್, ತಾಲೂಕು ಕಸಾಪ ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ್, ಎಸ್ಟೇಟ್ ವ್ಯವಸ್ಥಾಪಕ ಅಮಿತ್, ಹೋಬಳಿ ಕಸಾಪ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ, ಆರೋಗ್ಯ ಸುರಕ್ಷಣಾಧಿಕಾರಿ ವಿನೋದಾ, ಆಶಾ ಕಾರ್ಯಕರ್ತೆ ಲೀನಾ ಜ್ಯೋತಿ ಇತರರಿದ್ದರು.