ಕಾರವಾರ: ಇನ್ನೆರಡು ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಕರೊನಾ ಮುಕ್ತವಾಗುವ ನಿರೀಕ್ಷೆ ಇದೆ. ಈಗ ಹೊರ ಊರುಗಳಿಂದ ರೋಗ ಹರಡದಂತೆ ತಡೆಯುವುದು ಜಿಲ್ಲೆಗಿರುವ ಸವಾಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಯಾರಿ ನಡೆಸಿದೆ.
ಜಿಲ್ಲೆಯಲ್ಲಿ ಸದ್ಯ ದುಬೈನಿಂದ ಆಗಮಿಸಿದ ಭಟ್ಕಳ ಮೂಲದ ಕರೊನಾ ಸೋಂಕಿತ ವ್ಯಕ್ತಿ (ಪಿ-260)ಒಂದೆರಡು ದಿನದಲ್ಲಿ ಕಾರವಾರ ಐಎನ್ಎಸ್ ಪತಂಜಲಿ ಆಸ್ಪತ್ರೆಯಿಂದ ಸಂಪೂರ್ಣ ಗುಣಮುಖವಾಗಿ ಬಿಡುಗಡೆಯಾಗುವ ಲಕ್ಷಣವಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕು ತಗುಲಿರುವ ಅನುಮಾನದ ಹಿನ್ನೆಲೆಯಲ್ಲಿ 14 ಜನರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಎಲ್ಲರ ವರದಿಗಳೂ ನೆಗೆಟಿವ್ ಬಂದಿದೆ. ಸದ್ಯ ಮತ್ಯಾರಿಂದಲೂ ರೋಗ ಹರಡುವ ಸಾಧ್ಯತೆ ಇಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಹೊರ ಜಿಲ್ಲೆಗಳ ಆತಂಕ: ಜಿಲ್ಲೆಯಲ್ಲಿ ಕರೊನಾ ಕಡಿಮೆಯಾದರೂ ಹೊರ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಬೆಳೆಯುತ್ತಿರುವುದು ಮುಂದಿರುವ ಆತಂಕ. ಪಕ್ಕದ ಹಾವೇರಿ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲ. ಗೋವಾ ಕೂಡ ಕರೊನಾ ಮುಕ್ತವಾಗಿದೆ. ಆದರೆ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಜಿಲ್ಲೆಯ ಗಡಿಗಳನ್ನು ಮತ್ತಷ್ಟು ಭದ್ರ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಒಬ್ಬರು ಬಂದರೂ ತಮಗೆ ಮಾಹಿತಿ ಬರಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಸೂಚಿಸಿದ್ದಾರೆ. ಸಾಕಷ್ಟು ಚೆಕ್ಪೋಸ್ಟ್ಗಳು, ಸಂಚಾರಿ ತಪಾಸಣೆ ವಾಹನಗಳು ಇದ್ದಾಗ್ಯೂ ಜನರು ಬರುತ್ತಿರುವುದು ನಡೆದೇ ಇದೆ. ಈ ಸಂಬಂಧ ಒಂದೆರಡು ಪ್ರಕರಣಗಳು ದಾಖಲಾಗಿವೆ.
ಸಂಪೂರ್ಣ ಬಂದ್ ಸಾಧ್ಯವಿಲ್ಲ: ಹೊರ ಜಿಲ್ಲೆಗಳ ಸಂಪರ್ಕವನ್ನು ಸಂಪೂರ್ಣ ಬಂದ್ ಮಾಡದ ಪರಿಸ್ಥಿತಿ ಇಲ್ಲ. ಏಕೆಂದರೆ ಅಗತ್ಯ ವಸ್ತುಗಳಿಗೆ ಉತ್ತರ ಕನ್ನಡ ಬೇರೆ ಜಿಲ್ಲೆಗಳನ್ನು ಅವಲಂಬಿಸಿದೆ. ಹಾಲು, ಹಣ್ಣು, ತರಕಾರಿ, ಸಿಲಿಂಡರ್, ಔಷಧ, ಕಟ್ಟಡ ಸಾಮಗ್ರಿಗಳು ಹೀಗೆ ಎಲ್ಲ ಅಗತ್ಯ ಸಾಮಗ್ರಿಗಳಿಗಾಗಿ ಉತ್ತರ ಕನ್ನಡ ಪಕ್ಕದ ಹುಬ್ಬಳ್ಳಿಯನ್ನು ಅವಲಂಬಿಸಿದೆ. ಇದರಿಂದ ಹೊರ ಜಿಲ್ಲೆಗಳ ಸಂಚಾರವನ್ನು ಸಂಪೂರ್ಣ ಲಾಕ್ಡೌನ್ ಮಾಡಲು ಸಾಧ್ಯವಿಲ್ಲ.
ಲಾಕ್ಡೌನ್ ಮುಗಿದರೆ..?: ಜಿಲ್ಲೆಯ ಸಾಕಷ್ಟು ಜನರು ಹೊರ ರಾಜ್ಯ, ಜಿಲ್ಲೆಗಳಲ್ಲಿದ್ದಾರೆ. ಕರೊನಾ ಹಾಟ್ಸ್ಪಾಟ್ಗಳಾದ ಮುಂಬೈ, ಬೆಂಗಳೂರು ಭಾಗದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ತಮ್ಮ ಸ್ವಂತ ಊರಿಗೆ ಬರಲು ಕಾಯುತ್ತಿದ್ದಾರೆ. ಮೇ 3ರ ನಂತರ ಲಾಕ್ಡೌನ್ ತೆರವಾದರೆ ಹೊರ ಊರುಗಳಿಂದ ಸಾಕಷ್ಟು ಜನ ಬರುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿಯೂ ಅವರನ್ನು ನಿಭಾಯಿಸುವುದು ಸವಾಲಾಗಲಿದೆ.
ಲಾಕ್ಡೌನ್ ಓಪನ್ ಆಗಲಿ, ಆಗದೇ ಇರಲಿ. ಜಿಲ್ಲೆಯ ಸುರಕ್ಷತೆಯ ದೃಷ್ಟಿಯಿಂದ ಏನೇನು ಮಾಡಬೇಕು ಎಂಬ ಬಗ್ಗೆ ನಾವು ಯೋಜನೆ ರೂಪಿಸಿದ್ದೇವೆ. ಕೆಲವನ್ನು ಕಾರ್ಯಗತ ಮಾಡಿದ್ದೇವೆ. | ಡಾ. ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ
ಜಿಲ್ಲೆಯ ಎಲ್ಲ ಚೆಕ್ಪೋಸ್ಟ್ಗಳನ್ನು ಬಲವಾಗಿರಿಸಲಾಗಿದೆ. ನಿಯಮ ಮೀರಿದವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ. | ಶಿವ ಪ್ರಕಾಶ ದೇವರಾಜು ಎಸ್ಪಿ, ಉತ್ತರ ಕನ್ನಡ