ಹೊನ್ನಾವರದಲ್ಲಿ ಆಧಾರ್ ತಿದ್ದುಪಡಿಗೆ ಹೆಣಗಾಟ

ವಿಜಯವಾಣಿ ಸುದ್ದಿಜಾಲ ಹೊನ್ನಾವರ: ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ವೃದ್ಧಾಪ್ಯ ವೇತನ ಪಡೆಯುವವರೆಗೆ ಎಲ್ಲ ವ್ಯವಹಾರಗಳಲ್ಲೂ ಆಧಾರ್ ಕಾರ್ಡ್ ಮಹತ್ವದ್ದಾಗಿದೆ. ಆದರೆ, ಸರ್ಕಾರದ ನಿರ್ಲಕ್ಷದಿಂದಾಗಿ ಜನರು ಆಧಾರ್ ಕಾರ್ಡ್ ಪಡೆಯಲು, ತಿದ್ದುಪಡಿ ಮಾಡಿಸಲು ಹಗಲು ರಾತ್ರಿಯೆನ್ನದೇ ಹೆಣಗಾಡುವಂತಾಗಿದೆ.

ಆಧಾರ್ ಕಾರ್ಡ್ ಹೆಸರು ಸರಿಪಡಿಸಲು, ಮೊಬೈಲ್​ಫೋನ್ ನಂಬರ್ ಸೇರಿಸಲು, 15 ವರ್ಷ ಮೇಲ್ಪಟ್ಟ ಮಕ್ಕಳ ಹೊಸ ಆಧಾರ ಕಾರ್ಡ್ ಹಾಗೂ ತಿದ್ದುಪಡಿ ಮಾಡಿಸಲು ತಾಲೂಕು ಅಂಚೆ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದು ಅವ್ಯವಸ್ಥೆಯಾಗಿ ಜನರನ್ನು ಕಾಡುತ್ತಿದೆ. ಬೆಳಗ್ಗೆಯಿಂದ ನೂರಾರು ಜನರು ಮಳೆ, ಬಿಸಿಲೆನ್ನದೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿದೆ. ಗುರುವಾರ ಈ ಸರತಿ ಸಾಲು ಅಂಚೆ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲೂ ಬೆಳೆದು ನಿಂತಿತ್ತು. ಅಂದರೆ ಸುಮಾರು 50 ಮೀಟರ್ ದೂರ ಸರತಿ ಸಾಲಿತ್ತು. ವೃದ್ಧರು, ಮಹಿಳೆಯರು ಸೇರಿ ನೂರಾರು ಜನರು ಹೆದ್ದಾರಿ ಬದಿಯಲ್ಲಿ ಹಲವು ಗಂಟೆಗಳ ಕಾಲ ನಿಲ್ಲಬೇಕಾಯಿತು.

ಆಧಾರ್ ಕಾರ್ಡ್ ಅನ್ನು ನಿಧಾನವಾಗಿ ನೋಂದಾವಣೆ ಮಾಡಲಾಗುತ್ತಿದೆ. ಪ್ರತಿ ನಿತ್ಯ 30 ಕೂಪನ್ ಮಾತ್ರ ನೀಡಿ ನೋಂದಣಿ ಮಾಡಲಾಗುತ್ತಿದೆ ಎಂದು ಸಿಬ್ಬಂದಿ ಉತ್ತರಿಸುತ್ತಾರೆ. ಹೀಗಾಗಿ, ಇಂದು ಕ್ಯೂನಲ್ಲಿ ನಿಂತವರು ತಮ್ಮ ಆಧಾರ್ ಕಾರ್ಡ್ ಸರಿಪಡಿಸಿಕೊಳ್ಳಲು 3 ತಿಂಗಳವರೆಗೂ ಕಾಯಬೇಕಾದ ಪರಿಸ್ಥಿತಿ ತಲೆದೋರಿದೆ. ತಾಲೂಕಿನ ವಿವಿಧೆಡೆ ಕೇಂದ್ರ ತೆರೆದು ಗ್ರಾಮೀಣ ಮಟ್ಟದಲ್ಲಿಯೇ ಇದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿದರೆ ಈ ಸಮಸ್ಯೆ ಸುಲಭವಾಗಿ ಬಗೆಹರಿಯಬಹುದು.

ಈ ಮೊದಲು ಗ್ರಾಮ ಪಂಚಾಯತಿ ಕಚೇರಿ, ತಹಸೀಲ್ದಾರ್ ಕಚೇರಿ, ನಾಡ ಕಚೇರಿ ಸೇರಿ ಗ್ರಾಮೀಣ ಭಾಗದಲ್ಲೂ ಮಾಡಿಕೊಡುವ ವ್ಯವಸ್ಥೆಯಿತ್ತು. ಗ್ರಾಮೀಣ ಭಾಗದಲ್ಲಿ ಆಧಾರ್ ಕಾರ್ಡ್ ಮಾಡಿಕೊಡುವ ವೆಬ್ ಸೈಟ್ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಈ ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿಗೆ ಫಾಮ್ರ್ ನೀಡಲಾಗುತ್ತಿದೆ. ಈ ಹಿಂದೆ ನೆಮ್ಮದಿ ಕೇಂದ್ರದಲ್ಲಿ ಚಾಲ್ತಿಯಲ್ಲಿದ್ದ ಆಧಾರ್ ಕಾರ್ಯ ಸ್ಥಗಿತಗೊಂಡಿದೆ. ನೆಮ್ಮದಿ ಕೇಂದ್ರಕ್ಕೆ ತೆರಳಿದರೆ ಅಂಚೆ ಕಚೇರಿಗೆ ಹೋಗುವಂತೆ ಸೂಚಿಸಲಾಗುತ್ತಿದೆ.

ಆಧಾರ್ ಕಾರ್ಡ್ ಸಮಸ್ಯೆ ಅಷ್ಟೇ ಅಲ್ಲದೆ, ಪ್ರಧಾನಿ ಸಮ್ಮಾನ್ ಯೋಜನೆ, ಇ- ಉತಾರ, ಸಕಾಲ ಯೋಜನೆಯ ಫಲಾನುಭವಿಗಳೂ ಕಷ್ಟಪಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ತಮ್ಮ ಕೃಷಿ ಚಟುವಟಿಕೆ ಬದಿಗೊತ್ತಿ ಊಟ ತಿಂಡಿ ಬಿಟ್ಟು ಸರತಿ ಸಾಲಿನಲ್ಲಿ ನಿಂತು ದಿನ ಕಳೆಯಬೇಕಾಗಿದೆ. ಬೆಳಗ್ಗೆ 6 ಗಂಟೆಗೆ ಬಂದು ಕಾಯುತ್ತಾರೆ. ಜನರ ಈ ಸಂಕಷ್ಟವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ.

ಆಧಾರ್ ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದ ಸಲಕರಣೆ ಕೊರತೆಯಿದೆ. ಗ್ರಾಮ ಪಂಚಾಯತಿ ವ್ಯಾಪಿಯಲ್ಲಿ ನಡೆಸಲಾಗುತ್ತಿದ್ದ ಆಧಾರ್ ಕಾರ್ಡ್ ತಿದ್ದುಪಡಿ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಅಂಚೆ ಕಚೇರಿಯಲ್ಲಿ ನಡೆಯುವ ಆಧಾರ್ ತಿದ್ದುಪಡಿಗೆ ಹೆಚ್ಚಿನ ಜನದಟ್ಟಣೆಯಾಗುತ್ತಿದೆ. ಇನ್ನು ಮುಂದೆ ತಹಸೀಲ್ದಾರ್ ಕಚೇರಿಯಲ್ಲಿ ಆಧಾರ್ ತಿದ್ದುಪಡಿಗಾಗಿ ಕೌಂಟರ್ ತೆರೆದು ಹೆಚ್ಚಿನ ಸಿಬ್ಬಂದಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. | ವಿ.ಆರ್.ಗೌಡ ಹೊನ್ನಾವರ ತಹಸೀಲ್ದಾರ್

ನನ್ನ ಮಗ ಮುಂಡಗೋಡ ನವೋದಯದಲ್ಲಿ ಅಧ್ಯಯನ ಮಾಡುತ್ತಿದ್ದು, ಆಧಾರ್ ಕಾರ್ಡ್ ನಲ್ಲಿ ತಿದ್ದಪಡಿ ಆಗಬೇಕಿದೆ. ನನಗೆ ಈ ಕೆಲಸ ಬೇಗ ಆಗುತ್ತದೆ ಎನ್ನುವ ನಂಬಿಕೆ ಇಲ್ಲ. ಇಂದು ಸಾಲಿನಲ್ಲಿ ಬಂದು ನಿಂತಿದ್ದೇನೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯವಸ್ಥೆ ಮಾಡಿದರೆ ಕಾರ್ಡ್ ಪಡೆಯುವುದು ಸುಲಭವಾಗುತ್ತಿತ್ತು.| ರಮೇಶ ನಾಯ್ಕ ಸ್ಥಳೀಯರು

Leave a Reply

Your email address will not be published. Required fields are marked *