
ನಾಗಮಂಗಲ: ತಾಲೂಕಿನ ಚಿಣ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಭಾಗಿತ್ವದಲ್ಲಿ ಸಮಾಜ ಸೇವಕ ಫೈಟರ್‌ರವಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಹೊಣಕೆರೆ ಹೋಬಳಿಯ 2 ಸಾವಿರಕ್ಕೂ ಹೆಚ್ಚು ಜನರು ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರು.
ಶಿಬಿರವನ್ನು ಉದ್ಘಾಟಿಸಿದ ಸಮಾಜ ಸೇವಕ ಫೈಟರ್‌ರವಿ ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯ ಸೇವೆ ನೀಡುತ್ತಿರುವ ನನಗೆ ಜೀವನದಲ್ಲಿ ನೆಮ್ಮದಿ ಸಿಕ್ಕಂತಾಗಿದೆ. ಹುಟ್ಟಿದ ನೆಲದ ಋಣ ತೀರಿಸುವ ಸಲುವಾಗಿ ಮಾಡುತ್ತಿರುವ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತೇನೆ. ಬೇರೆಯವರಂತೆ ಯಾವುದೋ ಒಂದು ಸಮಯಕ್ಕೆ ನಾನು ಸೀಮಿತವಾಗುವುದಿಲ್ಲ. ದೇವರ ಮೇಲೆ ಪ್ರಮಾಣ ಮಾಡಿಹೇಳುತ್ತೇನೆ ಇಂಥ ಶಿಬಿರಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ನಿರಂತರವಾಗಿ ಆಯೋಜಿಸಿ ತಾಲೂಕಿನ ಎಲ್ಲ ಜನರ ಆರೋಗ್ಯ ಕಾಪಾಡುತ್ತೇನೆ ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಸತ್‌ಕೀರ್ತಿ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿರುವ ಸಮಾಜ ಸೇವಕ ಫೈಟರ್ ರವಿ ಅವರ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಿತ್ಯ ಸಹಸ್ರಾರು ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ. ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವ ಜನರಿಗೆ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸಮಾಜ ಸೇವಕ ಫೈಟರ್ ರವಿ ಮತ್ತು ಆದಿಚುಂಚನಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಎಲ್ಲ ಬಗೆಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ಶಿಬಿರದಲ್ಲಿ ನೇತ್ರ, ಹೃದಯ ಸಂಬಂಧಿ ಮತ್ತು ಸ್ತ್ರೀ ರೋಗ ಸಮಸ್ಯೆ ಕುರಿತು ಆದಿಚುಂಚನಗಿರಿ ಆಸ್ಪತ್ರೆಯ 15ಕ್ಕೂ ಹೆಚ್ಚು ವಿಭಾಗಗಳ ತಜ್ಞ ವೈದ್ಯರ ತಂಡದಿಂದ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ, ಸಲಹೆ ನೀಡಿದ ಬಳಿಕ ಸ್ಥಳದಲ್ಲೇ ಔಷಧ ಕಿಟ್ ವಿತರಿಸಲಾಯಿತು. ಕಣ್ಣಿನ ಸಮಸ್ಯೆಯಿರುವ ಜನರಿಗೆ ತಪಾಸಣೆ ನಡೆಸಿ ಅವಶ್ಯಕತೆಯಿರುವ 280 ಜನರಿಗೆ ಎರಡು ದಿನದಲ್ಲಿ ಉಚಿತವಾಗಿ ಕನ್ನಡಕ ನೀಡುವ ವ್ಯವಸ್ಥೆ ಮಾಡಲಾಯಿತು. ಶಿಬಿರದಲ್ಲಿ 25ಕ್ಕೂ ಹೆಚ್ಚು ಜನರು ಉಚಿತವಾಗಿ ರಕ್ತದಾನ ಮಾಡಿದರು.
ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ 2200ಕ್ಕೂ ಹೆಚ್ಚು ಜನರಲ್ಲಿ 80 ರೋಗಿಗಳಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮತ್ತು 173 ರೋಗಿಗಳಿಗೆ ಕಿಡ್ನಿ, ಗರ್ಭಕೋಶ ಸೇರಿದಂತೆ ವಿವಿಧ ಬಗೆಯ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ತಜ್ಞ ವೈದ್ಯರು ತಿಳಿಸಿದ್ದು, ಎಲ್ಲವನ್ನೂ ಸಂಪೂರ್ಣ ಉಚಿತವಾಗಿ ಮಾಡಿಸಿಕೊಡಲಾಗುವುದೆಂದು ಫೈಟರ್‌ರವಿ ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಹೊಣಕೆರೆ ಹೋಬಳಿ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಫೈಟರ್‌ರವಿ ಪತ್ನಿ ಕವಿತಾ ಮಲ್ಲಿಕಾರ್ಜುನ್, ಪುತ್ರಿ ರಾಘವಿ, ಆದಿಚುಂಚನಗಿರಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮೇಂದ್ರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್, ಮುಖಂಡರಾದ ಅರ್ಜುನ್, ಪವನ್ ಮತ್ತು ಸೋಮು ಇತರರು ಇದ್ದರು.