ಹೊಟ್ಟೆ ಪಾಡಿಗೆ ಹೊರಟರು ಪರ ಊರಿಗೆ

ಶಿರಹಟ್ಟಿಹೊಲದಲ್ಲಿ ಬೆಳೆ ಇಲ್ಲ. ದುಡಿಯುವ ಕೈಗಳಿಗೆ ಕೆಲಸವಿಲ್ಲ. ಸರ್ಕಾರದ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನಗೊಂಡಿಲ್ಲ. ಇದೆಲ್ಲದರಿಂದ ರೋಸಿಹೋದ ಗ್ರಾಮೀಣ ಭಾಗದ ಜನ ಉದ್ಯೋಗ ಅರಸಿ ದೂರದ ಊರುಗಳಿಗೆ ಗುಳೆ ಹೊರಟಿದ್ದಾರೆ.

ತಾಲೂಕಿನ ಮಜ್ಜೂರ, ಜಲ್ಲಿಗೇರಿ, ಕುಂದ್ರಳ್ಳಿ, ಹರದಗಟ್ಟಿ, ಸೇವಾ ನಗರ ಸೇರಿ ವಿವಿಧ ತಾಂಡಾ ಹಾಗೂ ಹಳ್ಳಿಗಳ ಜನರು ಗೋವಾ, ಪುತ್ತೂರು, ಮಂಗಳೂರು, ದಾಂಡೇಲಿ, ಮುಂಬಯಿಗೆ ಹೊರಟಿದ್ದಾರೆ. ವಯಸ್ಸಾದ ತಂದೆ-ತಾಯಿ ಹಾಗೂ ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಉಳಿದವರೆಲ್ಲ ಗಂಟು-ಮೂಟೆ ಕಟ್ಟಿಕೊಂಡು ಪ್ರಯಾಣ ಬೆಳಸುತ್ತಿದ್ದಾರೆ. ಕೆಲವೆಡೆ ಮನೆ ಮಂದಿಯೆಲ್ಲ ಗುಳೆ ಹೋಗಿದ್ದರಿಂದ ಮನೆಗಳಿಗೆ ಬೀಗ ಜಡಿಯಲಾಗಿದೆ.

ಭರವಸೆ ಮೂಡಿಸದ ‘ಖಾತ್ರಿ’ ಕೆಲಸ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ವಿಳಂಬವೇ ಜನ ಗುಳೆ ಹೋಗಲು ಪ್ರಮುಖ ಕಾರಣ ಎನ್ನುತ್ತಾರೆ ಮ್ಜಜೂರು ಗ್ರಾಪಂ ವ್ಯಾಪ್ತಿಯ ಜನ. ಮಜ್ಜೂರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಮಾಡಿದ ಕೆಲಸಗಳಿಗೆ ಹಣ ಸಂದಾಯವಾಗಿಲ್ಲ. ದುಡಿದ ಕಾರ್ವಿುಕರ ಖಾತೆಗೆ ಕೂಲಿ ಹಣ ಜಮಾ ಆಗಿಲ್ಲ. ಮುಖ್ಯವಾಗಿ ಉದ್ಯೋಗ ಖಾತ್ರಿಯಡಿ ನೀಡುವ 250 ಕೂಲಿ ಹಣ ಕುಟುಂಬದ ನಿರ್ವಹಣೆಗೆ ಸಾಕಾಗುವುದಿಲ್ಲ. ದೂರದ ಊರುಗಳಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಕೂಲಿ ಪಡೆಯಬಹುದು ಎನ್ನುವ ಲೆಕ್ಕಾಚಾರ ಗ್ರಾಮೀಣ ಭಾಗದ ಕಾರ್ವಿುಕರಲ್ಲಿ ಮೂಡಿದೆ. ಹೀಗಾಗಿ ದುಡಿಮೆ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಹೋಗುವುದು ಸಹಜ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ವಸಂತ ಲಮಾಣಿ.

ಆಸರೆಗಾಗಿ ಹರಸಾಹಸ: ಗ್ರಾಮೀಣ ಪ್ರದೇಶದಲ್ಲಿ ವಸತಿ ಭಾಗ್ಯ ಯೋಜನೆ ಸಮರ್ಪಕ ಜಾರಿಯಾಗದ ಕಾರಣ ಬಹುತೇಕ ಬಡ ಕುಟುಂಬಗಳು ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿವೆ. ಕಳೆದ ವರ್ಷ ಆಶ್ರಯ ಯೋಜನೆಯಡಿ ನಿರ್ವಿುಸಿಕೊಂಡ 70 ಮನೆಗಳ ಜಿಪಿಎಸ್ ಅಳವಡಿಸಿ, ಎನ್​ಎಂಆರ್ ಮಾಡಿ ಕಳಿಸಿದ್ದರೂ ವಸತಿ ನಿಗಮದಿಂದ ಮನೆ ಕಟ್ಟಿಕೊಂಡ ಫಲಾನುಭವಿಗಳ ಹಣ ಸಂದಾಯವಾಗಿಲ್ಲ, ಕೆಲವೊಂದು ಮನೆಗಳು ಅಪೂರ್ಣಗೊಂಡು ಮುಂದಿನ ಕೆಲಸಕ್ಕೆ ಅನುದಾನವಿಲ್ಲದೆ ಫಲಾನುಭವಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹೀಗಾಗಿ ದೊಡ್ಡ ನಗರಗಳಲ್ಲಿ ದುಡಿಮೆ ಮಾಡಿ ಆಸರೆ ಕಲ್ಪಿಸಿಕೊಳ್ಳಬೇಕು ಎನ್ನುವ ಮಹದಾಸೆಯೂ ಗುಳೆ ಹೋಗಲು ಕಾರಣವಾಗುತ್ತಿದೆ.

ಆಮೆಗತಿಯಲ್ಲಿ ಬರ ಕಾಮಗಾರಿ: ಸರ್ಕಾರ ಶಿರಹಟ್ಟಿಯನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಸಭೆ ನಡೆಸಿ, ಎಲ್ಲಿಯೂ ಜನರು ಉದ್ಯೋಗಕ್ಕಾಗಿ ಗುಳೆ ಹೋಗಬಾರದು. ಅವರ ಕೈಗೆ ಕೆಲಸ ನೀಡಿ ವಾರಕ್ಕೊಂದು ಸಲ ಕೂಲಿ ಹಣ ನೀಡಬೇಕು. ಈ ಯೋಜನಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ. ಜಿಪಂ ಬೇಡಿಕೆಯಂತೆ ಸರ್ಕಾರ ಹಣ ಬಿಡುಗಡೆ ಮಾಡಿದೆ ಎನ್ನುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೈ ಕೊಟ್ಟಿದ್ದು ದಿನ ಕಳೆದಂತೆ ಜನರು ಹೆಚ್ಚಿನ ಪ್ರಮಾಣದಲ್ಲಿ ಗುಳೆ ಹೊರಟಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ, ಕೃಷಿ ಹಾಗೂ ಅರಣ್ಯ ಇಲಾಖೆಗಳಿಗೆ ಸಂಬಂಧಿಸಿದಂತೆ ರೈತರ ಹೊಲಗಳಲ್ಲಿ ಸಸಿ ನೆಡುವುದು, ಕೃಷಿ ಹೊಂಡ ನಿರ್ವಣ, ಕೆರೆ ನಿರ್ವಣದಂತಹ ಕೆಲಸಗಳ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಹಳ್ಳಿಗಳಲ್ಲಿ ಕೆರೆ, ಬಾಂದಾರ ಹೂಳೆತ್ತೆವುದು, ಜಾನುವಾರಗಳಿಗೆ ಕುಡಿಯುವ ನೀರಿನ ತೊಟ್ಟಿ, ಅಡ್ಡ ಚರಂಡಿ, ಗಟಾರಗಳ ನಿರ್ವಣ, ರಸ್ತೆ ಅಭಿವೃದ್ಧಿ ಸೇರಿ ಒಟ್ಟು 77 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ತಾಪಂಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಬೇಕಿದೆ. | ಜಿ.ಎನ್.ಓಲೇಕಾರ ಪಿಡಿಒ

ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಇದುವರೆಗೆ 4 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. ಹೆಚ್ಚುವರಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಕೆಲ ತಾಂಡಾಗಳಲ್ಲಿ ಸಮುದಾಯ ಕಾಮಗಾರಿ ನೀಡಲಾಗಿದೆ. ಡಿ. 3ರ ನಂತರ ಎನ್​ಆರ್​ಇಜಿ ಅನುದಾನ ಬರದ ಕಾರಣ ಕೂಲಿ ಕಾರ್ವಿುಕರಿಗೆ ಹಣ ಪಾವತಿಯಾಗಿಲ್ಲ. | ಆರ್.ವೈ. ಗುರಿಕಾರ