ಹೊಗೆಯಲ್ಲರಳಿದ ಕಲೆ!

ಹೊಗೆ ಎಂದರೆ ಮುಖ ಕಿವುಚುವವರೇ ಹೆಚ್ಚು. ಅಂತಹ ಹೊಗೆಯನ್ನೇ ಬಳಸಿಕೊಂಡು ಸುಂದರವಾದ ಕಲಾಕೃತಿಗಳನ್ನು ರಚಿಸುವ ಮೂಲಕ ಕಲಾ ಲೋಕವೇ ನಿಬ್ಬೆರಗಾಗುವಂತೆ ಮಾಡಿದ್ದಾರೆ ಹುಬ್ಬಳ್ಳಿಯ ಕಲಾವಿದ ಮಂಜುನಾಥ. ಇವರೀಗ ದೇಶದ ಮೊದಲ ಸ್ಮೋಕ್ ಆರ್ಟಿಸ್ಟ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.


| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

ಹೊಗೆ ಎಂದ ಕೂಡಲೇ ಬೆಂಕಿಯಿಂದ ಬರುವ ಹೊಗೆ, ಸಿಗರೇಟ್ ಹೊಗೆ, ಸೊಳ್ಳೆ ನಿಯಂತ್ರಣಕ್ಕೆ ಬಳಸುವ ಫಾಗಿಂಗ್ ಹೊಗೆಗಳು ನೆನಪಿಗೆ ಬರುತ್ತವೆ. ಅಂದರೆ, ‘ಹೊಗೆ’ ಎಂದಾಕ್ಷಣ ನಕಾರಾತ್ಮಕ ಭಾವನೆಯೇ ಬರುತ್ತದೆ. ಆದರೆ ಅಂತಹ ಹೊಗೆಯಲ್ಲೇ ಸುಂದರ ಚಿತ್ರಗಳು ಮೂಡುವಂತೆ ಮಾಡಿದ್ದಾರೆ ಧಾರವಾಡದ ಹೊಗೆ ಕಲಾವಿದ (ಸ್ಮೋಕ್ ಆರ್ಟಿಸ್ಟ್) ಮಂಜುನಾಥ ಬಾರಗೇರ. ಈ ಮೂಲಕ ದೇಶದ ಮೊದಲ ‘ಹೊಗೆ ಕಲಾವಿದ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಹೊಗೆ ಮೂಲಕವೇ ಸುಂದರ ಕಲಾಕೃತಿ ಬಿಡಿಸುವುದನ್ನು ಸಂಶೋಧಿಸಿದ ಮಂಜುನಾಥ ಇಂದು ನಾಡಿನಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಡ್ರಾಯಿಂಗ್ ಶೀಟ್ ಅಥವಾ ಕ್ಯಾನ್ವಾಸ್ ಮೇಲೆ ಲಾಟೀನ್ ಹೊಗೆ ಬಿಟ್ಟು ಅದರಲ್ಲಿ ಕಡ್ಡಿ ಅಥವಾ ಕೋಳಿ ಪುಕ್ಕದ ಮೂಲಕ ತಮಗಿಷ್ಟವಾದ ಚಿತ್ರವನ್ನು ಕ್ಷಣಾರ್ಧದಲ್ಲಿ ಬಿಡಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಡಾ. ವಿಜಯ ಸಂಕೇಶ್ವರ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸ್ವಾಮಿ ವಿವೇಕಾನಂದ, ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಕುವೆಂಪು, ದ.ರಾ. ಬೇಂದ್ರೆ, ಡಾ. ರಾಜಕುಮಾರ್ ಸೇರಿದಂತೆ ಹಲವು ಸಾಧಕರ ಚಿತ್ರಗಳನ್ನು ಹೊಗೆಯಲ್ಲಿ ಬಿಡಿಸಿದ್ದಾರೆ. ಈವರೆಗೆ 1500ಕ್ಕೂ ಹೆಚ್ಚು ಹೊಗೆ ಕಲಾಕೃತಿಗಳನ್ನು ರಚಿಸಿದ್ದಾರೆ. ಉಡುಗೊರೆ ಕೊಡುವ ಸಲುವಾಗಿ ಕಲಾಕೃತಿಗಳಿಗೆ ಭಾರಿ ಡಿಮಾಂಡ್ ಕೂಡ ಇದೆ. ಈ ಕಲಾಕೃತಿ ಅಲ್ಲದೇ, ಮಂಜುನಾಥ ಅವರು, ಪೇಂಟಿಂಗ್, ರಂಗೋಲಿ, ಪೇಪರ್ ಕಟಿಂಗ್ ಕಲೆಗಳನ್ನೂ ಬಲ್ಲರು. ‘ಭಾರತೀಯ ಸಂಸ್ಕೃತಿ ಬಿಂಬಿಸುವ ಕಲೆ ಪ್ರಚಾರ ಮಾಡಬೇಕಿದೆ. ಹಾಗಾಗಿ, ಹಂಪಿ ಮಂಟಪ, ಸಂಸತ್ ಭವನ, ವಿಧಾನಸೌಧ, ಹೈಕೋರ್ಟ್, ಮೈಸೂರು ಅರಮನೆ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳನ್ನು ರಚಿಸಿದ್ದೇನೆ. ಕಲೆಯ ಮೂಲಕ ನೀರು, ಸ್ವಚ್ಛತೆ, ಪರಿಸರ ಜಾಗೃತಿ ಮೂಡಿಸುವ ಉದ್ದೇಶವಿದೆ. ಮಕ್ಕಳು ಮೊಬೈಲ್ ಬಿಟ್ಟು ಕಲೆಯಲ್ಲಿ ತೊಡಗುವಂತೆ ಮಾಡಬೇಕಿದೆ’ ಎನ್ನುತ್ತಾರೆ ಮಂಜುನಾಥ.

ಚೆನ್ನೈ, ಹುಬ್ಬಳ್ಳಿ- ಧಾರವಾಡ, ಉಡುಪಿ, ದಾವಣಗೆರೆ, ವಿಜಯಪುರ, ಬೆಳಗಾವಿ ಸೇರಿದಂತೆ ಹಲವೆಡೆ ಈಗಾಗಲೇ ಲೈವ್ ಶೋ ಮಾಡಿರುವ ಮಂಜುನಾಥ ಇನ್ನೂ ಹೆಚ್ಚು ಲೈವ್ ಶೋ ಮಾಡುವ ಗುರಿ ಹೊಂದಿದ್ದಾರೆ. ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್’ನಲ್ಲಿ ಇವರ ಸಾಧನೆ ದಾಖಲಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ‘ಯೂನಿವರ್ಸಲ್ ಅಚೀವರ್ಸ್ ವರ್ಲ್ಡ್ ಬುಕ್ ರೆಕಾರ್ಡ್’ನಲ್ಲೂ ಹೆಸರು ದಾಖಲಾಗಿದೆ.

ಈ ಕಲೆ ಹುಟ್ಟಿದ್ದೇ ವಿಸ್ಮಯ

ಮಂಜು ಚಿಕ್ಕವರಿದ್ದಾಗ ಒಂದು ರಾತ್ರಿ ವಿದ್ಯುತ್ ಕೈಕೊಟ್ಟಾಗ ಮನೆಯಲ್ಲಿ ಕ್ಯಾಂಡಲ್ ಹಚ್ಚಿ ಗೋಡೆ ಪಕ್ಕ ಇಟ್ಟಿದ್ದರು. ಕೆಲ ಹೊತ್ತಿನ ಬಳಿಕ ಹೊಗೆಯಿಂದಾಗಿ ಗೋಡೆ ಕಪ್ಪಾಗಿತ್ತು. ಅದರಲ್ಲಿ ಕೈಯಾಡಿಸಿದಾಗ ಸುಂದರ ಕಲೆ ಅನಾವರಣ ಗೊಂಡಿತ್ತು. ಕೂಡಲೇ ಇವರು ಹೊಗೆ ಕಲಾಕೃತಿಗೆ ಮುಂದಾದರು. ಬೆಂಕಿ ಕಡ್ಡಿ, ಮೊಳೆ, ಪಿನ್… ಹೀಗೆ ಕೈಗೆ ಸಿಕ್ಕ ವಸ್ತುಗಳಿಂದ ಚಿತ್ರ ಬಿಡಿಸಿದರು. ಅಲ್ಲಿಂದಲೇ ಅವರ ಹೊಗೆ ಕಲೆ ರೂಪು ಪಡೆಯಿತು.

Leave a Reply

Your email address will not be published. Required fields are marked *