ಹೊಂದಾಣಿಕೆ ಇದ್ದರೆ ಮಾತ್ರ ಗೆಲುವು

ಶಿವಮೊಗ್ಗ: ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಹೊಂದಾಣಿಕೆಯಿಂದ ಚುನಾವಣೆ ನಡೆಸದಿದ್ದರೆ ಬಿಜೆಪಿ ಅಭ್ಯರ್ಥಿ ಗೆಲುವು ಸುಲಭವಾಗುತ್ತದೆ ಎಂದು ಲೋಕಸಭೆ ಸದಸ್ಯ ಡಿ.ಕೆ.ಸುರೇಶ್ ಹೇಳಿದರು.

ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಎರಡೂ ಪಕ್ಷಗಳ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕಿತ್ತಾಡಿಕೊಳ್ಳದೆ ಒಟ್ಟಾಗಿ ಮತಯಾಚನೆಗೆ ತೆರಳಬೇಕು. ಇಬ್ಬರು ಒಗ್ಗಟ್ಟಾಗಿ ಸಾಗುವುದರಿಂದ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಬಹುದು ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರು ಯುವ ಮತದಾರರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತಪ್ಪಾಗಿ ಅರಿತು ದಾರಿ ತಪ್ಪಿರುವ ಯುವ ಜನತೆಯ ತಿದ್ದಿ ಸರಿಪಡಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಯುವಜನತೆ ಸೆಳೆಯುವುದರಿಂದ ಹೆಚ್ಚಿನ ಮತದಾರರನ್ನು ತಲುಪಲು ಸಾಧ್ಯ. ಪಕ್ಷದಲ್ಲಿ ಎಲ್ಲರೂ ಕಾರ್ಯಕರ್ತರೇ. ಎಲ್ಲಿಂದಲೋ ಬಂದ ಮುಖಂಡರ ಮಾತನ್ನು ನಾವೇಕೆ ಕೇಳಬೇಕೆಂಬ ಪ್ರಶ್ನೆ ಬೇಡ. ಪಕ್ಷದಲ್ಲಿ ಎಲ್ಲರೂ ಕೈಜೋಡಿಸಿ ಶ್ರಮಿಸಿದರೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು ಎಂದು ಹೇಳಿದರು.

ಸಚಿವ ಡಿ.ಸಿ.ತಮ್ಮಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಗಡಿ ಶಾಸಕ ಎ.ಮಂಜುನಾಥ್ ಮತ್ತಿತರರಿದ್ದರು.

ಮೈತ್ರಿ ಅನಿವಾರ್ಯ: ರಾಜ್ಯದಲ್ಲಿ ಯಾವುದೇ ಒಂದು ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಸಾಧ್ಯತೆ ಕಡಿಮೆ ಇರುವುದರಿಂದ ಮುಂದಿನ ವರ್ಷಗಳಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯುವ ಅನಿವಾರ್ಯತೆ ಇದೆ ಎಂದು ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ಹೊಂದಾಣಿಕೆ ಕೊರತೆಯಿಂದ ಬೇರೆ ಪಕ್ಷ ಗೆದ್ದರೆ ಅವರ ಮನೆ ಬಾಗಿಲಲ್ಲಿ ಕಾಯಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಒಟ್ಟಾಗಬೇಕು. ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಮಧು ಗೆಲ್ಲಿಸಲು ಸಾಧ್ಯ ಎಂದು ತಿಳಿಸಿದರು.

Leave a Reply

Your email address will not be published. Required fields are marked *