ಹೊಂಡದ ಬದಿಯಲ್ಲಿ ಪ್ರಯಾಸದ ಪ್ರಯಾಣ

ಹಿರೇಕೆರೂರ: ತಾಲೂಕಿನ ಎಂ.ಕೆ. ಯತ್ತಿನಹಳ್ಳಿ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯ ಹೊಂಡಕ್ಕೆ ಹತ್ತಿಕೊಂಡಿರುವ ರಸ್ತೆಯ ತಿರುವು ಜೀವಕ್ಕೆ ಸಂಚಕಾರ ತಂದೊಡ್ಡುವ ಸ್ಥಿತಿಯಲ್ಲಿದೆ. ಹೊಂಡಕ್ಕೆ ತಡೆಗೋಡೆ, ತಂತಿ ಬೇಲಿ ಹಾಕದ ಕಾರಣ ವಾಹನ ಸವಾರರು ಅಪಾಯಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿದೆ.

ತಾಲೂಕಿನ ಎಂ.ಕೆ. ಯತ್ತಿನಹಳ್ಳಿ ಮಾರ್ಗವಾಗಿ ಅಬಲೂರು ಸೇರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯಲ್ಲಿ ಹೊಂಡಕ್ಕೆ ಹತ್ತಿಕೊಂಡೇ ತಿರುವು ಇದೆ. ಇದು ವಾಹನ ಚಾಲಕರಿಗೆ ಗೊಂದಲ ಉಂಟು ಮಾಡುತ್ತಿದೆ.

ನಿತ್ಯ ಶಾಲೆ- ಕಾಲೇಜ್​ಗಳಿಗೆ ತೆರಳುವ ಮಕ್ಕಳು ಸೇರಿ ನೂರಾರು ಸಾರ್ವಜನಿಕರು ದೈನಂದಿನ ಕೆಲಸಗಳಿಗೆ ಬೈಕ್, ಬಸ್, ಇತರ ವಾಹನಗಳಲ್ಲಿ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಯಾವಾಗ ಅನಾಹುತ ಸಂಭವಿಸುತ್ತದೋ ಎಂಬ ಭೀತಿಯಲ್ಲೇ ಇಲ್ಲಿ ಪ್ರಯಾಣಿಸಬೇಕಿದೆ.

ಈ ಹೊಂಡ ಅಂದಾಜು 15 ಅಡಿ ಆಳವಿದ್ದು, ರಸ್ತೆ ಮಾರ್ಗ ತೀವ್ರ ತಿರುವಿನಿಂದ ಕೂಡಿದೆ. ಚಾಲಕರು ಸ್ವಲ್ಪ ಮೈಮರೆತರೂ ಅಪಾಯ ತಪ್ಪಿದ್ದಲ್ಲ. ತಿರುವು ಇರುವ ಬಗ್ಗೆ ರಸ್ತೆ ಪಕ್ಕ ಸೂಚನಾಫಲಕವನ್ನೂ ಅಳವಡಿಸಿಲ್ಲ. ಹೊಂಡಕ್ಕೆ ತಡೆಗೋಡೆ ಇರದ ಕಾರಣ ಕೆರೆ ಇರುವುದು ಕೂಡ ಗೋಚರಿಸುವುದಿಲ್ಲ, ವೇಗವಾಗಿ ಬಂದರೆ ಚಾಲಕರಿಗೆ ಗೊಂದಲ ಉಂಟಾಗಿ ಅಪಘಾತಗಳು ಸಂಭವಿಸುವುದು ನಿಶ್ಚಿತ.

ಕೂಡಲೆ ತಿರುವು ಇರುವ ಬಗ್ಗೆ ಲೋಕೋಪಯೋಗಿ ಇಲಾಖೆ ಸೂಚನಾಫಲಕ ಅಳವಡಿಸಬೇಕು ಹಾಗೂ ಹೊಂಡಕ್ಕೆ ತಡೆಗೋಡೆ ನಿರ್ವಿುಸಿ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಿರೇಕೆರೂರ ತಾಲೂಕಿನ ಎಂ.ಕೆ. ಯತ್ತಿನಹಳ್ಳಿ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹೊಂಡದ ಅಭಿವೃದ್ಧಿ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೆ ಕಾಮಗಾರಿ ಕೈಗೊಳ್ಳಲಾಗುವುದು.
| ಎಸ್.ವಿ. ಪುರಾಣಿಕ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ

ಈ ಹಿಂದೆ ರಸ್ತೆ ನಿರ್ವಣಕ್ಕಾಗಿ ಪ್ರಸ್ತಾವನೆ ಬಂದ ಸಂದರ್ಭದಲ್ಲಿ ಈ ತಿರುವನ್ನು ಬಿಟ್ಟು, ಪರ್ಯಾಯ ಮಾರ್ಗದಲ್ಲಿ ರಸ್ತೆ ನಿರ್ವಿುಸುವಂತೆ ಅಥವಾ ಹೊಂಡದ ಏರಿಯ ಮೇಲೆ ತಡೆಗೋಡೆ ನಿರ್ವಿುಸಿ, ತಿರುವು ಇರುವ ಬಗ್ಗೆ ಸೂಚನಾಫಲಕ ಅಳವಡಿಸುವಂತೆ ಹಿಂದಿನ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರಪ್ಪ ಅವರಿಗೆ ಸೂಚಿಸಲಾಗಿತ್ತು. ಅವರು ಸರಿಪಡಿಸಲಾಗುವುದು ಎಂದು ತಿಳಿಸಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ.
| ರಾಜು ಬಣಕಾರ ತಾಪಂ ಸದಸ್ಯ

Leave a Reply

Your email address will not be published. Required fields are marked *