ಹೊಂಗ್ಯಮ್ಮ, ಮಲ್ಲಿಗೆಮ್ಮ ರಥೋತ್ಸವ

ಅರಸೀಕೆರೆ: ತಾಲೂಕಿನ ಬೈರಾಂಬುಧಿ ಸೇರಿದಂತೆ ಸುತ್ತಲಿನ ಹನ್ನೆರಡು ಹಳ್ಳಿಗಳ ಗ್ರಾಮದೇವತೆಗಳಾದ ಹೊಂಗ್ಯಮ್ಮ, ಮಲ್ಲಿಗೆಮ್ಮನವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಬೆಳಗ್ಗೆ ನೆರವೇರಿತು.

ಇದಕ್ಕೂ ಮುನ್ನ ಗ್ರಾಮದ ತೇರು ಬೀದಿ ಆವರಣದಲ್ಲಿರುವ ಹೊಂಗ್ಯಮ್ಮದೇವಿಯವರ ಮೂಲಸ್ಥಾನದಲ್ಲಿ ಗುರುವಾರ ರಾತ್ರಿ ಮಲ್ಲಿಗೆಮ್ಮ, ಹೊಂಗ್ಯಮ್ಮನವರ ಕೆಂಡ ಸೇವೆ, ಚಲುವರಾಯಸ್ವಾಮಿಯ ಅಶ್ವಾರೂಢ ಮುತ್ತಿನ ಪಲ್ಲಕ್ಕಿ ಉತ್ಸವ, ನಂದಿ ವಾಹನೋತ್ಸವ ಹುಲಿ ವಾಹನೋತ್ಸವ ರಾತ್ರಿಯಿಡಿ ಜರುಗಿದವು. ಶುಕ್ರವಾರ ಬೆಳಗ್ಗೆ ಸೂರ್ಯೋದಯಕ್ಕೆ ಸರಿಯಾಗಿ ಚಲುವರಾಯಸ್ವಾಮಿ ಹಾಗೂ ಧೂತರಾಯಸ್ವಾಮಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾತ್ರೆಯಲ್ಲಿ ನೆರೆದಿದ್ದ ಅಪಾರ ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.

ಭೈರಾಂಬುಧಿ, ಕಸ್ತೂರಿಕೊಪ್ಪಲು, ಸಂಕೋಡನಹಳ್ಳಿ, ಕಲ್ಲನಾಯ್ಕನಹಳ್ಳಿ, ಬೆಟ್ಟದಪುರ, ಹಿರಿಯೂರು, ಬಿಸಲೇಹಳ್ಳಿ, ಚಿಕ್ಕೂರು, ಮಾದನಳ್ಳಿ, ಸಿಂಗನಳ್ಳಿ, ಮಾವುತನಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಭಕ್ತರು ಪಾಲ್ಗೊಂಡಿದ್ದರು. ಕಳೆದ ಭಾನುವಾರದಿಂದ ಆರಂಭಗೊಂಡಿದ್ದ ರಥೋತ್ಸವದ ಪೂಜಾ ಕೈಂಕರ್ಯ ಶುಕ್ರವಾರ ವಿಧ್ಯುಕ್ತವಾಗಿ ತೆರೆಬಿದ್ದಿತು. ನೆರದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿತ್ತು. ರಥೋತ್ಸವ ಸಮಿತಿ ಮುಖಂಡರು ನೇತೃತ್ವ ವಹಿಸಿದ್ದರು.

ಮಳೆ ಆತಂಕ: ಗುರುವಾರ ತಡರಾತ್ರಿ ಗಾಳಿ, ಮಿಂಚು ಗುಡುಗಿನ ಆರ್ಭಟ ಹೆಚ್ಚಾಗಿದ್ದರಿಂದ ಮಳೆ ಬರಬಹುದೆಂಬ ಆತಂಕ ಕೆಲ ಕಾಲ ಭಕ್ತರಿಗೆ ಎದುರಾಗಿತ್ತು. ದೈವ ಕೃಪೆ ಎನ್ನುವಂತೆ ಸ್ವಲ್ಪ ಹೊತ್ತಿನಲ್ಲಿಯೇ ವಾತಾವರಣ ತಿಳಿಗೊಂಡ ಪರಿಣಾಮ ಭಕ್ತರು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.