More

    ಹೈ ತೀರ್ಪಿನ ಮೇಲೆ ಅನರ್ಹರ ಭವಿಷ್ಯ

    ರೋಣ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿರುವ ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್​ಡಿ) ಬ್ಯಾಂಕ್ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜ. 31ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆಯೂ ನಡೆಯಲಿದೆ.

    ಕೃಷಿಕ ಸಮೂಹದ ಅಭಿವೃದ್ಧಿಗಾಗಿ 1954ರಲ್ಲಿ ತಾಲೂಕಿನಲ್ಲಿ ಸ್ಥಾಪನೆಗೊಂಡ ಪಿಎಲ್​ಡಿ ಬ್ಯಾಕ್​ಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಪಾರುಪತ್ಯ ಮೆರೆದಿತ್ತು. 2010ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಅಭ್ಯರ್ಥಿಗಳು ಬ್ಯಾಂಕ್​ನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನು ಭೇದಿಸಿ ಬ್ಯಾಂಕ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. 2015ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರ ತೆಕ್ಕೆಗೆ ತೆಗೆದುಕೊಂಡಿತು.

    ಪ್ರಸಕ್ತ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಕಸರತ್ತಿಗೆ ಸಹಕಾರಿ ಸಂಘಗಳ ಉಪ ನಿಬಂಧಕರು ನೀಡಿದ ಅಧಿಸೂಚನೆ ಶಾಕ್ ನೀಡಿದೆ. ಒಟ್ಟು 1500 ಸದಸ್ಯ ಬಲದ ಪಿಎಲ್​ಡಿ ಬ್ಯಾಂಕ್​ಗೆ ಮೂರು ಬಾರಿ ಸಾಮಾನ್ಯ ಸಭೆಗೆ ಹಾಜರಿದ್ದ ಸದಸ್ಯರಿಗೆ ಮಾತ್ರ ಮತದಾನ ಹಾಗೂ ಚುನಾವಣೆಗೆ ಸ್ಪರ್ಧಿಸುವಂತೆ ಸಹಕಾರಿ ಸಂಘಗಳ ಉಪ ನಿಬಂಧಕರು ಅಧಿಸೂಚನೆ ಹೊರಡಿಸಿದ್ದರು. ಇದರಿಂದಾಗಿ 246 ಸದಸ್ಯರಿಗೆ ಮಾತ್ರ ಚುಣಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿತ್ತು.

    ಅನರ್ಹ ಮತದಾರರು ಹೈಕೋರ್ಟ್​ಗೆ ಮೊರೆ:

    ಅನರ್ಹರು ನಮಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಆದೇಶ ಹೊರಡಿಸಿರುವ ಹೈಕೋರ್ಟ್, ಅನರ್ಹರು ಮತದಾನ ಮಾಡಬಹುದು. ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ ಎಂದು ತಿಳಿಸಿದೆ.

    ಆದೇಶ ಉಲ್ಲಂಘಿಸಿ ನಾಮಪತ್ರ ಸಲ್ಲಿಕೆ:

    ನ್ಯಾಯಾಲಯದ ಆದೇಶವಿದ್ದರೂ ಅನರ್ಹರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಅನರ್ಹರ ನಾಮಪತ್ರಗಳನ್ನು ಸ್ವೀಕರಿಸಿದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರು ನಾಮಪತ್ರಗಳ ಪರಿಶೀಲನೆ ವೇಳೆ ಅನರ್ಹರ ನಾಮಪತ್ರಗಳನ್ನು ತಿರಸ್ಕೃತಗೊಳಿಸಿದರು.

    ಮತ್ತೆ ನ್ಯಾಯಾಲಯದ ಮೊರೆ:

    ಸಂವಿಧಾನದ ಅನ್ವಯ ಯಾರಿಗೆ ಮತದಾನ ಹಕ್ಕು ಇರುತ್ತದೆಯೋ ಅವರು ಚುನಾವಣೆಗೆ ಸ್ಪರ್ಧಿಸಬಹುದು. ಹಾಗಾಗಿ ನಮಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ನೀಡುವ ಆದೇಶದ ಮೇಲೆ ಅನರ್ಹರು ಹಾಗೂ ರೋಣ ಪಿಎಲ್​ಡಿ ಬ್ಯಾಂಕ್ ಭವಿಷ್ಯ ಅಡಗಿದೆ.

    ಒಟ್ಟು ಪಿಎಲ್​ಡಿ ಬ್ಯಾಂಕ್​ನ 14 ನಿರ್ದೇಶಕ ಸ್ಥಾನಗಳಲ್ಲಿ ಈಗಾಗಲೇ 8 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ, 3 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಗೊಂಡಿದ್ದು, ಮೂರು ಸ್ಥಾನಗಳಿಗೆ ಜ. 31ರಂದು ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಅನರ್ಹರ ಪರ ನ್ಯಾಯಾಲಯದ ತೀರ್ಪು ಬಂದರೆ ಪಿಎಲ್​ಡಿ ಬ್ಯಾಂಕ್​ನ ಚುನಾವಣೆ ರಣ-ಕಣವಾಗಲಿದೆ.

    ನರಗುಂದ ಪಿಎಲ್​ಡಿ ಬ್ಯಾಂಕ್​ಗೆ 13 ಸದಸ್ಯರು ಅವಿರೋಧ ಆಯ್ಕೆ

    ನರಗುಂದ: ಪಟ್ಟಣದ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ನ ಆಡಳಿತ ಮಂಡಳಿ ಸದಸ್ಯತ್ವಕ್ಕೆ ಸಲ್ಲಿಸಿದ್ದ 17 ಜನರ ನಾಮಪತ್ರಗಳಲ್ಲಿ ಮೂವರು ತಮ್ಮ ನಾಮಪತ್ರಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ 13 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ವಾಸನ ಎಸ್​ಸಿ ಮತಕ್ಷೇತ್ರದಿಂದ ಯಾರೊಬ್ಬರೂ ನಾಮಪತ್ರ ಸಲ್ಲಿಸದಿರುವ ಕಾರಣ ಆ ಸ್ಥಾನ ಖಾಲಿ ಉಳಿದುಕೊಂಡಿದೆ.

    14 ಜನ ನಿರ್ದೇಶಕ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆಯಬೇಕಿದ್ದ ಚುನಾವಣೆಗೆ 17 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಕೊಣ್ಣೂರ ಸಾಲಗಾರ ಮತ ಕ್ಷೇತ್ರದಿಂದ ಯಲ್ಲಪ್ಪಗೌಡ ಪಾಟೀಲ, ಹಿರೇಕೊಪ್ಪ ಮತ ಕ್ಷೇತ್ರದಿಂದ ವೆಂಕರಡ್ಡಿ ಫಕೀರಡ್ಡಿ ಮೇಟಿ ಮತ್ತು ಯಲ್ಲಪ್ಪ ನೆಲಗುಡ್ಡದ ಅವರು ಜ. 25ರಂದು ವೈಯಕ್ತಿಕ ಕಾರಣಗಳಿಂದ ನಾಮಪತ್ರಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ 14 ಅಭ್ಯರ್ಥಿಗಳಲ್ಲಿ ಅಂತಿಮವಾಗಿ 13 ಜನರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

    ಸೋಮಾಪೂರ ಎಸ್​ಸಿ ಮೀಸಲು ಕ್ಷೇತ್ರದಿಂದ ಮಂಜುಳಾ ಮಹಾದೇವಪ್ಪ ಜೋಗಣ್ಣವರ. ‘ಅ’, ವರ್ಗದ ಮೀಸಲು ಮದಗುಣಕಿ ಕ್ಷೇತ್ರದಿಂದ ಬಸವ್ವ ಐನಾಪೂರ, ದಂಡಾಪೂರ ಕ್ಷೇತ್ರದ ಉಮೇಶ ಗೂಳಪ್ಪ ಯಳ್ಳೂರ, ಮಹಿಳಾ ಮೀಸಲು ಕ್ಷೇತ್ರಗಳಾದ ಹದಲಿ ಕ್ಷೇತ್ರದಿಂದ ಸಂಗಮ್ಮ ರುದ್ರೇಶ ಸುಂಕದ, ಅರ್ಭಾಣ ಕ್ಷೇತ್ರದ ರೇಣುಕಾ ಈಶ್ವರಗೌಡ ಶಿವನಗೌಡ್ರ ಆಯ್ಕೆಯಾಗಿದ್ದಾರೆ.

    ಸಾಮಾನ್ಯ ಕ್ಷೇತ್ರಗಳಾದ ಕುರ್ಲಗೇರಿ ಕ್ಷೇತ್ರದಿಂದ ಈಶ್ವರಗೌಡ ಪಾಟೀಲ, ಸಂಕದಾಳ ಕ್ಷೇತ್ರದಿಂದ ಅಶೋಕ ಶೇಖರಪ್ಪ ಸಾಲೂಟಗಿ, ಹಿರೇಕೊಪ್ಪ ಕ್ಷೇತ್ರದಿಂದ ಶಂಕರಗೌಡ ವೀರನಗೌಡ ಪಾಟೀಲ, ಕೊಣ್ಣೂರ ಕ್ಷೇತ್ರದಿಂದ ನೇತಾಜಿಗೌಡ ತಮ್ಮನಗೌಡ ಕೆಂಪನಗೌಡ್ರ, ಕಣಕೀಕೊಪ್ಪ ಕ್ಷೇತ್ರದಿಂದ ಗೌಡಪ್ಪಗೌಡ ಕಲ್ಲನಗೌಡ ಹುಡೇದಮನಿ, ಕಲಕೇರಿ ಕ್ಷೇತ್ರದಿಂದ ಮಹಾಬಳೇಶ್ವರಗೌಡ ಸಿದ್ದನಗೌಡ ಪಾಟೀಲ, ಶಿರೋಳ ಕ್ಷೇತ್ರದಿಂದ ನಾಗನಗೌಡ ತಿಮ್ಮನಗೌಡ್ರ ಹಾಗೂ ಬಿನ್ ಸಾಲಗಾರ ಕ್ಷೇತ್ರದಿಂದ ಚನ್ನಪ್ಪ ತುಳಚಪ್ಪ ಕೇರಿ ಸೇರಿ ಒಟ್ಟು 13 ಜನ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಜ. 31ರಂದು ಅಧಿಕೃತ ಘೊಷಣೆ ಮಾಡುವುದೊಂದೇ ಬಾಕಿ ಉಳಿದಿದೆ ಎಂದು ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ಎ.ಎಚ್. ಮಹೇಂದ್ರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts