ಹೈವೇ ಬಾರ್ ಬಂದ್

ನವದೆಹಲಿ: ಹೆದ್ದಾರಿಗಳಲ್ಲಿ ಪಾನಮತ್ತ ಚಾಲಕರಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ದಿಟ್ಟ ನಿಲುವು ಕೈಗೊಂಡಿರುವ ಸುಪ್ರೀಂಕೋರ್ಟ್, ದೇಶಾದ್ಯಂತ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಗುರುವಾರ ಮಹತ್ವದ ಆದೇಶ ನೀಡಿದೆ.

ಪಾನಮತ್ತ ಚಾಲಕ ರಿಂದ ಸಂಭವಿಸುವ ಅಪಘಾತಗಳಲ್ಲಿ ಪ್ರತಿವರ್ಷ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಆದೇಶ ನೀಡಿರುವ ನ್ಯಾಯಾಲಯ, 2017ರ ಏಪ್ರಿಲ್ ಒಳಗೆ ದೇಶಾದ್ಯಂತ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ಮಾ.31ರ ನಂತರ ಹೆದ್ದಾರಿಯ ಇಕ್ಕೆಲಗಳಲ್ಲಿ ಮದ್ಯದ ಮಳಿಗೆ ತೆರೆಯಲು ಸರ್ಕಾರಗಳು ಪರವಾನಗಿ ನೀಡಬಾರದು ಹಾಗೂ ಈಗಿರುವ ಮದ್ಯದ ಅಂಗಡಿಗಳ ಪರವಾನಗಿಯನ್ನು ಭವಿಷ್ಯದಲ್ಲಿ ನವೀಕರಿಸಬಾರದೆಂದೂ ಸುಪ್ರೀಂ ಸೂಚಿಸಿದೆ. ಈ ಮಹತ್ವದ ಆದೇಶದಿಂದಾಗಿ ಇನ್ನು ಕೆಲವೇ ತಿಂಗಳಲ್ಲಿ ದೇಶದ ಎಲ್ಲ ಹೆದ್ದಾರಿಗಳು ಮದ್ಯ ಅಂಗಡಿಗಳಿಂದ ಮುಕ್ತವಾಗಲಿವೆ.

ಅರೈವ್ ಸೇಫ್ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ಹೆದ್ದಾರಿಗಳ ಪಕ್ಕದಲ್ಲಿ ನಿಗದಿತ ಅಂತರದಲ್ಲಿ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸಬಹುದು ಎಂಬ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರೈವ್ ಸೇಫ್ ಸಂಘಟನೆ ಸುಪ್ರೀಂ ಮೊರೆ ಹೋಗಿತ್ತು.

ಕೇಂದ್ರಕ್ಕೆ ತರಾಟೆ: ಹೈವೇ ಪಕ್ಕದ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸುವ ವಿಚಾರವಾಗಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನೂ ತರಾಟೆ ತೆಗೆದುಕೊಂಡಿದೆ. 10 ವರ್ಷಗಳಿಂದ ಸರ್ಕಾರ ಈ ಬಗ್ಗೆ ಭರವಸೆಗಳನ್ನು ಮಾತ್ರ ನೀಡುತ್ತಿದೆ. ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರಕರಣ ಸುಪ್ರೀಂ ಮೆಟ್ಟಿಲೇರುವಂತಾಗಿದೆ ಎಂದು ಹರಿಹಾಯ್ದಿದೆ.

ಪಂಜಾಬ್ ಸರ್ಕಾರಕ್ಕೂ ಚಾಟಿ: ಹೆದ್ದಾರಿಗಳ ಪಕ್ಕದಲ್ಲಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ವಿಚಾರವನ್ನು ಪಂಜಾಬ್ ಸರ್ಕಾರ ಸಮರ್ಥಿಸಿಕೊಂಡಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಅಬಕಾರಿ ಲಾಬಿ ಹಾಗೂ ಆದಾಯ ಅಧಿಕವಾಗಿದ್ದಾಗ ರಾಜ್ಯ ಸರ್ಕಾರವೂ ಸಂತಸದಿಂದ ಇರುತ್ತದೆ. ಆದರೆ, ವ್ಯಕ್ತಿಯು ಅಪಘಾತದಲ್ಲಿ ಮೃತಪಟ್ಟರೆ ಆತನ ಕುಟುಂಬಕ್ಕೆ ಕೇವಲ 1.5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಸಾಮಾಜಿಕ ಕಳಕಳಿಯಿಂದ ನಿರ್ಧಾರ ತೆಗೆದುಕೊಳ್ಳಿ ಎಂದು ಪಂಜಾಬ್ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಹೇಳಿದರು.

1,46,133

ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ

1400

ಪ್ರತಿದಿನ ಭಾರತದಲ್ಲಿ ಸಂಭವಿಸುವ ಅಪಘಾತಗಳು

400

ಪ್ರತಿದಿನ ಅಪಘಾತದಿಂದ ಮೃತರಾಗುವವರು

17

ಪ್ರತಿಗಂಟೆಗೆ ಸಾವನ್ನಪ್ಪುವವರು

ಶೇ. 70

ಡ್ರಿಂಕ್ ಆಂಡ್ ಡ್ರೖೆವ್ ಪ್ರಕರಣ

 

ಮದ್ಯ ಜಾಹೀರಾತೂ ನಿಷೇಧ

ಹೆದ್ದಾರಿಗಳ ಪಕ್ಕದಲ್ಲಿ ಮದ್ಯದ ಅಥವಾ ಮದ್ಯದ ಅಂಗಡಿಗಳ ಜಾಹೀರಾತುಗಳನ್ನೂ ಹಾಕಬಾರದೆಂದು ಸುಪ್ರೀಂ ಕಟ್ಟಾಜ್ಞೆ ವಿಧಿಸಿದೆ. ಈಗ ಹೆದ್ದಾರಿಗಳ ಪಕ್ಕ ಹಾಕಲಾಗಿರುವ ಮದ್ಯದ ಜಾಹೀರಾತುಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಇಲಾಖೆಯ ಮುಖ್ಯಸ್ಥರಿಗೆ ವಹಿಸಲಾಗಿದೆ. ಸರ್ಕಾರ ಆದಾಯ ಗಳಿಕೆಯ ಕಾರಣಕ್ಕಾಗಿ ಹೆದ್ದಾರಿಗಳ ಪಕ್ಕದಲ್ಲಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವುದು ಸರಿಯಲ್ಲ. ಇದರಿಂದ ಸಾವಿರಾರು ಜನರು ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ ಎಂದು ಡಿ.5ರಂದು ನಡೆದಿದ್ದ ಹಿಂದಿನ ವಿಚಾರಣೆ ಸಂದರ್ಭದಲ್ಲೇ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಅರ್ಧ ಕಿ.ಮೀ. ದೂರದಲ್ಲಿರಬೇಕು

ಹೈವೇಯಿಂದ ಮದ್ಯದ ಅಂಗಡಿಗಳು ಕನಿಷ್ಠ 500 ಮೀಟರ್ ದೂರದಲ್ಲಿರಬೇಕು ಎಂದು ಸುಪ್ರೀಂಕೋರ್ಟ್ ಅಂತರ ನಿಗದಿ ಪಡಿಸಿದೆ. ಮದ್ಯದಂಗಡಿಗಳು ಹೆದ್ದಾರಿಯಿಂದ ಕೆಲವೇ ಮೀಟರ್ ದೂರದಲ್ಲಿದ್ದಲ್ಲಿ ಅದು ಚಾಲಕರು, ಪ್ರಯಾಣಿಕರ ಕಣ್ಣಿಗೆ ಬೀಳುತ್ತದೆಯಲ್ಲದೆ ಅದರಿಂದ ಜನರು ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.

 

ಹೆದ್ದಾರಿ ಬಾರ್​ಗೆ ರಾಜ್ಯದಲ್ಲೂ ನಿರ್ಬಂಧವಿತ್ತು

ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಂದ 220 ಮೀಟರ್ ಅಂತರದಲ್ಲಿ ಮದ್ಯದಂಗಡಿ ಸ್ಥಾಪಿಸಲು ಕರ್ನಾಟಕದಲ್ಲಿ ಸದ್ಯ ನಿರ್ಬಂಧವಿದೆ. ಕಳೆದ ವರ್ಷ ಆರಂಭಗೊಂಡಿದ್ದ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು 25 ಮದ್ಯದಂಗಡಿಗಳನ್ನು ತೆರವುಗೊಳಿಸಿದ್ದರೆ, 280 ಅಂಗಡಿಗಳಿಗೆ ನೋಟಿಸ್ ನೀಡಲಾಗಿತ್ತು. ಕೆಲವರು ಈ ಆದೇಶದ ವಿರುದ್ಧ ನ್ಯಾಯಾಲಯದ ಕದ ತಟ್ಟಿದ್ದಾರೆ. ಸದ್ಯ ಸುಪ್ರೀಂಕೋರ್ಟ್ ಮದ್ಯದಂಗಡಿಗಳ ಅಂತರವನ್ನು 220 ಮೀಟರ್​ನಿಂದ 500 ಮೀಟರ್​ಗೆ ಹೆಚ್ಚಿಸಿರುವ ಕಾರಣ ಮತ್ತಷ್ಟು ಮದ್ಯದಂಗಡಿಗಳು ಎತ್ತಂಗಡಿಯಾಗಲಿವೆ.

500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳ ಮಾಹಿತಿ ಲಭ್ಯವಿಲ್ಲವಾದರೂ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತು ಕಾರ್ಯ ಪ್ರವೃತ್ತರಾಗಲಿದ್ದೇವೆ. ನೋಟಿಸ್ ನೀಡಿ ತೆರವು ಅಥವಾ ಸ್ಥಳಾಂತರ ಮಾಡಿಸಲೇಬೇಕಾಗುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

1967ರಿಂದಲೇ ಕಾನೂನು: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿ ಸ್ಥಾಪನೆ ವಿಚಾರವಾಗಿ ಕರ್ನಾಟಕದಲ್ಲಿ 1967ರಿಂದಲೇ ಕಾನೂನು ಜಾರಿಯಲ್ಲಿದೆ. ಅಬಕಾರಿ ಕಾಯ್ದೆಗೆ ರೂಪಿಸಲಾಗಿರುವ ಕರ್ನಾಟಕ ಅಬಕಾರಿ ಪರವಾನಗಿ ನಿಬಂಧನೆ ಕಾನೂನಿನ 5ನೇ ಅಂಶದಲ್ಲಿ ಇದರ ಉಲ್ಲೇಖವಿದೆ. ಅಬಕಾರಿ ವಲಯದಲ್ಲಿ ‘ರೂಲ್ ಫೈವ್’ ಎಂದೇ ಖ್ಯಾತಿ ಪಡೆದಿರುವ ನಿಬಂಧನೆಯಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾಗಳ ಮಧ್ಯ ಭಾಗದಿಂದ 220 ಮೀಟರ್ ಅಂತರದವರೆಗೆ ಮದ್ಯದಂಗಡಿ ನಡೆಸುವಂತಿಲ್ಲ.

67ರಿಂದಲೇ ಕಾನೂನು ಇದ್ದರೂ ಜಾರಿ ಆಗಿರಲಿಲ್ಲ. ರಾಜ್ಯದೆಲ್ಲೆಡೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯ 220 ಮೀಟರ್ ಅಂತರದಲ್ಲಿ ಒಟ್ಟು 305 ಮದ್ಯದಂಗಡಿಗಳನ್ನು ಅಬಕಾರಿ ಇಲಾಖೆ ಗುರುತಿಸಿತ್ತು. ಕಳೆದ ವರ್ಷದಿಂದ ಕಾನೂನು ಜಾರಿಗೆ ಒತ್ತು ನೀಡಲಾಗುತ್ತಿದ್ದು, ಇಲ್ಲಿಯವರೆಗೆ ಒಟ್ಟು 25 ಮದ್ಯದಂಗಡಿಗಳನ್ನು ನಿರ್ಬಂಧಿತ ಅಂತರದಿಂದ ತೆರವುಗೊಳಿಸಲಾಗಿದೆ.

ಅನುಮತಿ ದೊರೆಯುವುದು ಹೇಗೆ?

ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯವನ್ನು 6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲ ರೀತಿಯ ಮದ್ಯ ಮಾರಾಟ ಅಂಗಡಿಗಳೂ ಸೇರಿ 10,051 ಪರವಾನಗಿ ನೀಡಲಾಗಿದೆ. ಹೆದ್ದಾರಿಗಳಿಂದ 220 ಮೀಟರ್ ಅಂತರದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಬಾರದು ಎಂಬ ಕಾನೂನಿದ್ದರೂ 305 ಕಡೆಗಳಲ್ಲಿ ಉಲ್ಲಂಘನೆಯಾಗಿತ್ತು. ಇದಕ್ಕೆ 3 ಕಾರಣಗಳಿವೆ. ಸಾಮಾನ್ಯ ರಸ್ತೆ ಬದಿಯಲ್ಲಿ ಮದ್ಯದ ಅಂಗಡಿಯಿದ್ದು, ಆನಂತರ ಆ ರಸ್ತೆ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುತ್ತದೆ. ಎರಡನೆಯದಾಗಿ ತಪ್ಪು ವಿಳಾಸ ನೀಡಿದ ಮಾಲೀಕರು ಹೆದ್ದಾರಿ ಬಳಿ ಅಂಗಡಿ ಸ್ಥಾಪಿಸಿದ್ದಾರೆ. ಮೂರನೆಯದಾಗಿ, ಲಂಚ ನೀಡಿ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೂಲ್ ಫೈವ್ ನಿಯಮ

  • 100 ಮೀಟರ್​ವರೆಗೆ ನಿರ್ಬಂಧ: ಧಾರ್ವಿುಕ ಸ್ಥಳ, ಶಾಲೆ, ಕಾಲೇಜು, ಆಸ್ಪತ್ರೆಗಳು ಸ್ಥಳೀಯ-ರಾಜ್ಯ-ಕೇಂದ್ರ ಸರ್ಕಾರದ ಕಚೇರಿಗಳು, ವಸತಿ ಪ್ರದೇಶ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಹೆಚ್ಚಾಗಿರುವ ವಸತಿ ಪ್ರದೇಶಗಳು.
  • 220 ಮೀಟರ್​ವರೆಗೆ ನಿರ್ಬಂಧ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮಧ್ಯ ಭಾಗದಿಂದ 220 ಮೀಟರ್​ವರೆಗೆ ನಿರ್ಬಂಧ.
  • ವಿನಾಯಿತಿ: ಮುನಿಸಿಪಲ್ ಕಾರ್ಪೆರೇಷನ್, ನಗರ ಪಾಲಿಕೆ ಸೇರಿದಂತೆ 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿ ಮದ್ಯದಂಗಡಿ ಸ್ಥಾಪಿಸಲು ವಿನಾಯಿತಿ ಇದೆ.
  • ಹಳ್ಳಿಗಳ ಹೊರಗೆ: ಎರಡೂವರೆ ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಹಳ್ಳಿಗೆ ಮದ್ಯದಂಗಡಿ ಪರವಾನಗಿ ನೀಡಿದರೆ, ಅಂತಹ ಹಳ್ಳಿಯಲ್ಲಿ ಜನವಸತಿ ಪ್ರದೇಶದಿಂದ ಹೊರಗೆ ಅಂಗಡಿ ಸ್ಥಾಪಿಸಬೇಕು.

 

Leave a Reply

Your email address will not be published. Required fields are marked *