ಹೈಲ್ಯಾಂಡರ್ಸ್‌ ಕಪ್- ವಾರಿಯರ್ಸ್‌ ಕಪ್‌ಗೆ ಚಾಲನೆ

ನಾಪೋಕ್ಲು: ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಹೈಲ್ಯಾಂಡರ್ಸ್‌ ಕಪ್ ಹಾಗೂ ವಾರಿಯರ್ಸ್‌ ಚಾಂಪಿಯನ್ ಕಪ್ ಹಾಕಿ ಪಂದ್ಯಾವಳಿಗೆ ಮಂಗಳವಾರ ಚಾಲನೆ ನೀಡಲಾಯಿತು.

ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪಂದ್ಯಾವಳಿಗೆ ಕೊಡವ ಹಾಕಿ ಸಂಸ್ಥೆ ಉಪಾಧ್ಯಕ್ಷ ಕಲಿಯಂಡ ಸಿ.ನಾಣಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಾಪೋಕ್ಲುವಿನಲ್ಲಿ ಪ್ರತಿವರ್ಷ ಹಾಕಿ, ಕ್ರಿಕೆಟ್ ಸೇರಿ ವಿವಿಧ ಕ್ರೀಡಾ ಚಟುವಟಿಕೆ ನಡೆಯುತ್ತಿದೆ. ರಾಮನ್ ಸ್ಮಾರಕ ಹಾಕಿ ಪಂದ್ಯಾವಳಿ 14 ವರ್ಷ ನಡೆದಿತ್ತು. ಪ್ರಸ್ತುತ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಹಾಕಿ ಪಂದ್ಯಾವಳಿ ಆಯೋಜಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕೊಡವ ಕುಟುಂಬ ತಂಡಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಈ ವರ್ಷ ಕೈಬಿಡುವ ಮೂಲಕ ಕೊಡವ ಹಾಕಿ ಅಕಾಡೆಮಿ ತಪ್ಪು ನಿರ್ಧಾರ ಮಾಡಿದೆ. ತನ್ನ ದಾಖಲೆಯನ್ನು ತಾನೆ ಮುರಿದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.

‘ಬಿದ್ದಾಟಂಡ ಹಾಕಿ ಕಪ್ ವೇಳೆ ನಾಪೋಕ್ಲು ಕ್ರೀಡಾಂಗಣ ಸುಸಜ್ಜಿತವಾಗಿ ಸಜ್ಜುಗೊಂಡಿತ್ತು. ಕಳೆದ ವರ್ಷ ಕಲಿಯಂಡ ಹಾಕಿ ಕಪ್ ಇದೇ ಮೈದಾನದಲ್ಲಿ ನಡೆದಿತ್ತು. ಇದೀಗ ಹೈಲ್ಯಾಂಡರ್ಸ್‌ ಕ್ಲಬ್ ಹಾಕಿ ಪಂದ್ಯಾವಳಿ ಆಯೋಜಿಸುವುದರ ಮೂಲಕ ಕ್ರೀಡಾಂಗಣದಲ್ಲಿ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ’ ಎಂದು ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಮೆಚ್ಚುಗೆ ವ್ಯಕ್ತ ಪಡಿಸಿದರು.

ಉದ್ಯಮಿ ಡಾ.ನಡಿಕೇರಿಯಂಡ ತೇಜ್ ಪೂವಯ್ಯ ಮಾತನಾಡಿ, ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಕಾರಣವಾದ ಅಂಶಗಳತ್ತ ಗಮನ ಹರಿಸಬೇಕಾಗಿದೆ. 7 ದಶಕದಿಂದ ಜಿಲ್ಲೆಯಲ್ಲಿ ಅರಣ್ಯ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿವರ್ಷ ಹೈಲ್ಯಾಂಡರ್ಸ್‌ ಕ್ಲಬ್ ಮೂಲಕ 10 ಸಾವಿರ ಸಸಿ ನೆಡುವ ಸಂಕಲ್ಪ ಮಾಡಬೇಕು. ಆ ಮೂಲಕ ಪರಿಸರ ಸಂರಕ್ಷಣೆಯತ್ತ ಗಮನಹರಿಸಬೇಕು. ದೇವರಕಾಡು ಮೂಲಕ ನಮ್ಮ ಪೂರ್ವಿಕರು ಅರಣ್ಯ ಸಂರಕ್ಷಣೆ ಮಾಡಿದ್ದಾರೆ ಎಂದು ಸ್ಮರಿಸಿದರು.

ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಪಬ್ ಅಧ್ಯಕ್ಷ ಅಪ್ಪಾರಂಡ ಸಾಗರ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಕುಲ್ಲೇಟಿರ ಹಾಕಿ ಕಪ್ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ, ಉದ್ಯಮಿ ಅದೇಂಗಡ ತೇಜ್ ಮಂದಪ್ಪ, ಗ್ರಾಪಂ ಸದಸ್ಯ ನಾಟೋಳಂಡ ಶಂಭು ಕರುಂಬಯ್ಯ, ಹಿರಿಯರಾದ ಅರೆಯಡ ಸೋಮಪ್ಪ, ಪ್ರಮುಖರಾದ ಕುಲ್ಲೇಟಿರ ಅರುಣ್ ಬೇಬಾ, ಚೊಟ್ಟೇರ ಅಯ್ಯಪ್ಪ, ಕಲಿಯಂಡ ನವೀನ್, ಅಪ್ಪಾರಂಡ ಅಪ್ಪಯ್ಯ ಇದ್ದರು.

ಪ್ರಕೃತಿ ವಿಕೋಪಕ್ಕೆ ಸಿಲುಕಿ ಜೀವ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

Leave a Reply

Your email address will not be published. Required fields are marked *