ಹೈಫಾ ಯುದ್ಧದಲ್ಲಿ ಭಾರತೀಯರ ಕ್ಷಾತ್ರತೇಜ

| ಡಾ. ಮಂಜುನಾಥ ಬಿ.ಎಚ್.

ಕೆಲವು ದಿನಗಳ ಹಿಂದೆ ‘ಮಾಧವ ಕೃಪಾ’ದಲ್ಲಿ ನಡೆದ ‘ಬಿಚ್ಚುಗತ್ತಿ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಭಾರತೀಯ ಸೈನಿಕರು ವಿದೇಶಿ ನೆಲದಲ್ಲಿ ಯುದ್ಧ ಗೆದ್ದ ಸಾಹಸಗಾಥೆಯನ್ನು ಉಪನ್ಯಾಸದಲ್ಲಿ ಕೇಳಿ, ’ಬಿಚ್ಚುಗತ್ತಿ’ ಕೃತಿಯನ್ನು ಓದಿ ತಿಳಿದೆ. ನಮ್ಮ ಇತಿಹಾಸದಲ್ಲಿ ಸರಿಯಾಗಿ ದಾಖಲಾಗದಿರುವ ಈ ಘಟನೆಯ ಕುರಿತು ಆಸಕ್ತಿ ಹೆಚ್ಚಾಗಿ, ಇನ್ನಷ್ಟು ಆಳವಾಗಿ ಹೈಫಾ ಯುದ್ಧದ ಕುರಿತು ಮಾಹಿತಿಗಳನ್ನು ಓದಿದೆ. ಈ ಆಸಕ್ತಿಕರ ಹುಡುಕಾಟವೇ ಈ ಲೇಖನವನ್ನು ಬರೆಸಿದೆ.

ಇಸ್ರೇಲ್! ದೇಶಪ್ರೇಮಕ್ಕೆ ಪರ್ಯಾಯ ಎನ್ನುವಂಥ ದೇಶ. ಕಣ್ಣು ಹಾಯಿಸಿದಷ್ಟೂ ಮರಳೇ ತುಂಬಿದೆಯೇನೋ ಎನಿಸುವ ಇಸ್ರೇಲ್, ತನ್ನೆಲ್ಲ ಪ್ರಾಕೃತಿಕ ಹಿನ್ನಡೆಗಳನ್ನು ಮೆಟ್ಟಿ ನಿಂತು, ಮಳೆ ಇಲ್ಲದ ಮರಳು ಭೂಮಿಯಲ್ಲೇ ಅತಿಹೆಚ್ಚು ಬೆಳೆ ಬೆಳೆಯುವ ದೇಶ. ನಮ್ಮ ಬೆಂಗಳೂರಿಗಿಂತ ಸ್ವಲ್ಪ ಹೆಚ್ಚೋ ಕಡಿಮೆಯೋ ವಿಸ್ತೀರ್ಣ ಹೊಂದಿರುವ ಇಸ್ರೇಲ್, ಪ್ರಪಂಚದಲ್ಲೇ ಅತ್ಯಂತ ಮುಂದುವರಿದ, ಬಲಾಢ್ಯ ದೇಶಗಳಲ್ಲಿ ಒಂದು. ಭಾರತ ಹಾಗೂ ಇಸ್ರೇಲ್​ಗಳು ಒಂದು ಅವಿನಾಭಾವ ನಂಟನ್ನು ಹೊಂದಿವೆ. ಇಸ್ರೇಲ್ ಎಂದರೆ ಭಾರತೀಯ ಹೃದಯಗಳಲ್ಲಿ ಪ್ರೀತಿ, ಭಾರತವೆಂದರೆ ಇಸ್ರೇಲಿಗರಿಗೆ ಗೌರವ. ಇವೆಲ್ಲ ವಿನಾಕಾರಣ ಘಟಿಸಿದಂತಹವಲ್ಲ! ಇಸ್ರೇಲ್ ಸ್ಥಾಪನೆಯಾಗುವ ಅದೆಷ್ಟೋ ಶತಮಾನಗಳ ಹಿಂದಿನ ನಂಟು ಭಾರತ ಹಾಗೂ ಇಸ್ರೇಲಿನ ಯಹೂದಿಗಳ ನಡುವೆ ಇದೆ.

ಬಾಂಧವ್ಯ ಬೆಸೆಯಿತು: ಹಾಗೆ ನೋಡಿದರೆ ಭಾರತಕ್ಕೆ ಬಂದ ಮೊದಲ ವಿದೇಶಿ ಧರ್ಮ ಯಹೂದಿ. ಕ್ರಿಸ್ತಶಕ 72ರಲ್ಲಿ ಅಸಿರಿಯಾ ಮತ್ತು ಬ್ಯಾಬಿಲೋನಿಯಾ ಆಕ್ರಮಣಕ್ಕೆ ತುತ್ತಾಗಿ ತಮ್ಮದೆಲ್ಲವನ್ನೂ ಕಳೆದುಕೊಂಡು ಭಾರತಕ್ಕೆ ಬಂದವರು ಅವರು. ಅವರು ಭಾರತಕ್ಕೆ ಬಂದಾಗ ಅಲ್ಲಿನ ರಾಜ ನಮ್ಮಲ್ಲೇ ಜನಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ಬಿಂಬಿಸುವಂತೆ ಹಾಲು ತುಂಬಿದ ಪಾತ್ರೆಯನ್ನು ಅವರ ಮುಂದೆ ಇಟ್ಟಾಗ ವಲಸಿಗ ಇಸ್ರೇಲಿಗಳ ನಾಯಕ ಆ ಪಾತ್ರೆಯೊಳಗೆ ಸಕ್ಕರೆ ಬೆರೆಸಿದನಂತೆ. ಅಂದು ನಿಜಕ್ಕೂ ಯಹೂದಿಯರು ಭಾರತವೆಂಬ ಹಾಲಿನ ಪಾತ್ರೆಯಲ್ಲಿ ಸಕ್ಕರೆಯಂತೆ ಬೆರೆತು ಸ್ವಾದವನ್ನು ಹೆಚ್ಚಿಸಿದರು.

ಯುರೋಪಿನ ದೇಶಗಳಲ್ಲಿ ಯಹೂದಿಗಳನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಿದ್ದಾಗ, ಹಿಂಸಿಸುತ್ತಿದ್ದಾಗ ಭಾರತೀಯರು ಅವರನ್ನು ನಮ್ಮವರೇ ಎಂಬಂತೆ ಅಪ್ಪಿಕೊಂಡರು. ಅವರ ಪ್ರಾರ್ಥನಾಮಂದಿರಗಳನ್ನು ಸ್ಥಾಪಿಸಲು ಅನುಮತಿ, ಸಹಕಾರಗಳನ್ನೂ ಭಾರತೀಯರು ಮನಸಾರೆ ನೀಡಿದರು. ಅದರ ಪರಿಣಾಮವಾಗಿ ಇಂದು ಭಾರತದಲ್ಲಿ ಸಾಕಷ್ಟು ಯಹೂದಿ ಪ್ರಾರ್ಥನಾಲಯಗಳನ್ನು ಕಾಣಬಹುದು. ಶತಮಾನಗಳ ತಮ್ಮ ತಾಯ್ನೆಲದಿಂದ ಹೊರದೂಡಲ್ಪಟ್ಟಿದ್ದ ಯಹೂದಿಗಳಿಗೆ ತಮ್ಮದೇ ದೇಶವೊಂದನ್ನು ಸ್ಥಾಪಿಸುವುದು ಅನಿವಾರ್ಯವೂ ಆಗಿತ್ತು. ಭಾರತದಲ್ಲಿ ಅವರಿಗಿದ್ದ ಸುರಕ್ಷತೆ ಬೇರಾವ ದೇಶ, ಪ್ರಾಂತಗಳಲ್ಲೂ ಇರಲಿಲ್ಲ. ಮಹಾಯುದ್ಧದ ಸಂದರ್ಭದಲ್ಲಂತೂ ಹಿಟ್ಲರನ ನಾಜಿ ಪಡೆ ಯಹೂದಿಗಳನ್ನು ಮೃಗಗಳಂತೆ ಬೇಟೆಯಾಡಿಬಿಟ್ಟಿತ್ತು. ಇದರಿಂದಾಗಿ ಸ್ವತಂತ್ರ ಯಹೂದಿ ರಾಷ್ಟ್ರದ ಪರಿಕಲ್ಪನೆ ಎಂದಿಗಿಂತಲೂ ಹೆಚ್ಚಾಗಿತ್ತು.

ಇಸ್ರೇಲಿಗರ ಹೃದಯದಲ್ಲಿ ಭಾರತ: ಭಾರತೀಯರಂತೆಯೇ ಇಸ್ರೇಲಿಗರೂ ಕೂಡ ದಮನತೆ ಅನುಭವಿಸಿದವರೇ. ಯಹೂದಿಗಳ ತಾಯ್ನೆಲ ಇಸ್ರೇಲ್ 2,000 ವರ್ಷಗಳ ಕಾಲ ವಿದೇಶಿ ಆಡಳಿತಕ್ಕೆ ಸಿಲುಕಿ ನರಳಿಬಿಟ್ಟಿತ್ತು. ಮಧ್ಯಯುಗದಲ್ಲಿ ಟರ್ಕಿಯ ಅಟೋಮನ್ ಮುಸ್ಲಿಮರು ಇಸ್ರೇಲನ್ನು ಆಳಿದರೆ, ಕ್ರಿ ಶ 1516ರಿಂದ 4 ಶತಮಾನಗಳ ಕಾಲ ಇಸ್ರೇಲ್ ಟರ್ಕಿಯ ಆಡಳಿತಕ್ಕೊಳಪಟ್ಟಿತ್ತು.

ಭಾರತದಲ್ಲಿದ್ದ ಯಹೂದಿಗಳನ್ನು ಪೋರ್ಚುಗೀಸರ ಆಕ್ರಮಣದಿಂದ,

ಟಿಪ್ಪು ಸುಲ್ತಾನನ ಮತಾಂತರ ಯತ್ನಗಳಿಂದ ಭಾರತೀಯರೇ ಹೋರಾಡಿ ರಕ್ಷಿಸಿದ್ದರು. ಈ ಎಲ್ಲ ಕಾರಣಗಳಿಂದ ಸಹಸ್ರಾರು ಇಸ್ರೇಲಿಗರು ಭಾರತದಿಂದ ಮರಳಿ ಇಸ್ರೇಲ್ ಸೇರಿದ ನಂತರವೂ ಭಾರತವನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ.

ಅವರನ್ನು ರಕ್ಷಿಸಿ, ಪೋಷಿಸಿದ್ದಷ್ಟೆ ಭಾರತೀಯರ ಕಾಣಿಕೆಯಲ್ಲ. ಅವರ ತಾಯ್ನೆಲವನ್ನು ಟರ್ಕಿಯಿಂದ ಗೆದ್ದು, ಇಸ್ರೇಲ್ ರಾಷ್ಟ್ರ ಸ್ಥಾಪನೆಗೆ ನಾಂದಿ ಹಾಡಿದ್ದು ಭಾರತೀಯ ಸೈನಿಕರೇ! ವಿಪರ್ಯಾಸ ನೋಡಿ, ನಮ್ಮ ಪಠ್ಯಪುಸ್ತಕಗಳು ಗಜನಿ ಮೊಹಮದನ ದಾಳಿ, ಮೊಘಲರ ಆಕ್ರಮಣ, ಔರಂಗಜೇಬನ ಆಡಳಿತಕ್ಕೆ ಕೊಡುವ ಮಹತ್ವ ಭಾರತೀಯ ರಾಜರ, ಭಾರತೀಯ ಸೇನೆಯ ಕ್ಷಾತ್ರ ಪ್ರದರ್ಶನಗಳಿಗೆ ಕೊಡಲೇ ಇಲ್ಲ. ಅಮೆರಿಕ, ರಷ್ಯಾ, ಇಂಗ್ಲೆಂಡುಗಳು ಎರಡನೇ ಮಹಾಯುದ್ಧದಲ್ಲಿ ಜರ್ಮನಿಯನ್ನು ಗೆದ್ದವೆಂದು ಪಠ್ಯಗಳು ಹೇಳುತ್ತವೆಯೇ ಹೊರತು ಆ ಯುದ್ಧ ಗೆಲ್ಲುವಲ್ಲಿ ಭಾರತೀಯ ಸೈನಿಕರ ಪಾತ್ರ, ಹೋರಾಟ ಹೇಗಿತ್ತೆಂದು ಹೇಳುವುದೇ ಇಲ್ಲ. ಆದರೆ ಇಸ್ರೇಲಿಗರು ನಮ್ಮ ಸೈನಿಕರನ್ನು ಮರೆತಿಲ್ಲ. ಪ್ರತೀ ವರ್ಷವೂ ಹೈಫಾ ದಿನಾಚರಣೆ ಆಚರಿಸಿ ಭಾರತೀಯ ಸೈನಿಕರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ!

ಹೈಫಾ ಇಸ್ರೇಲಿನ ಒಂದು ಪ್ರಮುಖ ಬಂದರು ನಗರ. ಒಂದರ್ಥದಲ್ಲಿ ಅದನ್ನು ಇಸ್ರೇಲಿನ ಸ್ವಾತಂತ್ರ್ಯದ ಹೆಬ್ಬಾಗಿಲು ಎನ್ನಲಡ್ಡಿಯಿಲ್ಲ. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರ ವಸಾಹತಾಗಿದ್ದ ಭಾರತವೂ ಸಹ ಅನಿವಾರ್ಯವಾಗಿ ಮಹಾಯುದ್ಧದಲ್ಲಿ ಮಿತ್ರಪಡೆಗಳ ಪರವಾಗಿ ರಣರಂಗಕ್ಕಿಳಿಯಬೇಕಾಯಿತು. ಇಸ್ರೇಲಿನ ಮುಕ್ತಿಗಾಗಿ ನಡೆದ ಯುದ್ಧಕ್ಕೆ ಮೈಸೂರು ಮಹಾರಾಜರು, ಜೋಧಪುರದ ಅರಸ ಮತ್ತು ಹೈದರಾಬಾದ್ ನಿಜಾಮ ತಮ್ಮ ಸೈನಿಕರನ್ನು ಕಳುಹಿಸಿದ್ದರು. 15ನೇ ಇಂಪೀರಿಯಲ್ ಸರ್ವಿಸ್ ಎಂಬ ಆ ತುಕಡಿಯು ಭಾರತೀಯ ಸೈನಿಕರನ್ನು ಒಳಗೊಂಡಿತ್ತು. 1918 ರ ಸೆಪ್ಟೆಂಬರ್ 22ರ ರಾತ್ರಿ ಇಂಗ್ಲೆಂಡ್ ನೇತೃತ್ವದ ಸೇನೆ ಹೈಫಾ ನಗರವನ್ನು ವಶಪಡಿಸಿಕೊಳ್ಳಲು ದಾಳಿ ನಡೆಸಿತು. ಆದರೆ ಮೌಂಟ್ ಕಾರ್ವೆಲ್ ಎಂಬ ಶಿಖರವನ್ನೇರಿ ಕುಳಿತಿದ್ದ ಟರ್ಕಿಯ ಸೈನ್ಯ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ ಇಂಗ್ಲೆಂಡ್ ನೇತೃತ್ವದ ಸೇನೆಯನ್ನು ಹಿಮ್ಮೆಟ್ಟಿಸಿಬಿಟ್ಟಿತು.

ಹಾಗೆಂದು ಯುದ್ಧದಿಂದ ಹೆದರಿ ಹಿಂದೆ ಸರಿದದ್ದು ಮೈಸೂರು ಹಾಗೂ ಜೋಧಪುರದ ಸೈನಿಕರಿಗೆ ಅತ್ಯಂತ ಅಸಮಾಧಾನ ಉಂಟುಮಾಡಿತ್ತು. ಅಶ್ವದಳದ ಮೇಜರ್ ದಳಪತ್ ಸಿಂಗ್ ಶೆಖಾವತ್ ಅಂತೂ ಇದೊಂದು ಹೇಡಿತನದ ನಿರ್ಧಾರ ಎಂದರು. ಅವರು ಜೋಧಪುರ ಹಾಗೂ ಮೈಸೂರಿನ ಸೈನಿಕರೊಡನೆ ರ್ಚಚಿಸಿದಾಗ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಬ್ರಿಟಿಷ್ ಸೈನಿಕರಿಗೆ ತಮ್ಮ ಜೀವ ಉಳಿಸಿಕೊಳ್ಳುವುದು ಮುಖ್ಯವಾದರೆ ಭಾರತೀಯ ಸೈನಿಕರಿಗೆ ಯುದ್ಧ ಗೆಲ್ಲುವುದಷ್ಟೇ ಮುಖ್ಯವಾಗಿತ್ತು. ಭಾರತೀಯ ಅಶ್ವಪಡೆ ಮೌಂಟ್ ಕಾರ್ವೆಲ್ ಶಿಖರವನ್ನೇರಿ ಶತ್ರುಗಳನ್ನು ಬಗ್ಗುಬಡಿಯುವುದಾಗಿ ಮೇಜರ್ ದಳಪತ್ ಸಿಂಗ್ ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಸಿದರು. ಗಾಬರಿಬಿದ್ದ ಅಧಿಕಾರಿಗಳು ಅದೊಂದು ಹುಚ್ಚು ಸಾಹಸವಾದೀತು ಎಂದರು. ಊಹುಂ, ಭಾರತೀಯ ಸೈನಿಕರು ಸಾವನ್ನಾದರೂ ಎದುರಿಸಲು ಸಿದ್ಧರಿದ್ದರು, ಆದರೆ ಸೋಲನ್ನಲ್ಲ. ಅವರು ತಾವು ಯುದ್ಧರಂಗಕ್ಕೆ ತೆರಳುತ್ತೇವೆಂದು ಘೊಷಿಸಿಯೇ ಬಿಟ್ಟರು. ಆಗ ಬ್ರಿಟಿಷ್ ಅಧಿಕಾರಿಗಳು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾಯಿತು.

ಜೋಧಪುರ ಮತ್ತು ಮೈಸೂರಿನ ಅಶ್ವದಳ 1918ರ ಸೆ.23ರಂದು ನಸುಕಿನಲ್ಲೇ ಯುದ್ಧಕ್ಕೆ ಅಣಿಯಾಯಿತು. ಶಿಖರವನ್ನೇರಿ ಕುಳಿತಿದ್ದ ಟರ್ಕಿಯ ಸೈನಿಕರಿಗೆ ಆಸ್ಟ್ರಿಯಾ ಹಾಗೂ ಜರ್ಮನಿಗಳ ಬೆಂಬಲ. ಯುದ್ಧಕ್ಕೆ ಅವರ ಬಳಿ ಬಂದೂಕು ಹಾಗೂ ತೋಪುಗಳಿದ್ದವು. ಭಾರತೀಯ ಅಶ್ವದಳದ ಬಳಿಯಿದ್ದ ಆಯುಧಗಳೆಂದರೆ ಬರಿಯ ಖಡ್ಗ ಹಾಗೂ ಈಟಿ. ಅತ್ಯಂತ ವೇಗವಾಗಿ ಧಾವಿಸಬಲ್ಲ ಕುದುರೆಗಳು ಹಾಗೂ ಎಲ್ಲಕ್ಕಿಂತಲೂ ಬಲವಾದ ಆತ್ಮಬಲ! ಮೌಂಟ್ ಕಾರ್ವೆಲ್ ಶ್ರೇಣಿಗೆ ತೆರಳಲು ಕಿಶೋನ್ ನದಿಯ ಜೌಗು ನೆಲದ ಮೂಲಕ ಸಾಗಬೇಕಾದ ಅನಿವಾರ್ಯತೆ ಮೈಸೂರು ಲ್ಯಾನ್ಸರ್ಸ್​ಗಿತ್ತು. ಮೈಸೂರು ಲ್ಯಾನ್ಸರ್ಸ್ ಕಡಿದಾದ ಪರ್ವತ ಏರತೊಡಗಿತು. ಮೇಲಿನಿಂದ ಬೀಳುತ್ತಿದ್ದ ಗುಂಡಿನ ಮಳೆಯನ್ನೂ ಲೆಕ್ಕಿಸದೆ ಮೈಸೂರಿನ ಸೇನೆ ಪರ್ವತವನ್ನು ಏರುತ್ತಿತ್ತು. ಟರ್ಕಿ ಸೇನೆ ನಿಬ್ಬೆರಗಾಗಿ ನೋಡುತ್ತಿದ್ದಂತೆ ಭಾರತೀಯ ಸೈನಿಕರು ವ್ಯೂಹಾತ್ಮಕವಾಗಿ ಮೇಲೇರಿ, ಟರ್ಕಿಯ ಸೇನೆಯನ್ನು ಸಂಹರಿಸತೊಡಗಿತು. ಇದೇ ಸಂದರ್ಭದಲ್ಲಿ ಜೋಧಪುರ ಸೈನಿಕರು ಶರವೇಗದ ಕುದುರೆಗಳೊಡನೆ ಹೈಫಾ ನಗರಕ್ಕೆ ಲಗ್ಗೆಯಿಟ್ಟು, ಗುಂಡಿನ ದಾಳಿಯನ್ನು ತಪ್ಪಿಸಿ, ಟರ್ಕಿ ಸೈನಿಕರನ್ನು ಮಟ್ಟ ಹಾಕತೊಡಗಿತು. ಇದು ಪ್ರಪಂಚದ ಯುದ್ಧೇತಿಹಾಸದಲ್ಲಿ ಅಶ್ವದಳವೊಂದು ಶಸ್ತ್ರಸಜ್ಜಿತ ಸೈನ್ಯವೊಂದನ್ನು ಮಣಿಸಿದ ಏಕೈಕ ದಾಖಲೆಯಾಗಿ ಉಳಿದಿದೆ. ಬರಿ ಎರಡು ಅಶ್ವದಳದ ತುಕಡಿಗಳು 1,000 ಯೋಧರ ಶಸ್ತ್ರಸಜ್ಜಿತ ಸೈನ್ಯವನ್ನು ದಿನವೊಂದರಲ್ಲಿ ಮಣಿಸುತ್ತಾರಾದರೆ ಅದು ಭಾರತೀಯ ಸೈನ್ಯವೇ ಆಗಿರಬೇಕಷ್ಟೆ! ಹೆಸರಿನಂತೆ ನಿಜಕ್ಕೂ ದಳಪತಿಯೇ ಆಗಿದ್ದ ಕರ್ನಲ್ ದಳಪತ್ ಸಿಂಗ್ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದರು. ಯುದ್ಧದಲ್ಲಿ ತೋರಿದ ಶೌರ್ಯಕ್ಕೆ ದಳಪತ್ ಸಿಂಗ್​ರನ್ನು ‘ಹೀರೋ ಆಫ್ ಹೈಫಾ’ ಎಂದು ಬ್ರಿಟಿಷ್ ಸೈನ್ಯ, ಸರ್ಕಾರಗಳೇ ಹೊಗಳುತ್ತಾವಾದರೆ, ಅದೆಂತಹ ಶೌರ್ಯ, ಸ್ಥೈರ್ಯದ ಪ್ರದರ್ಶನ ದಳಪತ್ ತೋರಿರಬೇಕು? ಬ್ರಿಟಿಷ್ ಸರ್ಕಾರ ಅವರ ಶೌರ್ಯದ ನೆನಪಿಗೆ ದಳಪತ್ ಹಾಗೂ ಅವರೊಡನೆ ಬಲಿದಾನಗೈದ ಇನ್ನಿಬ್ಬರು ಸೈನಿಕರ ಪುತ್ಥಳಿಗಳನ್ನು ದೆಹಲಿಯಲ್ಲಿ ಸ್ಥಾಪಿಸಿತು. ಇಂದು ಅದು ‘ತೀನ್ ಮೂರ್ತಿ ಚೌಕ್’ ಎಂದು ಪ್ರಸಿದ್ಧವಾಗಿದೆ. ಭಾರತ ಹಾಗೂ ಇಸ್ರೇಲ್ ಸ್ನೇಹಕೂಟವು ಈ ಚೌಕವನ್ನು ‘ತೀನ್ ಮೂರ್ತಿ ಹೈಫಾ ಚೌಕ್’ ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸುತ್ತ ಬಂದಿದೆ.

ಇಸ್ರೇಲಿಗಳು ತಮ್ಮ ಕ್ಷಾತ್ರತೇಜಕ್ಕಾಗಿ ಹೆಸರಾದವರು. ಕೆಂಡಗಳಂಥ ಶತ್ರುರಾಷ್ಟ್ರಗಳನ್ನು ಸುತ್ತಲೂ ಕಟ್ಟಿಕೊಂಡಿರುವ ಇಸ್ರೇಲ್​ಗೆ ತನ್ನ ಉಳಿವಿಗಾಗಿ ಸದಾ ಹೋರಾಡುತ್ತಲೇ ಇರುವ ಪರಿಸ್ಥಿತಿ ಇದೆ. ಅಂತಹದರಲ್ಲಿ ತಮ್ಮ ರಾಷ್ಟ್ರ ಸ್ಥಾಪನೆಗೆ ಅಡಿಗಲ್ಲು ಹಾಕಿದ ಭಾರತೀಯ ಸೈನಿಕರನ್ನು ಮರೆಯದೆ, ಅವರಿಗಾಗಿ ಸ್ಮಾರಕವನ್ನೂ ಇಸ್ರೇಲ್ ನಿರ್ವಿುಸಿದೆ. ಪ್ರತಿವರ್ಷವೂ ಹೈಫಾ ದಿನವನ್ನು ಆಚರಿಸಿ ದಳಪತ್ ಸಿಂಗ್ ಹಾಗೂ ಅವರ ಸೈನ್ಯಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಇದೇ ಕಾರಣಕ್ಕೇ 1999ರಲ್ಲಿ ಅಮೆರಿಕ ಹಾಗೂ ವಿಶ್ವ ಸಮುದಾಯ ವಿರೋಧ ವ್ಯಕ್ತಪಡಿಸಿದರೂ, ಇಸ್ರೇಲ್ ಕಾರ್ಗಿಲ್ ಯುದ್ಧದ ವೇಳೆ ನಮಗೆ ಶಸ್ತ್ರಾಸ್ತ್ರ ಪೂರೈಸಿದ್ದನ್ನು ನೆನೆಯಬಹುದು. 1998ರ ಅಣ್ವಸ್ತ್ರ ಪರೀಕ್ಷೆಯನ್ನು ಅಂತಾರಾಷ್ಟ್ರೀಯ ಸಮುದಾಯ ವಿರೋಧಿಸಿದರೂ ಇಸ್ರೇಲ್ ಭಾರತದ ಬೆಂಬಲಕ್ಕೆ ನಿಂತಿತ್ತು. ಹೈಫಾ ಯುದ್ಧ ಗೆದ್ದುಕೊಟ್ಟು ನೂರು ವರ್ಷಗಳಾದರೂ ಇಸ್ರೇಲ್ ನಮ್ಮನ್ನು ಸ್ಮರಿಸುತ್ತದೆ. ಹೈಫಾ ಗೆಲುವಿನ ಶತಮಾನೋತ್ಸವದ ವೇಳೆಗಾದರೂ ನಮ್ಮ ಸೈನಿಕರ ಕ್ಷಾತ್ರತೇಜ ಭಾರತೀಯರಿಗೆ ತಿಳಿಯುವಂತಾಗಬೇಕಲ್ಲವೇ?

(ಲೇಖಕರು ತಜ್ಞವೈದ್ಯರು, ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *