ಹೈಟೆಕ್ ಬಸ್​ನಿಲ್ದಾಣ ಕಾಮಗಾರಿ ನನೆಗುದಿಗೆ

ಚನ್ನಪಟ್ಟಣ: ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಜಂಟಿಯಾಗಿ ನಿರ್ವಿುಸಲು ಮುಂದಾಗಿದ್ದ ಚನ್ನಪಟ್ಟಣದ ಹೈಟೆಕ್ ಖಾಸಗಿ ಬಸ್ ನಿಲ್ದಾಣ ಕಾಮಗಾರಿ 6 ವರ್ಷ ಕಳೆದರೂ ಯಾವುದೇ ಪ್ರಗತಿ ಕಾಣದೆ ನನೆಗುದಿಗೆ ಬಿದ್ದಿದೆ. ನಗರದಲ್ಲಿ ನಿರ್ವಣವಾಗಬೇಕಿದ್ದ ಹೈಟೆಕ್ ಬಸ್ ನಿಲ್ದಾಣದ ಕನಸು ಹಾಗೇ ಉಳಿದಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಶಾಸಕರಾದ ಮೇಲಾದರೂ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷೆ ಇಟ್ಟಿದ್ದ ಜನತೆಗೆ ನಿರಾಸೆಯಾಗಿದೆ.

ಏನಿದು ಯೋಜನೆ: ಆರು ವರ್ಷಗಳ ಹಿಂದೆ ಹಿಂದಿನ 22 ಜನಪ್ರತಿನಿಧಿಗಳ ಆಡಳಿತದ ಅವಧಿಯಲ್ಲಿ ಅನುಮೋದನೆ ಪಡೆದು ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೈಟೆಕ್ ಖಾಸಗಿ ಬಸ್ ನಿಲ್ದಾಣ ನಿರ್ವಣಕ್ಕೆ ಯೋಜನೆ ರೂಪಿಸಲಾಗಿತ್ತು. ಅಂದು ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ 2013ರ ಮೇ 30ರಂದು ಹಲವು ವಿರೋಧಗಳ ನಡುವೆಯೂ ಬಿಗಿ ಪೊಲೀಸ್ ಭದ್ರತೆಯಲ್ಲಿ ಈ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಒಂದೂವರೆ ವರ್ಷದೊಳಗೆ ರಾಜ್ಯದಲ್ಲೇ ಮಾದರಿ ಬಸ್ ನಿಲ್ದಾಣ ನಿರ್ವಣವಾಗಲಿದೆ ಎಂದು ಭರವಸೆ ನೀಡಿದರು.

ನಿಲ್ದಾಣದ ಸುಂದರ ವಿನ್ಯಾಸ ಎಲ್ಲರ ಗಮನ ಸೆಳೆದಿತ್ತು. ಕೆಳ ಮಹಡಿಯಲ್ಲಿ ಸುಸಜ್ಜಿತ ವಾಹನ ರ್ಪಾಂಗ್ ವ್ಯವಸ್ಥೆ, ಮೊದಲ ಮಹಡಿಯಲ್ಲಿ ವಿಶಾಲವಾದ ಪ್ಲಾಟ್​ಫಾಮ್ರ್, ಎರಡನೇ ಮಹಡಿಯಲ್ಲಿ ಅಂಗಡಿ ಮಳಿಗೆಗಳು, ಮೂರನೇ ಮಹಡಿಯಲ್ಲಿ ಚಿತ್ರಮಂದಿರ ಹಾಗೂ ಮೇಲಂತಸ್ತಿನಲ್ಲಿ ರೆಸ್ಟೋರೆಂಟ್ ಸೇರಿ ನೂತನ ತಂತ್ರಜ್ಞಾನ ಅಳವಡಿಸಿದ ಹಡಗಿನ ಮಾದರಿ ಕಟ್ಟಡ ನಿರ್ವಣಕ್ಕೆ ನೀಲಿನಕ್ಷೆ ಸಿದ್ದವಾಗಿತ್ತು.

ಬಗೆಹರಿಯದ ಭೂ ವಿವಾದ: ಆರಂಭದಲ್ಲಿ ಕಾಮಗಾರಿ ಚುರುಕಾಗಿ ಸಾಗಿತ್ತು. ಆದರೆ, ಕಾಮಗಾರಿ ಅರಂಭವಾಗಿದ್ದ ಜಾಗದಲ್ಲಿ ಸುಮಾರು 5.5 ಗುಂಟೆ ಜಾಗ ನಮಗೆ ಸೇರಿದ್ದು ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿ ಕಾಮಗಾರಿಗೆ ತಡೆ ತಂದಿದ್ದಾರೆ. ಕಾಮಗಾರಿಯ ನೀಲಿನಕ್ಷೆಯಲ್ಲಿ ಈ ಜಾಗವೂ ಸೇರಿಕೊಂಡಿರುವ ಕಾರಣ ಕಾಮಗಾರಿ ಮುಂದುವರಿಸಲು ಸಾಧ್ಯವಾಗದೇ ಯೋಜನೆ ಹಳ್ಳ ಹಿಡಿದಿದೆ.

ಸಾರ್ವಜನಿಕರ ಆಕ್ರೋಶ: ಶಂಕುಸ್ಥಾಪನೆಗೆ ಮೊದಲೇ ಬಸ್ ನಿಲ್ದಾಣ ನಿರ್ವಣದ ಬಗ್ಗೆ ಹಲವು ವಿರೋಧಗಳಿದ್ದವು. ಅವುಗಳನ್ನು ಬಗೆಹರಿಸಿಕೊಳ್ಳದೇ ಏಕಾಏಕಿ ಹಳೇ ಖಾಸಗಿ ಬಸ್ ನಿಲ್ದಾಣವನ್ನು ತೆರವುಗೊಳಿಸಲಾಗಿತ್ತು. ಇದರಿಂದ ಈ ಸ್ಥಳದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಅದಲ್ಲದೇ ಈ ಜಾಗದಲ್ಲಿ ಖಾಸಗಿ ಬಸ್ ನಿಲುಗಡೆ ಮಾಡುತ್ತಿದ್ದರೂ ಇದೀಗ ಆ ಬಸ್ಸುಗಳು ಪಾದಚಾರಿ ಮಾರ್ಗದಲ್ಲಿ ನಿಲ್ಲಬೇಕಾಗಿದೆ. ಇದರಿಂದ ನಗರದ ಹೃದಯ ಭಾಗದಲ್ಲಿ ಸಂಚಾರ ಸಮಸ್ಯೆ ಉಂಟಾಗಿದೆ. ಹೀಗಾಗಿ ಏಕಾಏಕಿ ಕಾಮಗಾರಿ ಆರಂಭಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗಳೇ ಕ್ಷೇತ್ರದ ಶಾಸಕರಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣದ ವಿವಾದ ಪರಿಹರಿಸಿ, ಹೈಟೆಕ್ ಬಸ್ ನಿಲ್ದಾಣ ನಿರ್ವಣಕ್ಕೆ ಚಾಲನೆ ನೀಡಲಿ ಎಂಬ ಸಾರ್ವಜನಿಕ ಆಶಯಕ್ಕೆ ಸಿಎಂ ಸ್ಪಂದಿಸುತ್ತಾರಾ ಕಾದು ನೋಡಬೇಕಿದೆ.

ಖಾಸಗಿ ಬಸ್ ನಿಲ್ದಾಣದ 5.5 ಗುಂಟೆ ಭೂಮಿಗೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ಪ್ರಕರಣ ಇದ್ದು ನ್ಯಾಯಾಲಯದ ತೀರ್ಪು ದೊರೆಯುತ್ತಿದ್ದಂತೆ ಕಾಮಗಾರಿ ಮುಂದುವರೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

| ಸಿ. ಪುಟ್ಟಸ್ವಾಮಿ, ಪೌರಾಯುಕ್ತರು, ನಗರಸಭೆ

 

ಖಾಸಗಿ ಬಸ್ ಟರ್ವಿುನಲ್​ಗೆ ಸಂಬಂಧಿಸಿದಂತೆ ಭೂ ವಿವಾದ ಸೃಷ್ಟಿಯಾಗಿರುವುದೇ ಸಿಎಂ ಬೆಂಬಲಿಗರಿಂದ. ನಗರಸಭೆ ಮತ್ತು ಖಾಸಗಿ ವ್ಯಕ್ತಿಗಳ ಜತೆ ರ್ಚಚಿಸಲಿ, ವಿವಾದಿತ ಭೂಮಿ ಖಾಸಗಿ ವ್ಯಕ್ತಿಯದ್ದೇ ಆಗಿದ್ದರೆ ಅವರಿಗೆ ಸೂಕ್ತ ಪರಿಹಾರ ಕೊಡಿಸಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಮುಂದಾಗಲಿ. ಇಲ್ಲವಾದಲ್ಲಿ ಸಾರ್ವಜನಿಕರ ಪರವಾಗಿ ಹೋರಾಟ ನಡೆಸುತ್ತೇವೆ.

| ರಮೇಶ್​ಗೌಡ, ಅಧ್ಯಕ್ಷರು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ

Leave a Reply

Your email address will not be published. Required fields are marked *