ಹೈಟೆಕ್ ನಿಲ್ದಾಣದಲ್ಲಿಲ್ಲ ಸ್ವಚ್ಛತೆ

ಶಿವಲಿಂಗ ತೇಲ್ಕರ್​ ಆಳಂದ
ಇಲ್ಲೊಂದು ಬಸ್ ನಿಲ್ದಾಣ ಹೊರಗಿನಿಂದ ನೋಡಿದರೆ ಭರ್ಜರಿ ಹೈಟೆಕ್ ಆಗಿ ಕಾಣಿಸುತ್ತದೆ. ಆದರೆ ನಿಲ್ದಾಣದ ಒಳಗೆ ಪ್ರವೇಶಿಸಿದರೆ ಅಸ್ವಚ್ಛ ವಾತಾವರಣ, ಗಬ್ಬು ವಾಸನೆ ನಿಮ್ಮನ್ನು ಸ್ವಾಗತಿಸುತ್ತದೆ. ಇದು ತಾಲೂಕು ಕೇಂದ್ರದ ಬಸ್ ನಿಲ್ದಾಣದ ಸ್ಥಿತಿಯಾಗಿದೆ.

ಹೌದು. ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದ್ದು, ಆದರೆ ನಿಲ್ದಾಣದ ಅಧಿಕಾರಿಗಳ ನಿರ್ಲಕ್ಷೃ ಅಸ್ವಚ್ಛತೆ ತಾಂಡವವಾಡುತ್ತಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪಟ್ಟಣವಿದ್ದು, ಇಲ್ಲಿನ ನಿಲ್ದಾಣಕ್ಕೆ ನಿತ್ಯ ಸೊಲ್ಲಾಪುರ, ತುಳಜಾಪುರ, ಉಮರ್ಗಾ, ಪುಣೆ, ಮುಂಬಯಿ, ಔರಂಗಬಾದ್, ಔಸಾ ಸೇರಿ ವಿವಿಧ ಭಾಗಗಳಿಂದ ಬಸ್ಗಳು ಬರುತ್ತವೆ. ಆದರೆ ಸ್ವಚ್ಛತೆ ಇಲ್ಲದಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ನಿಲ್ದಾಣದ ಒಳ ಭಾಗದಲ್ಲಿಯೇ ಚರಂಡಿ ಇದ್ದು, ಸ್ವಚ್ಛಗೊಳಿಸದಿರುವುದರಿಂದ ಚರಂಡಿ ತುಂಬಿ ಕೊಳಚೆ ನೀರು ನಿಲ್ದಾಣದಲ್ಲಿ ಹರಿಯುತ್ತಿವೆ. ಇದರೊಂದ ಬಸ್ ಸಾ್ಟೃಂಡ್ ಕೆಸರುಮಯವಾಗಿದ್ದು, ಸಾಕಷ್ಟು ಪ್ರಯಾಣಿಕರು ಜಾರಿ ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳು ಇವೆ.

ನಿಲ್ದಾಣದಲ್ಲಿ ಬಸ್ಗಳ ವೇಳಾಪಟ್ಟಿ ಅಳವಡಿಸಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಸ್ವಚ್ಛತೆ ಶೂನ್ಯ. ಸಂಜೆ 5ರಿಂದ 7 ಗಂಟೆವರೆಗೆ ಕಲಬುರಗಿಗೆ ಯಾವುದೇ ಬಸ್ ಸೌಲಭ್ಯವಿಲ್ಲ. 7 ಗಂಟೆ ನಂತರದ ಬಸ್ನಲ್ಲಿ ಸಂಚರಿಸಬೇಕಾದರೆ ಕಳ್ಳರ ಭೀತಿ ಎದುರಾಗಿದೆ. ಇನ್ನು ನಿಲ್ದಾಣದಲ್ಲಿ ಪೊಲೀಸ್ ಸೇವೆ ಇಲ್ಲವೇ ಇಲ್ಲ.

ಈಗಲಾದರೂ ಸಂಬಂಧಿತ ಅಧಿಕಾರಿಗಳು ಇತ್ತ ಗಮನಹರಿಸಿ ಬಸ್ ನಿಲ್ದಾಣದ ಸಮಸ್ಯೆಗಳನ್ನು ಬಗೆಹರಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಎಲ್ಲರ ಒಕ್ಕೊರಲ ಒತ್ತಾಯವಾಗಿದೆ.

ಆಳಂದನಲ್ಲಿ ಹೇಳಿಕೊಳ್ಳುವುದಕ್ಕೆ ಮಾತ್ರ ಹೈಟೆಕ್ ಬಸ್ ನಿಲ್ದಾಣವಿದ್ದು, ಬಸ್ ಸಾ್ಟೃಂಡ್ನಲ್ಲಿ ಮೂಲ ಸೌಕರ್ಯಗಳೇ ಇಲ್ಲ. ನಿಲ್ದಾಣದಲ್ಲಿನ ಗಬ್ಬು ವಾಸನೆ ಪಕ್ಕದಲ್ಲಿರುವ ಮನೆ ಹಾಗೂ ಅಂಗಡಿಗಳಲ್ಲಿ ಹರಡುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.
| ಸೂರಜ್ ಪತಂಗೆ ಸ್ಥಳೀಯ ನಿವಾಸಿ

ಆಳಂದ ಬಸ್ ಘಟಕದ ವ್ಯವಸ್ಥಾಪಕರು ರಜೆಯಲ್ಲಿದ್ದಾರೆ. ಅವರು ಬಂದ ನಂತರ ನಿಲ್ದಾಣದಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತರಲಾಗುವುದು.
| ಆಳಂದ ಬಸ್ ಘಟಕದ ಸಿಬ್ಬಂದಿ

Leave a Reply

Your email address will not be published. Required fields are marked *