More

    ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯವಿದ್ದರೂ ಸಿಗ್ತಿಲ್ಲ ಚಿಕಿತ್ಸೆ

    ರಮೇಶ ಹಾರ್ಸಿಮನೆ ಸಿದ್ದಾಪುರ

    ಮೂಲಸೌಲಭ್ಯಗಳನ್ನು ಒಳಗೊಂಡಿರುವ ತಾಲೂಕಿನ ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್​ಸಿ) ಕಳೆದ ಎಂಟು ತಿಂಗಳಿನಿಂದ ವೈದ್ಯಾಧಿಕಾರಿಗಳಿಲ್ಲದೇ ಆಸ್ಪತ್ರೆ ಬಿಕೋ ಎನ್ನುವಂತಾಗಿದೆ. ವೈದ್ಯಾಧಿಕಾರಿಗಳ ವಸತಿ ಗೃಹ ಭೂತ ಬಂಗಲೆಯಂತಾಗಿದೆ.

    ನಿತ್ಯ 120ಕ್ಕೂ ಹೆಚ್ಚು ಹೊರರೋಗಿಗಳು ಬಂದು ಚಿಕಿತ್ಸೆ ಪಡೆದುಕೊಂಡು ಹೋಗುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗ ಬೆರಳೆಣಿಕೆಯಷ್ಟು ಜನ ಮಾತ್ರ ಬಂದು ಹೋಗುತ್ತಿದ್ದಾರೆ. ವಾರದಲ್ಲಿ ಎರಡು ದಿನ (ಮಂಗಳವಾರ ಹಾಗೂ ಶುಕ್ರವಾರ) ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಬಂದು ಹೋಗುತ್ತಾರೆ. ನಿತ್ಯ ಒಬ್ಬ ಶುಶ್ರೂಷಕಿ ಹಾಗೂ ಒಬ್ಬ ಅಟೆಂಡರ್ ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಸಮಾಧಾನ ಪಟ್ಟುಕೊಳ್ಳು ವಂತಾಗಿದೆ.

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 18 ಹುದ್ದೆ ಇದ್ದು, ಇದರಲ್ಲಿ 7 ಹುದ್ದೆಗಳನ್ನು ಮಾತ್ರ ತುಂಬಲಾಗಿದೆ. ಇನ್ನುಳಿದ 11ಹುದ್ದೆಗಳು ಖಾಲಿ ಇವೆ.

    ಖಾಲಿ ಇರುವ ಹುದ್ದೆ: ತಲಾ ಒಬ್ಬೊಬ್ಬ ವೈದ್ಯಾಧಿಕಾರಿ, ಹಿರಿಯ ಮಹಿಳಾ ಮತ್ತು ಹಿರಿಯ ಪುರುಷ ಆರೋಗ್ಯ ಸಹಾಯಕ, ಫಾರ್ವಸಿಸ್ಟ್, ಕಿರಿಯ ಪ್ರಯೋಗ ಶಾಲೆ ತಂತ್ರಜ್ಞ, ಕಿರಿಯ ಪುರುಷ ಆರೋಗ್ಯ ಸಹಾಯಕ, ದ್ವಿತೀಯ ದರ್ಜೆ ಸಹಾಯಕ. ಕ್ಲರ್ಕ್ ಕಂ ಟೈಪಿಸ್ಟ್, ವಾಹನ ಚಾಲಕ, ಡಿ ವರ್ಗದ ನೌಕರ, ಕಿರಿಯ ಪುರುಷ ಆರೋಗ್ಯ ಸಹಾಯಕ ಹುದ್ದೆಗಳು ಖಾಲಿ ಇವೆ.

    ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಹಳ್ಳಿಗಳ ಬಹುತೇಕರು ಕೃಷಿ ಹಾಗೂ ಕೃಷಿ ಕೂಲಿ ಮಾಡುವವರೇ ಆಗಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಯಾವುದಾದರೂ ಕಾಯಿಲೆಗೆ ಒಳಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರೆ ಇಲ್ಲಿ ವೈದ್ಯಾಧಿಕಾರಿಗಳು ಇಲ್ಲದೆ, ದೂರದ ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಕೇಂದ್ರಕ್ಕೆ ಅಥವಾ ಶಿರಸಿಗೆ ಹೋಗ ಬೇಕಾದ ಸ್ಥಿತಿ ಇಲ್ಲಿದೆ. ಬೆಳಗಿನ ವೇಳೆಯಾದರೆ ಹೇಗೋ ವಾಹನ ಹಿಡಿದುಕೊಂಡು ತಾಲೂಕು ಆಸ್ಪತ್ರೆ ತಲುಪಬಹುದು. ಒಂದು ವೇಳೆ ರಾತ್ರಿ ಹೊತ್ತು ಏನಾದರೂ ಆರೋಗ್ಯದಲ್ಲಿ ಏರುಪೇರಾದರೆ ಆಸ್ಪತ್ರೆ ತಲುಪಲಾಗದೇ ನರಳಾಟ ಅನುಭವಿಸಬೇಕಾಗುತ್ತದೆ.

    See also  ಮಾವಿನ ಹಣ್ಣು ತಿಂದು ಸಿಪ್ಪೆ ಬಿಸಾಡುವ ಬದಲು ಈ ರೀತಿ ಬಳಸಿ ಆಮೇಲೆ ಅದರ ಚಮತ್ಕಾರ ನೋಡಿ!

    ಹೀಗಾಗಿ, ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿಯನ್ನು ನೇಮಕ ಮಾಡುವುದಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಚ್ಚು ಗಮನ ನೀಡಬೇಕು. ಜನತೆಯ ಆಶೋತ್ತರಕ್ಕೆ ಸ್ಪಂದಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ವೈದ್ಯಾಧಿಕಾರಿಗಳ ವಸತಿಗೃಹ ಭೂತ ಬಂಗಲೆ: ಆಸ್ಪತ್ರೆಯ ಪಕ್ಕದಲ್ಲಿಯೇ ವೈದ್ಯಾಧಿಕಾರಿಗಳ ವಸತಿಗೃಹ ಇದೆ. ಆದರೆ, ಇಲ್ಲಿ ಯಾವ ವೈದ್ಯಾಧಿಕಾರಿಗಳು ವಸತಿ ಮಾಡಿಲ್ಲ. ಈಗ ಅದು ಭೂತ ಬಂಗಲೆಯಂತಾಗಿದೆ.

    ರಾಜ್ಯದಲ್ಲಿ 2 ಸಾವಿರ ವೈದ್ಯಾಧಿಕಾರಿ ಹುದ್ದೆ ನೇಮಕಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಮಟ್ಟದಲ್ಲಿ ಗುತ್ತಿಗೆ ಆದಾರದಲ್ಲಿ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ಹುದ್ದೆ ಭರ್ತಿ ಮಾಡುವ ಸಾಧ್ಯತೆ ಇದೆ. | ಡಾ.ಲಕ್ಷ್ಮೀಕಾಂತ ನಾಯ್ಕ ತಾಲೂಕು ಆರೋಗ್ಯಾಧಿಕಾರಿ ಸಿದ್ದಾಪುರ

    ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ ನೇಮಕ ಮಾಡಬೇಕು. ಬಡ ಕೂಲಿಕಾರರು ಪಟ್ಟಣಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ದುಸ್ತರವಾಗಿದೆ. ಜನಪ್ರತಿನಿಧಿಗಳು ಬಡವರ ಆರೋಗ್ಯದ ಕುರಿತು ಗಮನ ನೀಡುವಂತಾಗಬೇಕು. | ಮಂಜುನಾಥ ಗೌಡ ಅತ್ತಿಸವಲ್, ಸದಾಶಿವ ಹೆಗಡೆ ಭೀಮನಳ್ಳಿ ಕೃಷಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts