ಹೇಮೆಗಾಗಿ ಹೆದ್ದಾರಿ ಬಂದ್

ಗುಬ್ಬಿ : ಹೇಮಾವತಿ ನೀರು ಉಳಿವಿಗಾಗಿ ಆಗ್ರಹಿಸಿ ನಿಟ್ಟೂರು ಸರ್ಕಲ್​ನಲ್ಲಿ ರಾಷ್ಟ್ರೀಯ ಹೆದ್ದಾರಿ-206 ಬಂದ್ ಮಾಡಿದ ಬಿಜೆಪಿ ಕಾರ್ಯಕರ್ತರು ಮಾಜಿ ಸಂಸದ ಜಿ.ಎಸ್.ಬಸವರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರದಲ್ಲಿ ಕುತಂತ್ರದ ಕೆಲಸ ಮಾಡುತ್ತ ಜಿಲ್ಲೆಯ ರೈತರನ್ನು ನಾಶಮಾಡಲು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹೊರಟಿದ್ದಾರೆ ಎಂದು ಮಾಜಿ ಸಂಸದ ಜಿ.ಎಸ್ ಬಸವರಾಜು ಲೇವಡಿ ಮಾಡಿದರು.

ಗುಬ್ಬಿ ತಾಲೂಕಿನ ಹೇಮಾವತಿ ನೀರಿನ ಕೆನಾಲ್ 73ನೇ ಕಿ.ಮೀ ಸುಂಕಾಪುರದಿಂದ ಮಾಗಡಿ ತಾಲೂಕು ಮತ್ತು ಇತರೆ ಭಾಗಗಳಿಗೆ ಲಿಂಕಿಂಗ್ ಕೆನಲ್ ನಿರ್ವಿುಸಲು ಡಿಕೆ ಸಹೋದರರು ಹೊರಟಿದ್ದಾರೆ. ನಮ್ಮ ಜಿಲ್ಲೆಯ ರೈತರ ಗತಿಯೇನು ?

ಹೇಮಾವತಿ ನಾಲೆಯ ವಿಸ್ತಾರ ಮಾಡಿ ಹೆಚ್ಚು ನೀರು ಹರಿಸಿಕೊಳ್ಳಲಿ, ಅದನ್ನು ಬಿಟ್ಟು ನಮಗೆ ಬರುವ ಅಲ್ಪ ನೀರು ಕಿತ್ತುಕೊಂಡರೆ, ನಾವು ಬಳೆತೊಟ್ಟಿಲ್ಲ ಎಂದು ಡಿಕೆ ಸಹೋದರರಿಗೆ ಎಚ್ಚರಿಸಿದರು.

ಒಳ್ಳೆಯದಾಗಲ್ಲ: ಸ್ವಾರ್ಥಕ್ಕೆ ಅಧಿಕಾರ ಬಳಸಿಕೊಳ್ಳಬೇಡಿ, ಇದರಿಂದ ನಿಮಗಾಗಲಿ, ನಿಮ್ಮ ಕುಟುಂಬಕ್ಕಾಗಲಿ ಒಳ್ಳೆಯದಾಗಲ್ಲ. ನಿಮ್ಮ ಭಾಗಗಳಿಗೆ ನೀರು ಬರುತ್ತಿಲ್ಲವೆಂದು, ನಮ್ಮ ಕಾಲುವೆಯಲ್ಲಿ ಹರಿಯುವ ನೀರು ನಿಲುಗಡೆ ಮಾಡಿರುವುದು ಸರಿಯೇ ಎಂದು ಎಚ್.ಡಿ.ರೇವಣ್ಣ ಅವರನ್ನು ಜಿ.ಎಸ್.ಬಸವರಾಜು ಪ್ರಶ್ನೆ ಮಾಡಿದರು.

ಡೈನಾಮೆಂಟ್ ಇಟ್ಟು ನಾಲೆ ಹೊಡೆಯುವ ನೀವು ದೇಶವನ್ನು ಹೇಗೆ ಅಭಿವೃದ್ಧಿ ಮಾಡುತ್ತಿರಾ ? ಈ ಬಗ್ಗೆ ನಮ್ಮಜಿಲ್ಲೆಯ ಸಚಿವರೂ ತುಟಿ ಬಿಚ್ಚುವುದಿಲ್ಲ. ಬಿಚ್ಚಿದರೆ ಅಧಿಕಾರ ಕಳೆದುಕೊಳ್ಳುವ ಭಯದಲ್ಲೇ ಇದ್ದಾರೆ. ರೈತರ ಸಮಸ್ಯೆ ಕೇಳುವುದು ಬಿಟ್ಟು ಫಾರಿನ್​ಟೂರ್ ಮಾಡುತ್ತಿದ್ದಾರೆ. ಹೇಮಾವತಿ ಅಧಿಕಾರಿಗಳನ್ನು ಕೇಳಿದರೆ 19 ಟಿಎಂಸಿ ನೀರು ಹರಿದಿದೆ ಎನ್ನುತ್ತಾರೆ, ಆದರೆ ತಾಲೂಕಿನ ಕೆರೆಗಳು ತುಂಬಿಲ್ಲ. ಸಚಿವರ ಗ್ರಾಮದ ಕೆರೆಗಳನ್ನೆ ತುಂಬಿಸಲು ಸಾಧ್ಯವಾಗಿಲ್ಲ ಎಂದು ಕುಟುಕಿದರು.

ಜಿಪಂ ಮಾಜಿ ಸದಸ್ಯ ಚಂದ್ರಶೇಖರ್​ಬಾಬು, ಮುಖಂಡ ಜಿ.ಎನ್ ಬೆಟ್ಟಸ್ವಾಮಿ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಅ.ನಾ.ಲಿಂಗಪ್ಪ, ಜಿಪಂ ಸದಸ್ಯರಾದ ಡಾ.ನವ್ಯಬಾಬು, ಯಶೋದಮ್ಮ, ಜಗನ್ನಾಥ್, ತಾಪಂ ಅಧ್ಯಕ್ಷೆ ಅನಸೂಯಾ, ಉಪಾಧ್ಯಕ್ಷೆ ಕಲ್ಪನಾ, ಸದಸ್ಯೆ ಮಮತಾ, ಮುಖಂಡರಾದ ಅಶ್ವತ್ಥ್ ನಾರಾಯಣ್, ಸಾಗರನಹಳ್ಳಿ ವಿಜಯ್ಕುಮಾರ್, ಪಪಂ ಸದಸ್ಯರಾದ ಶಿವಕುಮಾರ್, ಶಶಿಕುಮಾರ್, ಕೃಷ್ಣಮೂರ್ತಿ, ಅಣ್ಣಪ್ಪಸ್ವಾಮಿ, ಮುಖಂಡರಾದ ನಂಜೆಗೌಡ, ಪಂಚಾಕ್ಷರಿ, ನರಸೇಗೌಡ, ಎನ್.ಸಿ.ಪ್ರಕಾಶ್ ಇದ್ದರು.

ಎತ್ತಿನಹೊಳೆ ಯೋಜನೆ ಜಾರಿಯಾದರೆ 135 ರಿಂದ 140 ಟಿಎಂಸಿ ನೀರು ತರಲು ಅವಕಾಶವಿದ್ದು, 4500 ಕೆರೆಗಳು ತುಂಬಲಿವೆ. ಒಳ್ಳೆಯ ಕೆಲಸ ಮಾಡುವುದು ಬಿಟ್ಟು ರೈತರ ಜೀವನ ಹಾಳು ಮಾಡಲು ಹೊರಟಿದ್ದಾರೆ. ನ್ಯಾಯ ಸಿಗದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ, ವಿಧಾನಸೌಧ ಚಲೋ, ಸೇರಿ ಉಗ್ರ ಪ್ರತಿಭಟನೆ ಮಾಡುತ್ತೇವೆ.

| ಜಿ.ಎಸ್.ಬಸವರಾಜು, ಮಾಜಿ ಸಂಸದ

ರೈತರು ಸುಮ್ಮನೆ ಬಿಡಲ್ಲ : ಮಣ್ಣಿನ ಮಕ್ಕಳು ಎಂದು ಹೇಳಿಕೊಂಡೆ ಪೊಳ್ಳು ಭರವಸೆ ನೀಡಿ ಅಧಿಕಾರ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಗೆ ಹರಿಯುತ್ತಿರುವ ಹೇಮಾವತಿ ನೀರನ್ನು ಮಾಗಡಿ ಭಾಗಗಳಿಗೆ ತೆಗೆದುಕೊಂಡು ಹೋಗಲು ಸಮ್ಮಿಶ್ರ ಸರ್ಕಾರ ಸಂಚು ಮಾಡುತ್ತಿರುವುದು ಸರಿಯಲ್ಲ. ಇದು ಮುಂದುವರಿದಲ್ಲಿ ಜಿಲ್ಲೆಯ ರೈತರು ನಿಮ್ಮನ್ನು ಸುಮ್ಮನೆ ಬೀಡುವುದಿಲ್ಲ ಎಂದು ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಶಿವಪ್ರಕಾಶ್ ಎಚ್ಚರಿಸಿದರು.