ಹೆಸರು ಬಿತ್ತನೆ ಪ್ರಮಾಣ ಕುಸಿತ

ಗದಗ:ಜಿಲ್ಲಾದ್ಯಂತ ಮುಂಗಾರು ಮಳೆ ವಿಫಲವಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗುತ್ತಿತ್ತು. ಆದರೆ, ಮಳೆ ಬಾರದ ಹಿನ್ನೆಲೆಯಲ್ಲಿ ಬಿತ್ತನೆ ಕ್ಷೀಣಿಸಿದೆ.

ಪ್ರಸಕ್ತ ಮುಂಗಾರು ಅವಧಿಯಲ್ಲಿ ಕೃಷಿ ಇಲಾಖೆ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಇದೆ. ಆದರೆ, ಮಳೆಯ ಅಭಾವದಿಂದ ಜೂ. 15ರವರೆಗೂ ಕೇವಲ 30,577(ಶೇ. 30.6) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಬರದಿದ್ದರೆ ಅದೂ ಕೈ ತಪ್ಪುವ ಹಾದಿಯಲ್ಲಿದೆ.

ಒಟ್ಟಾರೆ ಬಿತ್ತನೆ ಕ್ಷೇತ್ರ: 2019-20ನೇ ಸಾಲಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 2.45 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದೆ. ಜೂ. 15ರವರೆಗೂ ಜಿಲ್ಲೆಯಲ್ಲಿ 6,720 ಹೆಕ್ಟೇರ್ ನೀರಾವರಿ, 36,994 ಖುಷ್ಕಿ ಸೇರಿ ಕೇವಲ 43,714 ಹೆಕ್ಟೇರ್ (ಶೇ. 17.8ರಷ್ಟು) ಬಿತ್ತನೆಯಾಗಿದೆ. ಮೆಕ್ಕೆಜೋಳ 45,000 ಹೆಕ್ಟೇರ್ ಗುರಿ ಪೈಕಿ 5,407, ಜೋಳ 5,500 ಹೆಕ್ಟೇರ್ ಗುರಿ ಪೈಕಿ 264, ತೊಗರಿ 3,000 ಹೆಕ್ಟೇರ್ ಪೈಕಿ 227, ಶೇಂಗಾ 44,000 ಹೆಕ್ಟೇರ್ ಪೈಕಿ 848, ಸೂರ್ಯಕಾಂತಿ 6,000 ಹೆಕ್ಟೇರ್ ಗುರಿ ಪೈಕಿ 315 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ಮಳೆ ವಿವರ: ಜನವರಿಯಿಂದ ಜೂನ್ 15ರವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಪ್ರಮಾಣದ 196.5 ಮಿ.ಮೀ. ಮಳೆ ಪೈಕಿ ಕೇವಲ 75.8 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಗೆ ಜಿಲ್ಲೆಯಲ್ಲಿ 206 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯ ಗದಗ, ನರಗುಂದ ಹಾಗೂ ರೋಣ ತಾಲೂಕಿನಲ್ಲಿ ಪ್ರಸಕ್ತ ವರ್ಷದ ಮುಂಗಾರು ಪೂರ್ವ ಮಳೆ ಅಲ್ಪ ನೆಮ್ಮದಿ ಮೂಡಿಸಿದೆ. ಮೇ ಅಂತ್ಯಕ್ಕೆ ಗದಗ ತಾಲೂಕಿನಲ್ಲಿ 214 ಮಿ.ಮೀ. ವಾಡಿಕೆ ಮಳೆ ಪೈಕಿ 136.5 ಮಿ.ಮೀ., ರೋಣ ತಾಲೂಕಿನಲ್ಲಿ 199.2 ಮಿ.ಮೀ. ವಾಡಿಕೆ ಮಳೆ ಪೈಕಿ 91.8 ಮಿ.ಮೀ., ಹಾಗೂ ನರಗುಂದ ತಾಲೂಕಿನಲ್ಲಿ 181.1 ಮಿ.ಮೀ. ವಾಡಿಕೆ ಮಳೆ ಪೈಕಿ 79 ಮಿ.ಮೀ ಮಳೆಯಾಗಿದೆ. ಉಳಿದಂತೆ ಶಿರಹಟ್ಟಿ ತಾಲೂಕಿನಲ್ಲಿ 223 ಮಿ.ಮೀ. ವಾಡಿಕೆ ಮಳೆ ಪೈಕಿ 29.5 ಮಿ.ಮೀ., ಹಾಗೂ ಮುಂಡರಗಿ ತಾಲೂಕಿನಲ್ಲಿ 165.5 ಮಿ.ಮೀ. ವಾಡಿಕೆ ಮಳೆ ಪೈಕಿ ಕೇವಲ 42.1 ಮಿ.ಮೀ. ಮಳೆಯಾಗಿದೆ.

ಕಳೆದ ವರ್ಷ ಅಲ್ಪಸ್ವಲ್ಪ ಮಳೆಗೆ ಮೂರು ಎಕರೆ ಹೆಸರು ಬಿತ್ತನೆ ಮಾಡಿದ್ದರಿಂದ, ಎಕರೆಗೆ ಅರ್ಧ ಚೀಲದಷ್ಟು ಹೆಸರು ಇಳುವರಿ ಬಂದಿತ್ತು. ಪ್ರಸಕ್ತ ವರ್ಷ ಹೆಸರು ಬಿತ್ತನೆ ಅವಧಿಯವರೆಗೂ ಸಮರ್ಪಕ ಮಳೆಯಾಗದ ಕಾರಣ ಹೆಸರು ಬಿತ್ತನೆ ಸಾಧ್ಯವಾಗಲಿಲ್ಲ.

| ಮಾರುತಿ ತಳವಾರ

ಹೊಳೆಮಣ್ಣೂರ ಗ್ರಾಮದ ರೈತ

Leave a Reply

Your email address will not be published. Required fields are marked *