ಹೆಸರು ಖರೀದಿ ಪ್ರಕ್ರಿಯೆ ನಿರಾತಂಕ

ಗದಗ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಪ್ರಕ್ರಿಯೆ ನಿರಾತಂಕವಾಗಿ ನಡೆದಿದ್ದು, ರೈತರು ಬಂದಷ್ಟು ಬರಲಿ ಎಂದು ಮಾರಾಟ ಮಾಡಿ ತೆರಳುತ್ತಿದ್ದಾರೆ. ಇನ್ನೊಂದಡೆ ನಾಪೆಡ್ (ರಾಷ್ಟ್ರೀಯ ಕೃಷಿ ಸಹಕಾರ ಮಹಾಮಂಡಳ) ತೇವಾಂಶ ಕೊರತೆ ಇರುವ ಹೆಸರು ಕಾಳು ಖರೀದಿ ಪ್ರಕಿಯೆ ಸ್ಥಗಿತಗೊಳಿಸಲು ಆದೇಶಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಸದ್ಯ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿರುವ ಪ್ರತಿ ರೈತನಿಂದ ತಲಾ 4 ಕ್ವಿಂಟಾಲ್​ನಂತೆ ಒಟ್ಟು 5600 ರೈತರಿಂದ 21 ಸಾವಿರ ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಲಾಗಿದೆ. ಅ. 25ರ ವರೆಗೆ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ. ಜಿಲ್ಲೆಗೆ 48,830 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಲು ಅವಕಾಶವಿದ್ದು, ನಿಗದಿತ ಅವಧಿಯಲ್ಲಿ ಗುರಿ ಮುಟ್ಟಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಗೆ ನೀಡಿರುವ ಮಿತಿಗಿಂತ ಮೂರು ಪಟ್ಟು ರೈತರು ನೋಂದಣಿ ಮಾಡಿಕೊಂಡಿದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ರೈತರು ಗಲಾಟೆ ಮಾಡಬಹುದು ಎಂಬ ಕಾರಣದಿಂದ ಎಂಟತ್ತು ದಿನಗಳ ಕಾಲ ಖರೀದಿ ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ರೈತರು ಅನೇಕ ಸಲ ಪ್ರತಿಭಟನೆ ಮಾಡಿದರೂ ಸರ್ಕಾರ ಸ್ಪಂದಿಸದೇ ಇರುವುದನ್ನು ಮನಗಂಡ ರೈತರು ಅನಿವಾರ್ಯವಾಗಿ 4 ಕ್ವಿಂಟಾಲ್ ಹೆಸರು ಮಾರಾಟ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿರುವ 30 ಖರೀದಿ ಕೇಂದ್ರಗಳ ಪೈಕಿ ಹರ್ತಿ ಮತ್ತು ಸುರಕೋಡ ಹೊರತುಪಡಿಸಿ ಉಳಿದ 28 ಕೇಂದ್ರಗಳಲ್ಲಿ ನಿರಾತಂಕವಾಗಿ ಖರೀದಿ ಪ್ರಕ್ರಿಯೆ ನಡೆದಿದೆ. ಎರಡು ಕೇಂದ್ರಗಳಲ್ಲಿ ತಾಂತ್ರಿಕ ಕಾರಣಗಳಿಂದ ಪ್ರಕ್ರಿಯೆ ಬಂದ್ ಮಾಡಲಾಗಿದೆ.

ತೇವಾಂಶ ಕೊರತೆಯಿಂದ ಹೆಸರು ಕಾಳು ಒಣಗುವ ಹಂತ ತಲುಪಿದ್ದು, ಶೇ. 12ರಷ್ಟು ತೇವಾಂಶ ಇರುವ ಹೆಸರು ಕಾಳು ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ರಾಷ್ಟ್ರೀಯ ಕೃಷಿ ಸಹಕಾರ ಮಹಾಮಂಡಳ (ನಾಪೆಡ್) ಆದೇಶಿಸಿರುವುದು ರೈತರ ನಿದ್ದೆಗೆಡಿಸಿದೆ. ಮಳೆ ಕೊರತೆಯಿಂದ ಬೆಳೆಗಳು ಒಣಗಿಹೋಗಿವೆ. ಇಂತಹ ಸಮಯದಲ್ಲಿ ತೇವಾಂಶ ಕೊರತೆ ಎಂದು ಖರೀದಿ ಪ್ರಕ್ರಿಯೆ ಕೈಬಿಟ್ಟರೆ ಮುಂದೇನು ಮಾಡಬೇಕೆಂದು ತಿಳಿಯದಂತಹ ಸ್ಥಿತಿ ಇದೆ. ಸದ್ಯ ಜಿಲ್ಲೆಯಲ್ಲಿ ತೇವಾಂಶ ಕೊರತೆ ಹಿನ್ನಲೆಯಲ್ಲಿ ಖರೀದಿಸಲು ನಿರಾಕರಿಸಿದ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿವೆ.

ಸರ್ಕಾರ ನಿಗದಿಪಡಿಸಿದಂತೆ ಹೆಸರು ಕಾಳು ಖರೀದಿ ಜಿಲ್ಲೆಯಲ್ಲಿ ಸರಳವಾಗಿ ನಡೆದಿದೆ. ಯಾವುದೇ ತೊಂದರೆ ಇಲ್ಲ. ತೇವಾಂಶಕ್ಕೆ ಸಂಬಂಧಿಸಿದಂತೆ ಕೊಂಚ ಏರುಪೇರು ಇದ್ದರೂ ಖರೀದಿ ಮಾಡಲಾಗುತ್ತಿದೆ. ರೈತರು ಸಹಕಾರ ನೀಡುತ್ತಿರುವುದರಿಂದ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ.

| ಶ್ರೀಕಾಂತ, ಜಿಲ್ಲಾ ವ್ಯವಸ್ಥಾಪಕ ಸಹಕಾರ ಮಾರಾಟ ಮಹಾಮಂಡಳ, ಗದಗ