ಹೆಲ್ಮೆಟ್ ಧರಿಸಿ ಬೈಕ್ ರ‍್ಯಾಲಿ

ರಾಣೆಬೆನ್ನೂರ:ಜಿಲ್ಲಾ ಸ್ವೀಪ್ ಸಮಿತಿ, ತಾಪಂ, ನಗರಸಭೆ, ತಾಲೂಕು ಆಡಳಿತದ ವತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಬೈಕ್ ರ‍್ಯಾಲಿ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ತಪ್ಪನ್ನು ಸಾವರಿಸಿಕೊಳ್ಳಲು ಮುಂದಾದ ಸಂಚಾರ ಠಾಣೆ ಪೊಲೀಸರು ಬೆರಳೆಕೆಯಷ್ಟು ನೌಕರರಿಗೆ 100 ರೂ. ದಂಡ ಹಾಕಿ ಕೈ ತೊಳೆದುಕೊಂಡಿದ್ದಾರೆ.

ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ. ಲೀಲಾವತಿ ರ್ಯಾಲಿಗೆ ಚಾಲನೆ ನೀಡಿದ್ದರು. ನಗರದ ತಹಸೀಲ್ದಾರ್ ಕಚೇರಿಯಿಂದ ಆರಂಭಗೊಂಡ ಬೈಕ್ ರ‍್ಯಾಲಿ ಎಂ.ಜಿ. ರಸ್ತೆ, ಪೋಸ್ಟ್ ವೃತ್ತ, ಪಿ.ಬಿ. ರಸ್ತೆ, ದೊಡ್ಡಪೇಟೆ, ಬಸ್ ನಿಲ್ದಾಣ, ಕೋರ್ಟ್ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು.

ತಹಸೀಲ್ದಾರ್ ಎ.ಎಸ್. ಕುಲಕರ್ಣಿ, ತಾಪಂ ಇಒ ಡಾ. ಬಸವರಾಜ, ನಗರಸಭೆ ಆಯುಕ್ತ ಡಾ. ಮಹಾಂತೇಶ ಸೇರಿ ಎಲ್ಲ ಅಧಿಕಾರಿಗಳು ಸ್ಥಳದಲ್ಲಿದ್ದರೂ ಕಾನೂನು ಉಲ್ಲಂಘನೆ ಕುರಿತು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ನ್ಯಾಯಾಂಗದ ನೀತಿ, ನಿಯಮ ಪಾಲಿಸುವ ಜತೆಗೆ ನ್ಯಾಯಾಂಗದ ಆದೇಶ ಉಲ್ಲಂಘಿಸುವ ಸಾರ್ವಜನಿಕರಿಗೆ ಬುದ್ಧಿ ಹೇಳುವ ಅಧಿಕಾರಿಗಳೇ ಈ ರೀತಿ ನಡೆದುಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಚಾರ ಠಾಣೆ ಪೊಲೀಸರು ನೆಪಮಾತ್ರಕ್ಕೆ ಕೆಲವರಿಂದ ದಂಡ ಕಟ್ಟಿಸಿಕೊಂಡಿದ್ದಾರೆ. ಆದರೆ ರ್ಯಾಲಿಯಲ್ಲಿ ಪೊಲೀಸರನ್ನು ಹೊರತು ಪಡಿಸಿ ಇನ್ನುಳಿದ ನೂರಾರು ನೌಕರರು ಹೆಲ್ಮೆಟ್ ಧರಿಸಿರಲಿಲ್ಲ. ಆದ್ದರಿಂದ ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಹೆಲ್ಮೆಟ್ ಧರಿಸದ ಪ್ರತಿಯೊಬ್ಬರಿಂದಲೂ ದಂಡ ವಸೂಲಿ ಮಾಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಭಾನುವಾರ ನಡೆದ ಮತದಾನ ಜಾಗೃತಿ ಬೈಕ್ ರ್ಯಾಲಿಯಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ 15ರಿಂದ 20 ಜನರಿಗೆ ತಲಾ 100 ರೂ. ದಂಡ ಹಾಕಲಾಗಿದೆ.

| ಜಯಪ್ಪ ನಾಯಕ ಬಿ.ಎಲ್., ಸಂಚಾರ ಠಾಣೆ ಪಿಎಸ್​ಐ ರಾಣೆಬೆನ್ನೂರ

Leave a Reply

Your email address will not be published. Required fields are marked *