More

  ಹೆಲಿಪೋರ್ಟ್ ಸ್ಥಾಪನೆ, ಹೆರಿಟೇಜ್ ಹೋಂಸ್ಟೇಗೆ ಪ್ರೋತ್ಸಾಹ

  ಧಾರವಾಡ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ಹೆಲಿಪೋರ್ಟ್ ಸ್ಥಾಪಿಸಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ ತಾಣಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಿಸಲು ಮತ್ತು ಜಿಲ್ಲೆಯಲ್ಲಿ ಹೆರಿಟೇಜ್ ಹೋಂ ಸ್ಟೇ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್​ಕುಮಾರ ಪಾಂಡೆ ಹೇಳಿದರು.

  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲೆಯಲ್ಲಿ ಕೈಗೊಂಡ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ದೇಶದ ವಿವಿಧ ಪ್ರಮುಖ ನಗರಗಳಿಂದ ಹುಬ್ಬಳ್ಳಿಗೆ ನೇರ ವಿಮಾನ ಸಂಪರ್ಕ ಇರುವುದರಿಂದ ಹೆಲಿಪೋರ್ಟ್ ಸ್ಥಾಪಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಭಾರತ ಸರ್ಕಾರದ ಉಡಾನ್ ಯೋಜನೆ ನೆರವಾಗುತ್ತಿದೆ. ಮಂಗಳೂರು, ಮುಂಬೈ ಭಾಗದಿಂದ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅವರಿಗೆ ಸೂಕ್ತ ಮೂಲಸೌಲಭ್ಯ ಹಾಗೂ ಉತ್ತಮ ಪ್ರವಾಸಿ ಸೌಲಭ್ಯ ನೀಡುವುದು ಇಲಾಖೆಯ ಆದ್ಯತೆಯಾಗಿದೆ ಎಂದರು.

  ಕರ್ನಾಟಕ ಟೂರಿಸಂ ಸೊಸೈಟಿ ರಚಿಸುತ್ತಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲರ ಸಹಕಾರದಿಂದ ಈ ಸೊಸೈಟಿ ಮೂಲಕ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಜನಪ್ರಿಯತೆಗೆ ಯೋಜನೆ ರೂಪಿಸಲಾಗುವುದು ಎಂದರು.

  ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಉಣಕಲ್ಲ ಕೆರೆಯಲ್ಲಿ ಜಲಕ್ರೀಡೆಗೆ ಅಗತ್ಯವಿರುವ ಸಲಕರಣೆ, ಯಂತ್ರ ನೀಡಿ ಪ್ರೋತ್ಸಾಹಿಸಬೇಕು. ನೀರಸಾಗರದಲ್ಲಿ ವಾಟರ್ ಪಾರ್ಕ್ ನಿರ್ವಿುಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದು. ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಜಿಲ್ಲೆಗೆ ಮಾವು ಬೆಳೆ ಆಯ್ಕೆಯಾಗಿದ್ದು, ಅಗ್ರಿ ಟೂರಿಸಂ ಜತೆ ಮ್ಯಾಂಗೋ ಟೂರಿಸಂ ಬೆಳೆಸಬೇಕು ಎಂದರು.

  ನೃಪತುಂಗ ಬೆಟ್ಟದಲ್ಲಿ ರೋಪ್ ವೇ ಜತೆಗೆ ಅಡ್ವೆಂಚರ್ಸ್ ಚಟುವಟಿಕೆ ಹಮ್ಮಿಕೊಳ್ಳಲು ಮತ್ತು ಯಮನೂರು ಪ್ರವಾಸಿ ತಾಣ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ನೆರವು ಅಗತ್ಯವಿದೆ. ಹು-ಧಾ ಅವಳಿ ನಗರಗಳು ಚಿತ್ರಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ ಮತ್ತು ಜಾನಪದ ಕಲೆಗಳಿಗೆ ಹೆಸರಾಗಿವೆ. ಇವುಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಒಂದೇ ಸೂರಿನಡಿ ತರಲು ನಗರದ ಹೃದಯಭಾಗದಲ್ಲಿರುವ ಸಪ್ತಾಪುರದ ಸರ್ಕಾರಿ ಜಮೀನಿನಲ್ಲಿ ಕಲಾಗ್ರಾಮ ಸ್ಥಾಪಿಸಲು ಯೋಜನೆ ಸಿದ್ಧಗೊಳಿಸಲಾಗಿದೆ. ಈ ಪ್ರಸ್ತಾವನೆಗೆ ಪ್ರವಾಸೋದ್ಯಮ ಇಲಾಖೆ ಅನುದಾನ ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

  ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ತಹಸೀಲ್ದಾರ್ ಡಾ. ಸಂತೋಷ ಬಿರಾದಾರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

  ಧಾರವಾಡ ಜಿಲ್ಲೆಯಲ್ಲಿ ಅಗ್ರಿ ಟೂರಿಸಂ ಬೆಳೆಸಲು ಯೋಜನೆ ರೂಪಿಸಲಾಗುತ್ತಿದೆ. ಸಾಧನಕೇರಿ, ಕೆಲಗೇರಿ ಕೆರೆ, ಉಣಕಲ್ಲ ಕೆರೆ, ನೀರಸಾಗರ ಕೆರೆಗಳನ್ನು ಅಭಿವೃದ್ಧಿಪಡಿಸಿ ಉತ್ತಮ ಪ್ರವಾಸಿ ತಾಣಗಳನ್ನಾಗಿ ರೂಪಿಸಲಾಗುವುದು.
  | ಪಂಕಜ್​ಕುಮಾರ ಪಾಂಡೆ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts