ಹೆರಿಗೆ ವೇಳೆ ಶಿಶು ಸಾವು

ಆನೇಕಲ್: ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಗೆ ಶುಶ್ರೂಷಕಿಯೇ ಹೆರಿಗೆ ಮಾಡಿಸಿದ್ದರಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಪಾಲಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಜಿಗಣಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ದಾವಣಗೆರೆ ಮೂಲದ ಶಶಿಧರ್ ಪತ್ನಿ ರಂಜಿತಾ ಮೊದಲ ಹೆರಿಗೆಗೆಂದು ತಾಲೂಕಿನ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಾನುವಾರ ದಾಖಲಾಗಿದ್ದರು.

ಭಾನುವಾರವಾದ ಕಾರಣ ಆಸ್ಪತ್ರೆಯಲ್ಲಿ ಶುಶ್ರೂಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದರು. ರಂಜಿತಾರನ್ನು ತಪಾಸಣೆ ನಡೆಸಿದ ಸಿಬ್ಬಂದಿ ಸಾಮಾನ್ಯ ಹೆರಿಗೆ ಆಗುತ್ತದೆ ಎಂದು ತಿಳಿಸಿದ್ದರು. ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿತು. ಆದರೆ ವೈದ್ಯರಿಲ್ಲದ ಕಾರಣ ನರ್ಸ್​ಗಳೇ ಹೆರಿಗೆ ಮಾಡಿಸಲು ಮುಂದಾಗಿದ್ದು, ಈ ವೇಳೆ ಮಗುವಿಗೆ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿದೆ ಎನ್ನಲಾಗಿದೆ. ಚಿಕಿತ್ಸೆಗೆ ಬೇರೆಡೆಗೆ ಕರೆದುಕೊಂಡು ಹೋಗಿ ಎಂಬ ನರ್ಸ್ ಸಲಹೆ ಮೇರೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದರು ಎಂದು ಪತಿ ಶಶಿಧರ್ ತಿಳಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ. ದಿನದ 24 ಗಂಟೆ ಹೆರಿಗೆ ಸೌಲಭ್ಯವಿದೆ ಎಂದು ನಾಮಫಲಕ ಇದ್ದರೂ ಸಹ ವೈದ್ಯರಿಲ್ಲ. ಹೀಗಾಗಿ ಇಲ್ಲಿನ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಗುವಿನ ಪಾಲಕರು ಆಸ್ಪತ್ರೆ ಎದುರು ಆಗ್ರಹಿಸಿದರು.

ಜಿಗಣಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿಎಸ್​ಐ ಭಾಸ್ಕರ್, ಮಗುವಿನ ತಂದೆ ಶಶಿಧರ್ ಹಾಗೂ ಆಸ್ಪತ್ರೆ ಸಿಬ್ಬಂದಿ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.

ತಪ್ಪಿತಸ್ಥರ ವಿರುದ್ಧಕ್ರಮಕ್ಕೆ ಪಟ್ಟು:

ಇಲ್ಲಿಯವರೆಗೂ ಈ ರೀತಿಯ ಪ್ರಕರಣ ಆಸ್ಪತ್ರೆಯಲ್ಲಿ ನಡೆದಿಲ್ಲ. ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರಿರುವ ಕಾರಣ ದಿನದ 24 ಗಂಟೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇದಕ್ಕೆ ಸಿಬ್ಬಂದಿ ನಿರ್ಲಕ್ಷ್ಯವೇ ಪ್ರಮುಖ ಕಾರಣ. ತಪ್ಪಿತಸ್ಥರ ವಿರುದ್ಧ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೆರಿಗೆ ಮಾಡಿಸಿದ ಶುಶ್ರೂಷಕಿಯನ್ನು ವರ್ಗಾವಣೆ ಮಾಡಿ, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮಗು ಕಳೆದುಕೊಂಡಿರುವ ಪಾಲಕರನ್ನು ಸಂರ್ಪಸಿ ಅವರಿಂದ ಮಾಹಿತಿ ಪಡೆಯಲಾಗುವುದು.

| ಡಾ. ಜ್ಞಾನಪ್ರಕಾಶ್, ತಾಲೂಕು ವೈದ್ಯಾಧಿಕಾರಿ, ಆನೇಕಲ್

Leave a Reply

Your email address will not be published. Required fields are marked *