ಚಾಮರಾಜನಗರ: ಆನೆಮಡುವಿನ ಕೆರೆಗೆ ನೀರು ಹರಿಸುವ ಕಾರ್ಯಕ್ರಮ ಮುಂದೂಡಿದ್ದನ್ನು ಖಂಡಿಸಿ ಉಡಿಗಾಲ ಹಾಗೂ ವೀರನಪುರ ಗ್ರಾಮಸ್ಥರು ತಾಲೂಕಿನ ಉಡಿಗಾಲ ಗ್ರಾಮದ ಬಳಿ ಬುಧವಾರ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಉಡಿಗಾಲ ಗ್ರಾಮದ ಚಾಮರಾಜನಗರ-ಗುಂಡ್ಲುಪೇಟೆ ರಾಜ್ಯ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಉಡಿಗಾಲ ಬಳಿ ಇರುವ ಆನೆಮಡುವಿನ ಕೆರೆಗೆ ನೀರು ತುಂಬಿಸುವ ನಿಟ್ಟಿನಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ಪೂರ್ಣಗೊಂಡಿತ್ತು. ಅಲ್ಲದೆ, ತಮ್ಮಡಹಳ್ಳಿ ಕೆರೆ ಹಾಗೂ ಉತ್ತೂರು ಕೆರೆಯ ನಡುವೆ ಪೈಪ್‌ಲೈನ್ ಮೂಲಕ ಆನೆಮಡುವಿನ ಕೆರೆಗೆ ನೀರು ಹರಿಸುವ ಕಾರ್ಯಕ್ರಮವನ್ನು ಬುಧವಾರ ನಿಗದಿಪಡಿಸಲಾಗಿತ್ತು.
ಈ ಸಂಬಂಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕಳೆದ ಎರಡು ದಿನಗಳ ಹಿಂದೆ ಕಾಮಗಾರಿ ವೀಕ್ಷಿಸಿ ಜ.1ರಂದು ಆನೆಮಡುವಿನ ಕೆರೆಗೆ ನೀರು ಹರಿಸಲಾಗುವುದು ಎಂದು ತಿಳಿಸಿದ್ದರು. ಹಲವು ವರ್ಷಗಳ ನಂತರ ಈ ಭಾಗದ ಕೆರೆ ತುಂಬುತ್ತಿರುವುದಕ್ಕೆ ಸಹಜವಾಗಿಯೇ ಸಂತಸಗೊಂಡಿದ್ದ ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ರೈತರು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಭರದ ಸಿದ್ಧತೆ ನಡೆಸಿ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು.
ಆದರೆ, ಬುಧವಾರ ಬೆಳಗ್ಗೆ ಕೆರೆಗೆ ನೀರು ಹರಿಸುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂಬ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಎರಡೂ ಗ್ರಾಮಗಳ ನೂರಾರು ಜನರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರ ಮನವೊಲಿಕೆಗೂ ಜಗ್ಗದೆ ಪ್ರತಿಭಟನೆ ಮುಂದುವರಿಸಿದರು.
ವಿಷಯ ತಿಳಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿ ಆನೆಮಡುವಿನ ಕೆರೆಗೆ ನೀರು ಹರಿಸಲು ಸೂಚಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಆನೆಮಡುವಿನ ಕೆರೆಗೆ ನೀರು ಹರಿಸಲು ಚಾಲನೆ ನೀಡಿದರು. ಇದರಿಂದ ಸಂತಸಗೊಂಡ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್, ಮುಖಂಡರಾದ ನವೀನ್, ಸುರೇಶ್, ಗುರುಸ್ವಾಮಿ, ನಂಜಪ್ಪ, ಪ್ರವೀಣ್, ಪ್ರಸನ್ನ, ವೃಷಬೇಂದ್ರ, ರಾಜಶೇಖರಪ್ಪ, ರೇವಣ್ಣ ಇತರರಿದ್ದರು.
ಪರದಾಡಿದ ವಾಹನ ಸವಾರರು:
ಪ್ರತಿಭಟನೆ ಹಿನ್ನೆಲೆ ಚಾಮರಾಜನಗರ-ಗುಂಡ್ಲುಪೇಟೆ ರಾಜ್ಯ ಹೆದ್ದಾರಿಯಲ್ಲಿ 2 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ಇದರಿಂದ ನೂರಾರು ವಾಹನಗಳು ಕಿ.ಮೀ.ಗಟ್ಟಲೇ ನಿಂತಿದ್ದ ದೃಶ್ಯ ಕಂಡುಬಂದಿತು. ಹೊಸ ವರ್ಷದ ಹಿನ್ನೆಲೆಯಲ್ಲಿ ಬುಧವಾರ ಈ ರಸ್ತೆಯಲ್ಲಿ ಸಂಚರಿಸಿದ ಪ್ರವಾಸಿಗರಿಗೆ ಪ್ರತಿಭಟನೆಯ ಬಿಸಿ ಮುಟ್ಟಿತು. ಇದರಿಂದ ಕೆಲಕಾಲ ವಾಹನ ಸವಾರರು ಪರದಾಡುವಂತಾಯಿತು.
ನೀರಿನ ರಾಜಕೀಯ?
ಇತ್ತೀಚೆಗಷ್ಟೆ ಗುಂಡ್ಲುಪೇಟೆ ಶಾಸಕ ನಿರಂಜನ್‌ಕುಮಾರ್ ಅವರು ಉತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಹರಿಸುವ ಯೋಜನೆಗೆ ಚಾಲನೆ ದೊರೆಯುವಂತೆ ನೋಡಿಕೊಂಡಿದ್ದರು.
ಇದೇ ರೀತಿ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರು ತಮ್ಮ ವ್ಯಾಪ್ತಿಯ ಆನೆಮಡುವಿನಕೆರೆಗೆ ನೀರು ಹರಿಸಿ ಜನಪ್ರಿಯತೆ ಗಳಿಸಲಿದ್ದಾರೆ ಎಂಬ ಕಾರಣಕ್ಕೆ ಬುಧವಾರ ಚಾಲನೆ ನೀಡಬೇಕಿದ್ದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.