ಹೆದ್ದಾರಿ ವಿಸ್ತರಣೆಗೆ ಆಗ್ರಹ, ಅನಿರ್ದಿಷ್ಟಾವಧಿ ಮುಷ್ಕರ ಆರಂಭ

ಭಟ್ಕಳ: ತಾಲೂಕಿನ ಶಿರಾಲಿಯ ಪೇಟೆಯಲ್ಲಿ ಹಾದು ಹೋಗಿರುವ ಹೆದ್ದಾರಿಯನ್ನು 45 ಮೀ.ಗೆ ವಿಸ್ತರಿಸಬೇಕು ಎಂದು ಶಿರಾಲಿ ಪಂಚಾಯಿತಿ ಅಧ್ಯಕ್ಷ ವೆಂಕಟೇಶ ನಾಯ್ಕ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಶಿರಾಲಿಯ ಹೆದ್ದಾರಿಯನ್ನು 45 ಮೀ.ಗೆ ವಿಸ್ತರಿಸಬೇಕು ಎಂದು ಈ ಹಿಂದೆ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆದರೆ, ಇದ್ಯಾವುದನ್ನು ಲೆಕ್ಕಿಸದ ಜಿಲ್ಲಾಡಳಿತ ಬುಧವಾರ ಹೆದ್ದಾರಿ ವಿಸ್ತರಣೆಗೆ ಕಾಮಗಾರಿ ಆರಂಭಿಸಿತ್ತು. ಆಗ ನೂರಾರು ಸ್ಥಳೀಯರು ಕಾಮಗಾರಿಗೆ ತಡೆದು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ಆದೇಶವಿದೆ ಕಾಮಗಾರಿ ತಡೆದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಭಟ್ಕಳ ಉಪವಿಭಾಗಾಧಿಕಾರಿ ಎಚ್ಚರಿಸಿದ್ದರಿಂದ ಕಾಮಗಾರಿ ಮುಂದುವರಿದಿದೆ.

ಹೆದ್ದಾರಿ ವಿಸ್ತರಣೆಯನ್ನು 45 ಮೀ.ಗೆ ವಿಸ್ತರಿಸಲೇಬೇಕು ಎಂದು ಪಟ್ಟುಹಿಡಿದ ಸ್ಥಳೀಯರು ವಿವಿಧ ಸಂಘಟನೆಗಳ ಸದಸ್ಯರು, ಲಗೇಜ್ ರಿಕ್ಷಾ, ಪ್ಯಾಸೆಂಜರ್ ರಿಕ್ಷಾ ಚಾಲಕ- ಮಾಲೀಕರ ಸಂಘ, ವಿದ್ಯಾರ್ಥಿಗಳು ಸೇರಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಕಾಮಗಾರಿ ನಡೆಸಲು ಬಿಡುವುದಿಲ್ಲ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಾಸಕ ಸುನೀಲ ನಾಯ್ಕ ಸ್ಥಳಕ್ಕೆ ಆಗಮಿಸಬೇಕು. ಸ್ಥಳದಲ್ಲೇ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.