ಹೆದ್ದಾರಿ ತಡೆದು ಪ್ರತಿಭಟನೆ

ಮುಂಡರಗಿ: ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸಬೇಕು ಎಂದು ತಾಲೂಕಿನ ಬರದೂರ ಗ್ರಾಮದಲ್ಲಿ ಮಹಿಳೆಯರು ಹಾಗೂ ಹಲವು ಗ್ರಾಮಸ್ಥರು ಮುಂಡರಗಿ-ಗದಗ ಹೆದ್ದಾರಿ ಸಂಚಾರ ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.

ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಗ್ರಾಮಗಳಿಗೆ ನದಿ ನೀರಿನ ಭಾಗ್ಯವಿಲ್ಲ. ನದಿಯಿಂದ ಪೂರೈಸುತ್ತಿದ್ದ ಕುಡಿಯುವ ನೀರನ್ನು ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಪ್ರತಿಭಟನಾ ನಿರತರು ದೂರಿದರು.

‘ನಮ್ಮೂರಿನ ಮಾರ್ಗವಾಗಿಯೇ ಗದಗ-ಬೆಟಗೇರಿಗೆ ನಿರಂತರ ಕುಡಿಯುವ ನೀರು ಪೂರೈಕೆಯಾಗುತ್ತದೆ. ಮೊದಲು ನಮಗೆ ನೀರು ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ನಿವೇದಿತಾ ನಾಡಗೌಡ್ರ ಬೇಸರ ವ್ಯಕ್ತಪಡಿಸಿದರು. ‘ಸದ್ಯ ಇಡೀ ಗ್ರಾಮದ ಜನತೆಗೆ ಒಂದೇ ಬೋರ್​ವೆಲ್​ನಿಂದ ನೀರು ಪೂರೈಸಲಾಗುತ್ತದೆ. ವಿದ್ಯುತ್ ಇಲ್ಲದಿದ್ದರೆ ನೀರು ಪೂರೈಕೆ ಬಂದ್ ಆಗುತ್ತದೆ. ನಿತ್ಯ ಕೆಲಸ ಬಿಟ್ಟು ನೀರಿಗಾಗಿ ಹೊರವಲಯದಲ್ಲಿರುವ ಬೋರ್​ವೆಲ್​ಗಳಿಗೆ ಅಲೆದಾಡಬೇಕಾಗಿದೆ’ ಎಂದು ಗ್ರಾಮದ ಅಕ್ಕಮ್ಮ ಸಜ್ಜನರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಆಕಾಶ ವಂದೇ, ಪಿಡಿಒ ಸಂತೋಷ ಹೂಗಾರ ಮತ್ತು ಸಿಪಿಐ ಮಂಜುನಾಥ ನಡುವಿನಮನಿ ಆಗಮಿಸಿ ಪ್ರತಿಭಟನಾಕಾರರೊಂದಿಗೆ ರ್ಚಚಿಸಿದರು. ನದಿ ನೀರು ಪೂರೈಸಬೇಕು ಎಂದು ಹಲವಾರು ಬಾರಿ ನಿಮ್ಮಂತಹ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಿಷ್ಕಾಳಜಿತನ ಬಿಟ್ಟು ತಕ್ಷಣವೇ ಗ್ರಾಮಕ್ಕೆ ತುಂಗಭದ್ರಾ ನದಿ ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಕಾಶ ವಂದೇ, ಜಾಲವಾಡಗಿಯಿಂದ ಗ್ರಾಮೀಣ ಪ್ರದೇಶಗಳಿಗೆ ಪೂರೈಸುವ ತುಂಗಭದ್ರಾ ನದಿ ನೀರಿನ ಯೋಜನೆ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಆ. 10ರ ನಂತರ ವಿದ್ಯುತ್ ಸಂಪರ್ಕ ಕಾರ್ಯ ಮುಗಿಯಲಿದೆ. ಆ. 15 ರೊಳಗೆ ನಿಮ್ಮ ಗ್ರಾಮದ ಜತೆಗೆ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ನಿರಂತರ ನೀರು ಪೂರೈಕೆಯಾಗಲಿದೆ. ಆದ್ದರಿಂದ ಅಲ್ಲಿಯವರೆಗೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಗಿರಿಜಾ ಗೌರಿಪೂರ, ಸಾವಿತ್ರವ್ವ ಸಜ್ಜನರ, ಕಾಶಿಂಬೀ ಮಾಳೆಕೊಪ್ಪ, ರಮಜಾನಬೀ ಮಾಳೆಕೊಪ್ಪ, ಬಿಬಿಜಾನ್ ಹೊಸಮನಿ, ಅನಸವ್ವ ಹಳ್ಳಿಕೇರಿ, ಈರಮ್ಮ ಸಜ್ಜನರ, ನಿರ್ಮಲ ಹಡಪದ, ಕೊಟ್ರೇಶ ಕಲ್ಮಠ, ಅಶೋಕ ಹೊಸಮನಿ, ವೀರೇಶ ಸಜ್ಜನರ, ಮಹೇಶ ಸಜ್ಜನರ, ಇತರರಿದ್ದರು.

ಪ್ರಯಾಣಿಕರ ಪರದಾಟ: ಅರ್ಧ ಗಂಟೆ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದ್ದರಿಂದ ಗದಗ ಹಾಗೂ ಮುಂಡರಗಿ ಮಾರ್ಗದಲ್ಲಿ ತೆರಳುವ ವಾಹನ ಸವಾರರು, ಪ್ರಯಾಣಿಕರು ಪರದಾಡಿದರು. ಅಪಾರ ವಾಹನಗಳು ದೂರದವರೆಗೆ ಸಾಲುಗಟ್ಟಿ ನಿಂತಿದ್ದವು.