ಹೆದ್ದಾರಿಯಾಗದಿರಲಿ ಹೆಮ್ಮಾರಿ!

ರಟ್ಟಿಹಳ್ಳಿ: ರಟ್ಟಿಹಳ್ಳಿ-ಬ್ಯಾಡಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಕರಿ ಗ್ರಾಮದ ಬಳಿ ರಸ್ತೆಗುಂಟ ಒಂದೆಡೆ ವಿಶಾಲವಾದ ಕೆರೆ ಇದ್ದರೆ, ಇನ್ನೊಂದು ಬದಿಯಲ್ಲಿ ಆಳವಾದ ಕಂದಕವಿದೆ. ಆದರೆ, ರಸ್ತೆ ಎರಡೂ ಬದಿಗಳಲ್ಲಿ ತಡೆಗೋಡೆ ಇಲ್ಲ. ಹೀಗಾಗಿ, ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಮಕರಿ ಗ್ರಾಮದ ಕೆರೆ ಒಟ್ಟು 84 ಎಕರೆ 23 ಗುಂಟೆ ವ್ಯಾಪ್ತಿಯಲ್ಲಿದೆ. ಕೆರೆಯ ಪಕ್ಕದಲ್ಲಿಯೇ 20 ಅಡಿ ಆಳವಾದ ದೊಡ್ಡ ಕಂದಕವಿದೆ. ರಸ್ತೆಯ ಉದ್ದಕ್ಕೂ ಸುಮಾರು ಅರ್ಧ ಕಿ.ಮೀ.ವರೆಗೂ ಇದೇ ಪರಿಸ್ಥಿತಿ ಇದೆ. ರಸ್ತೆಗೆ ತಡೆಗೋಡೆ ನಿರ್ವಿುಸಲು ಸ್ಥಳೀಯ ಗ್ರಾಮ ಪಂಚಾಯಿತಿಯಾಗಲಿ ಅಥವಾ ಹಾನಗಲ್ಲಿನ ಸಣ್ಣ ನೀರಾವರಿ ಇಲಾಖೆಯಾಗಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

ರಟ್ಟಿಹಳ್ಳಿಯಿಂದ-ಬ್ಯಾಡಗಿ, ಹಾವೇರಿ, ಶಿವಮೊಗ್ಗ ಮತ್ತು ಶಿಕಾರಿಪುರ, ಕದರಮಂಡಗಿ ಸೇರಿ ನಗರ ಪಟ್ಟಣಗಳಿಗೆ ಮತ್ತು ವಿವಿಧ ಗ್ರಾಮಗಳಿಗೆ ಈ ರಸ್ತೆಯ ಮೂಲಕವೇ ಸಂಚರಿಸಬೇಕು. ಅಲ್ಲದೆ, ಮೆಣಸಿನ ಲೋಡಿನ, ಕೃಷಿ ಉತ್ಪನ್ನಗಳ ಲಾರಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿ ಮಾರ್ಗವಾಗಿಯೇ ಸಾಗುತ್ತವೆ.

ತುಂಗಾ ಮೇಲ್ದಂಡೆ ಕಾಲುವೆಯಿಂದ ಈ ಕೆರೆಗೆ ನೀರು ಬರುವುದರಿಂದ ವರ್ಷದಲ್ಲಿ 10 ತಿಂಗಳು ನೀರು ತುಂಬಿರುತ್ತದೆ. ಕಿರಿದಾದ ರಸ್ತೆಯಲ್ಲಿ ದೊಡ್ಡ ವಾಹನಗಳು ಕೇವಲ ಒಮ್ಮುಖವಾಗಿ ಚಲಿಸಬೇಕು. ಕೆರೆಯ ಏರಿಯು ದಿನಕಳೆದಂತೆ ಕುಸಿಯುವ ಸಾಧ್ಯತೆ ಇದ್ದು, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಈ ಮಾರ್ಗದಲ್ಲಿ ಹಲವು ಅಪಘಾತದ ಘಟನೆಗಳು ನಡೆದಿದ್ದು, ಸ್ಥಳೀಯ ಗ್ರಾಮಸ್ಥರು ಸಕಾಲದಲ್ಲಿ ಆಗಮಿಸಿ ಪ್ರಯಾಣಿಕರ ಜೀವ ಉಳಿಸಿದ ಉದಾಹರಣೆ ಇದೆ.

ಹೆದ್ದಾರಿ ಇಷ್ಟೊಂದು ಅಪಾಯದಲ್ಲಿದ್ದರೂ ಇಲ್ಲಿ ವಿದ್ಯುತ್ ಕಂಬ ಅಳವಡಿಸಿಲ್ಲ. ರಾತ್ರಿ ವೇಳೆ ವಾಹನ ಸಂಚರಿಸುವುದು ದುಸ್ತರವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಕಣಗನಮರಡಿ ದುರಂತ ನೆನಪು: ಇತ್ತೀಚೆಗೆ ಮಂಡ್ಯ ಜಿಲ್ಲೆಯ ಕಣಗನಮರಡಿಯಲ್ಲಿ ಬಸ್ ಕೆರೆಗೆ ಬಿದ್ದು 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇಲ್ಲಿನ ರಸ್ತೆಯೂ ಇದೇ ಮಾದರಿಯಲ್ಲಿದ್ದು, ಅನಾಹುತ ಸಂಭವಿಸಿದರೆ ಯಾರು ಹೊಣೆ ? ಆದ್ದರಿಂದ ಸಂಬಂಧಿಸಿದ ಇಲಾಖೆಯವರು ರಸ್ತೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ವಿುಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.

ದಿನದಿಂದ ದಿನಕ್ಕೆ ವಾಹನ ಸಂಚಾರ ಅಧಿಕವಾಗಿರುವುದರಿಂದ ಮಕರಿ ಗ್ರಾಮದ ರಸ್ತೆಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಕೂಡಲೇ ತಡೆಗೋಡೆ ನಿರ್ವಿುಸುವತ್ತ ಕಾರ್ಯೋನ್ಮುಖವಾಗಬೇಕು.
| ಹನುಮಂತಗೌಡ ಭರಮಣ್ಣನವರ, ಧಾರವಾಡ ಹಾಲು ಒಕ್ಕೂಟ ನಿರ್ದೇಶಕ, ಮಕರಿ ಗ್ರಾಮದ ನಿವಾಸಿ