ಹೆದ್ದಾರಿಯಲ್ಲಿ ಆಸ್ಪಾಲ್ಟ್ ಬಳಕೆಗೆ ಆಕ್ಷೇಪ

ಶಿವಮೊಗ್ಗ: ಸ್ಮಾರ್ಟ್​ಸಿಟಿಗೆ ಆಯ್ಕೆಯಾದ ಶಿವಮೊಗ್ಗದಲ್ಲಿ ಡಾಂಬರ್ ಬದಲಿಗೆ ‘ಮಾಸ್ತಿಕ್ ಆಸ್ಪಾಲ್ಟ್’ ಬಳಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಬಿಸಿಲಿನ ಝುಳ ಹೆಚ್ಚಾದಂತೆ ಪ್ರಮುಖ ವೃತ್ತಗಳಲ್ಲಿ ಹಾಕಿರುವ ಆಸ್ಪಾಲ್ಟ್ ಮೃದುಗೊಳ್ಳುತ್ತಿದ್ದು, ಪಾದಚಾರಿಗಳು, ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟುಮಾಡುತ್ತಿದೆ.

ನಗರದ ಅಶೋಕ ವೃತ್ತ, ಬೈಪಾಸ್ ಸೇತುವೆ ಹಾಗೂ ಸಂದೇಶ್ ಮೋಟಾರ್ಸ್ ವೃತ್ತದ ಬಳಿ ರಸ್ತೆಗೆ ಈಗಾಗಲೆ ಆಸ್ಪಾಲ್ಟ್ ಬಳಸಿದ್ದು, ಇದರ ಮೇಲೆ ಅನುಪಯುಕ್ತ ತ್ಯಾಜ್ಯ ವಸ್ತುಗಳು ಬಿದ್ದು ರಸ್ತೆಯ ಅಂದವನ್ನು ಹಾಳುಗೆಡವಿವೆ. ಅದರ ನಡುವೆ ಬೇಸಿಗೆ ಆರಂಭಗೊಳ್ಳುವ ಮುನ್ನವೆ ರಸ್ತೆ ಮತ್ತಷ್ಟು ಹದಗೆಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಎಂಆರ್​ಎಸ್​ನಿಂದ ಲಯನ್ ಸಫಾರಿ ಹಾಗೂ ಬಸ್​ನಿಲ್ದಾಣದಿಂದ ಪುರಲೆವರೆಗೆ 17 ಕಿಮೀ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈಗಾಗಲೆ ಬಹುತೇಕ ವಿಸ್ತರಣೆ ಕಾರ್ಯ ಚುರುಕುಗೊಂಡಿದ್ದು, ಪ್ರಮುಖ ವೃತ್ತಗಳಲ್ಲಿ ಆಸ್ಪಾಲ್ಟ್ ಬಳಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಸಂಚಾರಕ್ಕೆ ಅಡಚಣೆ:ವಾಹನ ದಟ್ಟಣೆ ಹೆಚ್ಚಿರುವ ಅಶೋಕ ವೃತ್ತದಲ್ಲಿ ಆಸ್ಪಾಲ್ಟ್ ಬಳಕೆ ಮಾಡಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ವೃತ್ತದ ಮೂಲಕ ಸಂಚರಿಸುತ್ತವೆ. ಆದರೆ ಈ ವತ್ತದಲ್ಲಿ ಆಸ್ಪಾಲ್ಟ್ ಬಳಕೆಯಿಂದ ವೃತ್ತದ ಅಂದಕೆ್ಕೆ ಧಕ್ಕೆಯಾಗಿದೆ. ಅಲ್ಲದೆ, ಮುಂದಿನ ಕೆಲವೆ ದಿನಗಳಲ್ಲಿ ಸರ್ಕ್ಯೂಟ್​ಹೌಸ್ ಹಾಗೂ ಆಲ್ಕೊಳ ವೃತ್ತದಲ್ಲೂ ಆಸ್ಪಾಲ್ಟ್ ಬಳಕೆಗೆ ಎನ್​ಎಚ್ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಆಸ್ಪಾಲ್ಟ್ ಬಳಕೆಯಿಂದ ರಸ್ತೆ ಡಾಂಬರ್ ಹಾಕುವುದಕ್ಕಿಂತ ದಪ್ಪ ಕಡಿಮೆ ಆಗಲಿದೆ. ಅಲ್ಲದೆ, ದೀರ್ಘ ಕಾಲ ಬಾಳಿಕೆ ಬರಲಿದೆ. ಖುದ್ದಾಗಿ ಕಾರ್ವಿುಕರೇ ಸಿದ್ಧಪಡಿಸಲಿದ್ದು, ಡಾಂಬರ್ ರಸ್ತೆಗಿಂತ ದರ ಹೆಚ್ಚಾಗಲಿದೆ. ಆಸ್ಪಾಲ್ಟ್ ಹಾಕಿದ 10ರಿಂದ 15 ದಿನ ಮೃದು ಆಗಲಿದ್ದು, ಆನಂತರ ಗಟ್ಟಿಗೊಳ್ಳಲಿದೆ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್​ಗಳ ಲೆಕ್ಕಚಾರವಾಗಿದೆ. ಆದರೆ ಸಾರ್ವಜನಿಕ ವಲಯದಲ್ಲಿ ಆ ಬಗ್ಗೆ ನಂಬಿಕೆ ಇಲ್ಲವಾಗಿದ್ದು, ಆಸ್ಪಾಲ್ಟ್ ಬಳಕೆಗೆ ಆಕ್ಷೇಪ ವ್ಯಕ್ತವಾಗುತ್ತದೆ.

ಹರಿದ ಚಪ್ಪಲಿ, ಹಳೆ ಬಟ್ಟೆ, ಪ್ಲಾಸ್ಟಿಕ್: ಅಶೋಕ ಸರ್ಕಲ್​ನಲ್ಲಿ ಆಸ್ಪಾಲ್ಟ್ ರಸ್ತೆ ಮೇಲೆ ಚಪ್ಪಲಿಗಳು, ಹರಿದ ಬಟ್ಟೆಗಳು ಕಸ ಕಡ್ಡಿ ಡಾಂಬರು ರಸ್ತೆಗೆ ಮೆತ್ತಿಕೊಂಡಿವೆ. ಇದು ಸ್ಮಾರ್ಟ್​ಸಿಟಿಯ ಹೆಗ್ಗಳಿಕೆಯಲ್ಲಿರುವ ಶಿವಮೊಗ್ಗಕ್ಕೆ ಕಪ್ಪು ಚುಕ್ಕೆಯಾಗಿದೆ. ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಆಲ್ಕೊಳ ವೃತ್ತದವರೆಗೆ ಸ್ಮಾರ್ಟ್​ಸಿಟಿ ಯೋಜನೆಯಲ್ಲಿ ರಸ್ತೆ ವಿಸ್ತರಣೆ ಹಾಗೂ ಮರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕೆಲ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಶೋಕ ವೃತ್ತದಲ್ಲಿ ಡಾಂಬರೀಕರಣ ಮಾಡಿದೆ. ಡಾಂಬರು ಹಾಕಿದ ಬಳಿಕ ಪಾಲಿಕೆ ಕಸ ಸಾಗಿಸುವ ವಾಹನಗಳಲ್ಲಿದ್ದ ಕಸ, ಹಳೆ ಬಟ್ಟೆಗಳು, ಹರಿದ ಚಪ್ಪಲಿ ಇತ್ಯಾದಿ ವಸ್ತುಗಳು ಬಿದ್ದಿದ್ದು, ಅದರ ಮೇಲೆ ಸತತವಾಗಿ ವಾಹನಗಳು ಓಡಾಡಿದ ಪರಿಣಾಮ ಕಸ, ಚಪ್ಪಲಿ, ಪ್ಲಾಸ್ಟಿಕ್ ಎಲ್ಲವೂ ಆಸ್ಪಾಲ್ಟ್​ನ ಮೇಲ್ಪದರಲ್ಲಿ ಗಟ್ಟಿಯಾಗಿ ಅಂಟಿಕೊಂಡಿವೆ.

ಆಸ್ಪಾಲ್ಟ್​ಗೆ ಏನೇನು ಹಾಕ್ತಾರೆ ?: ಡಿಟರ್​ವಿುನ್, 10 ಎಂಎಂ, 8 ಎಂಎಂ, ಗ್ರೇಡಿಯೇಷನ್, ಫೈಬರ್ ಮೆಟಿರಿಯಲ್​ಗಳನ್ನು ಬಳಸಿಕೊಂಡು ಆಸ್ಪಾಲ್ಟ್ ಸಿದ್ಧಪಡಿಸಲಾಗುತ್ತಿದೆ. ವಾಸ್ತವವಾಗಿ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಸ್ಪಾಲ್ಟ್ ಸಿದ್ಧಪಡಿಸುತ್ತಾರೆಂಬ ಕಲ್ಪನೆ ಇದೆ.