ಹೆತ್ತವರ ನೆಮ್ಮದಿಯೇ ನಿಜವಾದ ಪೂಜೆ

ಹೊಸನಗರ: ಹೆತ್ತವರನ್ನು ನೆಮ್ಮದಿಯಲ್ಲಿ ಇರುವಂತೆ ಮಾಡುವುದೇ ನಿಜವಾದ ಪೂಜೆ ಎಂದು ಕೊಪ್ಪ ಸಮೀಪದ ಹರಿಹರಪುರ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಹೇಳಿದರು.

ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಬಸವಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮರು ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ನಮ್ಮೊಳಗಿನ ಸರಿ ತಪ್ಪುಗಳ ಆತ್ಮವಿಮರ್ಶೆ ಅಗತ್ಯ. ಪ್ರಾರ್ಥನೆ ಎಂದರೆ ಕೇವಲ ಮಂತ್ರ ಹೇಳುವುದಲ್ಲ ಎಂದರು. ಆಡಂಬರ ಜೀವನ, ಪ್ರಚಾರಕ್ಕಾಗಿನ ದಾನದ ಬದಲು ಹಸಿದವರಿಗೆ ಅನ್ನ ನೀರು ಕೊಡಿ, ಮಾತಾಪಿತೃಗಳು ಸಂತಸದಿಂದ ಇರುವಂತೆ ನೋಡಿಕೊಳ್ಳುವುದು, ಸತ್ಯವನ್ನು ನುಡಿಯುವುದು ಎಲ್ಲಕ್ಕಿಂತ ಮಿಗಿಲಾದದ್ದು. ಭಾವ ಶುದ್ಧಿಯಿಲ್ಲದ ಕರ್ಮ ಮತ್ತು ದಾನ ವ್ಯರ್ಥ ಎಂದರು.

ಆನಂದಪುರ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ದೇವಸ್ಥಾನ ಕಟ್ಟುವುದು ಕೇವಲ ಸಾಂಕೇತಿಕ. ನಮ್ಮ ದೇಹವೇ ನಿಜವಾದ ದೇಗುಲ. ದೇಹವನ್ನು ದುಶ್ಚಟಗಳ ಕೂಪವನ್ನಾಗಿಸಿಕೊಂಡ ನಾವು ದೇವಸ್ಥಾನಗಳಿಗೆ ತೆರಳಿ ಒಳಿತಿಗಾಗಿ ಪ್ರಾರ್ಥಿಸುತ್ತೇವೆ. ದೇಹ, ಮನಸ್ಸಿನ ಶುದ್ಧಿಯಿಲ್ಲದೆ ದೇವರಿಗೆ ಪ್ರಾರ್ಥಿಸುವುದರಿಂದ ಯಾವ ಫಲವೂ ಇಲ್ಲ. ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಭಾವದಿಂದ ಆರಾಧಿಸಬೇಕು ಎಂದು ಹೇಳಿದರು.

ಕವಲೇದುರ್ಗದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೆತ್ತಿದ ಮಾತ್ರಕ್ಕೆ ಶಿಲ್ಪ ದೇವರಾಗದು. ಪುರೋಹಿತರು ಮಂತ್ರ ಹೇಳಿದರೆ ದೇವಾಲಯ ಆಗುವುದಿಲ್ಲ. ಗುರುಗಳ ಸ್ಪರ್ಶ, ಅನುಗ್ರಹದಿಂದ ಶಿಲ್ಪಕ್ಕೆ ಚೈತನ್ಯ ತುಂಬುತ್ತದೆ. ದೇವಾಲಯಗಳು ಒಂದೇ ವರ್ಗಕ್ಕೆ ಸೀಮಿತವಾಗಬಾರದು. ಭೇದಭಾವ ಮರೆತು ಎಲ್ಲ ಸಮಾಜದವರು ಒಂದಾಗಬೇಕು ಎಂದು ಸಲಹೆ ನೀಡಿದರು.

ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಳಲಿ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಅಮೃತ ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಜಡೆ ಮಠದ ಡಾ. ಮಹಾಂತ ಸ್ವಾಮೀಜಿ, ತೊಗರ್ಸಿಯ ಶ್ರೀ ಅಭಿನವ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಹಾರ್ನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದ ಧರ್ಮದರ್ಶಿ ಡಾ. ರಾಮಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಪಂ ಸದಸ್ಯ ಕಲಗೋಡು ರತ್ನಾಕರ, ತಾಪಂ ಸದಸ್ಯ ಬಿ.ಜಿ.ಚಂದ್ರಮೌಳಿ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಜಿ.ನಾಗರಾಜ್, ಕಾರ್ಯದರ್ಶಿ ಗುಂಡಪ್ಪ, ಗಣೇಶ್, ಗ್ರಾಪಂ ಅಧ್ಯಕ್ಷೆ ಗೀತಾ ಮಹೇಶ್, ಬ್ರಾಹ್ಮಣ ಮಹಾಸಭಾದ ಡಾ. ರಾಮಚಂದ್ರರಾವ್ ಇತರರಿದ್ದರು.

Leave a Reply

Your email address will not be published. Required fields are marked *