Wednesday, 12th December 2018  

Vijayavani

Breaking News

ಹೆಣ್ಣು ಭ್ರೂಣದ ಹತ್ಯೆ ಬ್ರಹ್ಮಾಂಡದ ಹತ್ಯೆ

Saturday, 09.09.2017, 3:01 AM       No Comments

| ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ಅನಾದಿಕಾಲದಿಂದಲೂ ನಮ್ಮ ದೇಶದ ಜನ ಬೆಳಗ್ಗೆ ಏಳುತ್ತಿದ್ದಂತೆ ಸರಿಯಾಗಿ ಕಣ್ಣುಬಿಡುವ ಮೊದಲೇ ಎರಡೂ ಕೈಜೋಡಿಸಿ ಹಿಡಿದುಕೊಂಡು- ‘ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ | ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ’ ಎಂದು ಕಣ್ಣಿಗೊತ್ತಿಕೊಂಡು ನಮಸ್ಕರಿಸುತ್ತ ಬಂದಿದ್ದಾರೆ. ಧನ-ಕನಕ ಕೊಡುವ ಲಕ್ಷ್ಮಿ, ವಿದ್ಯೆ-ಬುದ್ಧಿ ಕೊಡುವ ಸರಸ್ವತಿ, ಧೈರ್ಯ-ಸ್ಥೈರ್ಯ ಕೊಡುವ ಜಗನ್ಮಾತೆ ಜಗಜ್ಜನನಿ ಪಾರ್ವತಿ ಮೂವರೂ ನಮ್ಮ ಕೈಯಲ್ಲಿ ನೆಲೆಸಿದ್ದಾರೆ. ನಮ್ಮೀ ಕೈಗಳು ಉತ್ತಮ ಕೆಲಸ ಮಾಡಿದರೆ ನಮಗೆ ಸರ್ವಸ್ವವೂ ಪ್ರಾಪ್ತಿಯಾಗುತ್ತದೆ ಎಂಬ ಪರಿಕಲ್ಪನೆ ನಮ್ಮ ಪೂರ್ವಿಕರದು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರ ಮಹತ್ವವನ್ನು ಪ್ರತಿನಿತ್ಯ ಮನನ ಮಾಡುವಂತೆ ನಮ್ಮ ಪೂರ್ವಜರು ಮಾಡಿದ್ದರೆ, ನಾವು ಅದನ್ನು ಮರೆತು ಸರ್ವಶಕ್ತ ಹೆಣ್ಣನ್ನು ಭ್ರೂಣದಲ್ಲಿಯೇ ಹತ್ಯೆಮಾಡುತ್ತಿರುವುದು ದುರದೃಷ್ಟಕರ.

ಸ್ವತಃ ಪರಮೇಶ್ವರನು ಅರ್ಧನಾರೀಶ್ವರನಾಗಿ ಜಗತ್ತಿಗೆ ಶಕ್ತಿಯ ಮಹತ್ವ ತಿಳಿಸಿದ. ಶಿವಶಕ್ತಿ ಒಟ್ಟಿಗಿದ್ದರೆ ಬ್ರಹ್ಮಾಂಡದ ಸೃಷ್ಟಿ. ಶಿವನನ್ನು ಶಕ್ತಿ ಬಿಟ್ಟರೆ ಶಿವನು ಶವವಾಗುವನೆಂಬ ಸರ್ವಕಾಲೀನ ಸತ್ಯವನ್ನು ಸ್ವತಃ ಪರಮಾತ್ಮನೇ ತಿಳಿಸಿರುವಾಗ, ನಮ್ಮ ಕೆಲ ಧೂರ್ತ, ಲೋಭಿ ವೈದ್ಯರು ಸ್ಕಾ್ಯನಿಂಗ್ ಸೆಂಟರ್​ನಲ್ಲಿ ಶಿವ-ಪಾರ್ವತಿಯರ ಕ್ಯಾಲೆಂಡರ್ ಹಾಕಿ ಭ್ರೂಣ ಗಂಡಾದರೆ ‘ಶಿವನಿಗೆ ಕೈಮುಗಿಯಿರಿ‘, ಹೆಣ್ಣಾದರೆ ‘ಪಾರ್ವತಿಗೆ ಕೈಮುಗಿಯಿರಿ’ ಎನ್ನುತ್ತಾರೆ! ಕಾರಣ ಲಿಂಗ ತಪಾಸಣೆಯನ್ನು ಕಾನೂನು ನಿಷೇಧಿಸಿದೆ. ಕಾನೂನು ಉಲ್ಲಂಘಿಸಿ ಹೆಣ್ಣು ಭ್ರೂಣಹತ್ಯೆ ಮಾಡುವ ವೈದ್ಯರಿಗೆ, ಮಾಡಿಸಿಕೊಳ್ಳುವ ಜನರಿಗೆ ತಾವು ಬ್ರಹ್ಮಾಂಡದ ನಾಶ ಮಾಡುತ್ತಿರುವ ಕಲ್ಪನೆ ಮತ್ತು ಅರಿವು ಇಲ್ಲದಿರುವುದು ದುರಂತ.

ನಮ್ಮ ದೇಶದಲ್ಲಿ ಹೆಣ್ಣು ಭ್ರೂಣಹತ್ಯೆಯಂಥ ಕ್ರೂರ ಕೃತ್ಯದಿಂದ ಕಳೆದ 10 ವರ್ಷಗಳಲ್ಲಿ 10 ಕೋಟಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗಿದೆ. ಕಾರಣ 1990ರಿಂದೀಚೆಗೆ ಪ್ರತಿವರ್ಷ ಸುಮಾರು 5 ಲಕ್ಷ ಹೆಣ್ಣು ಭ್ರೂಣಹತ್ಯೆಗಳಾಗುತ್ತಿವೆ. ಆದ್ದರಿಂದ 1994ರಲ್ಲಿ ಕೇಂದ್ರ ಸರ್ಕಾರ”Pre-Conception and Pre-Natal Diagnostic Techniques (PCPNDT) Act’ ಅನ್ನು ಜಾರಿಗೆ ತಂದಿತು. ಆದರೆ ಈ ನಿಯಮದ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಯಿತು! ನಮ್ಮ ದೇಶದ ದುರಂತವೆಂದರೆ ಒಂದು ಕಡೆ ರಂಗೋಲಿ ಕೆಳಗೆ ನುಸುಳುವವರಾದರೆ, ಕಾನೂನನ್ನು ಕೈಯಲ್ಲಿ ಬಡಿಗೆಯಂತೆ ಬಳಸಿ ವೈದ್ಯರನ್ನು ಬೆದರಿಸಿ ಭ್ರಷ್ಟಾಚಾರ ಮಾಡುವವರು ಇನ್ನೊಂದು ಕಡೆ ಇದ್ದಾರೆ. ಇದರಿಂದಾಗಿ ಹೆಣ್ಣು ಭ್ರೂಣಹತ್ಯೆ ಅವ್ಯಾಹತವಾಗಿ ನಡೆದು ಈಗ ಕೆಲ ಜನಾಂಗಗಳಲ್ಲಿ ಮದುವೆಗೆ ಹೆಣ್ಣು ಸಿಗದಂಥ ದುರ್ಗತಿ ಬಂದಿದೆ!

ಹೆಣ್ಣು ಭ್ರೂಣಹತ್ಯೆಗೆ ಬಡತನ ಕಾರಣವೆಂದು ತಿಳಿದುಕೊಳ್ಳಬಾರದು. ಹೆಣ್ಣು ಹುಟ್ಟಿದರೆ ಮನೆಗೆ ಭಾಗ್ಯಲಕ್ಷ್ಮಿ ಬಂದಳೆಂಬ ನಂಬಿಕೆ ಒಂದು ಕಾಲಕ್ಕಿತ್ತು. ಆದರೆ ಇಂದು ಓದಿದವರು, ಸಾಹುಕಾರರೇ ಹೆಚ್ಚು ಹೆಣ್ಣು ಭ್ರೂಣಹತ್ಯೆಗೆ ಕಾರಣವೆಂದು ಸಮೀಕ್ಷೆಗಳಿಂದ ತಿಳಿದುಬಂದಿದೆ. ತಮ್ಮ ಆಸ್ತಿ ಮಗಳೊಂದಿಗೆ ಹೋಗುತ್ತದೆ; ಮಗನಾದರೆ ಕುಟುಂಬದಲ್ಲಿಯೇ ಉಳಿಯುತ್ತದೆ ಎಂಬ ಭ್ರಮೆ ಇದಕ್ಕೆ ಪ್ರಮುಖ ಕಾರಣ. ಆದರೆ ಆಸ್ತಿ ಉಳಿಸುವ ಆ ಮಗ ಮುಂದಿನ ಪೀಳಿಗೆಗೆ ಜನ್ಮಕೊಡಲು ಹೆಣ್ಣು (ಸೊಸೆ) ಬೇಕೇಬೇಕಲ್ಲವೇ? ಗಂಡಸು ಮಾಡುವ ಎಲ್ಲ ಕೆಲಸವನ್ನೂ ಮಹಿಳೆ ಮಾಡಬಲ್ಲಳು; ಆದರೆ ಮಹಿಳೆಯಿಂದ ಮಾತ್ರ ಸಾಧ್ಯವಾಗುವ ಒಂದು ಕೆಲಸ ಗರ್ಭಧಾರಣೆ ಮಾಡಿ ಕುಟುಂಬದ ಕುಡಿಗೆ ಜನ್ಮಕೊಡುವಿಕೆ. ಹಾಗಾಗಿ ಹೆಣ್ಣು ಭ್ರೂಣಹತ್ಯೆ ಮಾಡುವವರು ಜಗತ್ತಿನ ನಿಯಮ ಮೀರಿ ತಮ್ಮ ಮುಂದಿನ ಪೀಳಿಗೆಗೆ ಜನ್ಮ ಕೊಡಬೇಕಾದ ಜಗಜ್ಜನನಿಯ ಪ್ರತಿರೂಪವನ್ನೇ ಸಾಯಿಸುತ್ತಿದ್ದಾರೆ ಎಂದು ಅರಿಯಬೇಕು.

ಇನ್ನು, ವಿದ್ಯಾವಂತ ಮಧ್ಯಮವರ್ಗದವರು ವರದಕ್ಷಿಣಿ ಪಿಡುಗಿಗೆ ನಲುಗಿ ಹೆಣ್ಣು ಹಡೆಯುವುದೂ ಬೇಡ, ಸಾಲ ಮಾಡುವುದೂ ಬೇಡ ಎಂದುಕೊಂಡು ಕೊನೆಗೆ ಹೆಣ್ಣುಮಗುವೇ ಬೇಡ ಎಂಬ ಮೂರ್ಖನಿರ್ಧಾರಕ್ಕೆ ಬರುತ್ತಾರೆ. ಇದರಿಂದ ಅವರೂ ಹೆಣ್ಣು ಭ್ರೂಣಹತ್ಯೆಗೆ ಮುಂದಾಗುತ್ತಾರೆ. ಇರುವ ಒಬ್ಬ ಮಗನಿಗೆ ಆಸ್ತಿಪಾಸ್ತಿ ಮಾಡಿ ಮದುವೆ ಮಾಡಿದ ನಂತರ ಪಶ್ಚಾತ್ತಾಪ ಪಡುತ್ತಾರೆ- ಹೆಂಗರುಳಿನ ಒಬ್ಬ ಮಗಳಿದ್ದಿದ್ದರೆ ಮುಪ್ಪಿನಲ್ಲಿ ಸಹಾಯವಾಗುತ್ತಿತ್ತು ಎಂದು! ಕಾರಣ ಹೊಟ್ಟೆಗೆ ಎರಡು ಬಿಸಿತುತ್ತು ಸಿಗದೆ ಕಾಯಿಲೆ ಬಂದಾಗ ಆರೈಕೆ ಮಾಡಲು ಯಾರೂ ಇಲ್ಲದೆ ಪರದಾಡಬೇಕಾಗುತ್ತದೆ. ಗಂಡುಮಕ್ಕಳಿಗಾಗಿ ಪರಿತಪಿಸುವವರು ತಿಳಿದುಕೊಳ್ಳಿ- ಮಗ ಓದಿ ದೊಡ್ಡ ಹುದ್ದೆಯಲ್ಲಿದ್ದು ಛಿಛ್ಠ್ಚಠಿಛಿಛ ಞಟ್ಞಠಠಿಛ್ಟಿ ಆಗಿ ತಂದೆ-ತಾಯಿಯ ಬಗ್ಗೆ ಗಮನವನ್ನೇ ಕೊಡುವುದಿಲ್ಲ! ಇಲ್ಲವೇ ಇರುವ ಒಬ್ಬ ಮಗ ಪೋಲಿಯಾಗಿ, ಕೂಡಿಟ್ಟ ಹಣವನ್ನು ಕಳೆದುಬಿಡುತ್ತಾನೆ.

ಒಂದು ಸಲ ವಾಯುವಿಹಾರ ಮಾಡುವಾಗ ಒಬ್ಬ ಮಹಿಳೆ ಮಾತನಾಡುತ್ತ, ‘ಅಲ್ಲಿ ನೋಡಿ, ಯಾರೊಂದಿಗೂ ಮಾತನಾಡದೆ ಒಬ್ಬರೇ ಕುಳಿತಿದ್ದಾರಲ್ಲ ಅವರೇ ನನ್ನ ಯಜಮಾನರು. ರತ್ನದ ವ್ಯಾಪಾರಿಯಾಗಿ ತುಂಬ ಸಂಪಾದನೆ ಮಾಡಿದ್ದರು. ಆದರೆ ಇರುವ ಒಬ್ಬ ಮಗ ರೇಸಿನಲ್ಲಿ 3 ಕೋಟಿ ಹಣ ಕಳೆದ. ಅದರಿಂದ ಮನಸ್ಸಿಗೆ ಆಘಾತವಾಗಿ ಊಟ ಇಲ್ಲ, ನಿದ್ರೆ ಇಲ್ಲ, ಯಾರೊಂದಿಗೂ ಮಾತನಾಡುವುದಿಲ್ಲ. ಹಾಗೇ ಚಿಂತೆಯಲ್ಲಿ ಕೂತಿರುತ್ತಾರೆ’ ಎಂದು ಕೃಶರಾದ ಗಂಡನನ್ನು ತೋರಿಸಿ ಬವಣೆ ಹೇಳಿಕೊಂಡರು. ನಾನು ‘ಮತ್ತೆ, ಊಟ-ತಿಂಡಿಗೆ, ಖರ್ಚಿಗೆ ಏನು ಮಾಡುತ್ತೀರಿ?’ ಎಂದು ಕೇಳಿದೆ. ‘ಸದ್ಯ, ನಮಗೊಬ್ಬಳು ಮಗಳಿದ್ದಾಳೆ. ಚೆನ್ನಾಗಿ ಓದಿ ಇನ್ಪೋಸಿಸ್​ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳೇ ಇಂದು ನಾವು ಬೀದಿಪಾಲಾಗದಂತೆ ನೋಡಿಕೊಂಡಳು’ ಎಂದು ನಿಟ್ಟುಸಿರುಬಿಟ್ಟರು. ಅವರೂ 30 ವರ್ಷದ ಹಿಂದೆ ಇಂದಿನವರಂತೆ ಹೆಣ್ಣು ಬೇಡ ಎಂದು ಗರ್ಭಪಾತ ಮಾಡಿಸಿಕೊಂಡಿದ್ದರೆ ಅವರ ಗತಿ ಏನಾಗುತ್ತಿತ್ತು ಯೋಚಿಸಿ. ಇದಕ್ಕಾಗಿಯೇ ನಮ್ಮ ದೇಶದ ಪ್ರಧಾನಸೇವಕ- ‘ಬೇಟಿ ಬಚಾವೊ, ಬೇಟಿ ಪಢಾವೊ’ ಆಂದೋಲನ ಪ್ರಾರಂಭಿಸಿದ್ದು.

‘ಹೆಣ್ಣು ಕುಟುಂಬದ ಕಣ್ಣು’ ಎನ್ನುವುದನ್ನು ಮರೆತು ‘ಹೆಣ್ಣು ಒಂದು ಹುಣ್ಣು’ ಎಂದು ಪರಿಗಣಿಸಿ ನಿಕೃಷ್ಟ ದೃಷ್ಟಿಯಿಂದ ನೋಡುವವರಿಗೆ ಸಂಚಿ ಹೊನ್ನಮ್ಮ ತನ್ನ ‘ಹದಿಬದೆಯ ಧರ್ಮ’ ಕೃತಿಯಲ್ಲಿ- ಪೆಣ್ಣಲ್ಲವೇ ತಮ್ಮನೆಲ್ಲ ಪಡೆದ ತಾಯಿ, ಪೆಣ್ಣಲ್ಲವೇ ತಮ್ಮನ್ನು ಪೊರೆದವಳು, ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು?’ ಎಂದು ಹೇಳುತ್ತಾಳೆ. ಗಾವಿಲರು ಎಂದರೆ ಮೂರ್ಖರು ಎಂದರ್ಥ. ಸರ್ವಜ್ಞ ಹೇಳುತ್ತಾನೆ- ‘ಹೆಣ್ಣಿಂದಲಿ ಇಹವು ಹೆಣ್ಣಿಂದಲಿ ಪರವು, ಹೆಣ್ಣಿಂದ ಸಕಲ ಸಂಪದವು, ಹೆಣ್ಣೊಲ್ಲದ ಅಣ್ಣಗಳು ಯಾರು ಸರ್ವಜ್ಞ’.

ಗಾಂಧೀಜಿಯವರು, ‘ಸ್ತ್ರೀ ಮತ್ತು ಪುರುಷರಲ್ಲಿ ಸ್ತ್ರೀಯರೇ ಶ್ರೇಷ್ಠರು. ತ್ಯಾಗ, ಕರುಣೆ, ನಂಬಿಕೆ, ಜ್ಞಾನ ಮತ್ತು ಕಷ್ಟ ಸಹಿಷ್ಣುತೆಯ ಸಾಕಾರರೂಪ ಸ್ತ್ರೀ’ ಎನ್ನುತ್ತಾರೆ. ಇದನ್ನೇ ಒಬ್ಬ ಗಣಿತಶಾಸ್ತ್ರಜ್ಞರು ‘ಗಂಡು-ಹೆಣ್ಣು ಇಬ್ಬರೂ ಛಿಟ್ಠಿಚ್ಝ ಅಂತ ಎಲ್ಲರೂ ಹೇಳುತ್ತಾರೆ. ಗಣಿತದಲ್ಲಿ ‘=’ ಚಿಹ್ನೆಯ ಮೇಲಿನ ಗೆರೆ ಹೆಣ್ಣು, ಕೆಳಗಡೆಯದು ಗಂಡು. ಆದ್ದರಿಂದ ನಾವು ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡಬೇಕು’ ಎಂದರು!

12ನೇ ಶತಮಾನದಲ್ಲಿ ಶರಣರು ಹೇಳಿದರು- ‘ಮಧ್ಯ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ‘. ಪರಮಾತ್ಮನ ಅಂಶವಾದ ಆತ್ಮವನ್ನು ‘ಹೆಣ್ಣು ಆತ್ಮ’ ಮತ್ತು ‘ಗಂಡು ಆತ್ಮ’ ಅಂತ ಜಗತ್ತಿನಲ್ಲಿ ಯಾರೂ ಕರೆದಿಲ್ಲ. ಆತ್ಮಕ್ಕೆ 7 ಗುಣಗಳಿವೆ- ಜ್ಞಾನ, ಪವಿತ್ರತಾ, ಪ್ರೇಮ, ಶಾಂತಿ, ಸುಖ, ಆನಂದ ಮತ್ತು ಶಕ್ತಿ. ಇಂಥ ಅದ್ಭುತ ಆತ್ಮವು ಶರೀರವನ್ನು ಸೇರಿಕೊಂಡಾಗ ಜೀವಾತ್ಮವಾಗುತ್ತದೆ. ಆದರೆ ಈ ಸೂಕ್ಷ್ಮವರಿಯದ 21ನೇ ಶತಮಾನದ ಆತ್ಮಘಾತುಕರು ಹೆಣ್ಣು ಭ್ರೂಣಹತ್ಯೆ ಮಾಡಿ ಜೀವಾತ್ಮ ಹುಟ್ಟುವ ಮೊದಲೇ ಸಾಯಿಸುತ್ತಿದ್ದಾರೆ. ಇನ್ನೂ ಕೆಲವರು ಮಲತಾಯಿ ಧೋರಣೆಯಿಂದ ಹುಡುಗಿಯರಿಗೆ ವಿದ್ಯೆ-ಬುದ್ಧಿಯ ಅವಕಾಶ ಕೊಡದೆ ವಂಚಿಸುತ್ತಿದ್ದಾರೆ. ಇದಕ್ಕೂ ಮೇಲಾಗಿ ಕೆಲವರು ಮನೆಗೆ ಮಹಾಲಕ್ಷ್ಮಿಯಂತೆ ಬಂದು ಕುಟುಂಬದ ಕುಡಿಗೆ ತಾಯಿಯಾಗುವ ಹೆಣ್ಣನ್ನು ವರದಕ್ಷಿಣೆಗಾಗಿ ಪೀಡಿಸಿ ಸಾಯಿಸುತ್ತಿದ್ದಾರೆ! ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ವರದಕ್ಷಿಣೆ ಸಾವು ನಮ್ಮ ದೇಶದಲ್ಲಿ ಆಗುತ್ತಿದೆ.

ರಾಷ್ಟ್ರೀಯ ಅಪರಾಧ ದಾಖಲೆ ದಳ (National Crime Records Bureau)ದ ಅಂಕಿ-ಅಂಶಗಳ ಪ್ರಕಾರ, 2012ನೇ ಇಸವಿಯಲ್ಲಿ 18,233 ವರದಕ್ಷಿಣೆ ಸಾವುಗಳು ಸಂಭವಿಸಿವೆ. 2012-14ರ ಅವಧಿಯಲ್ಲಿ 25,000 ಮಹಿಳೆಯರನ್ನು ವರದಕ್ಷಿಣೆಗಾಗಿ ದಹಿಸಲಾಗಿದೆ. ಪ್ರತಿ ಗಂಟೆಗೊಬ್ಬ ಮಹಿಳೆಯ ಹತ್ಯೆಮಾಡುವ ಕ್ರೂರಸಮಾಜ ನಮ್ಮದಾಗುತ್ತಿದೆ. ಆದ್ದರಿಂದ, ಪ್ರಧಾನ ಮಂತ್ರಿಗಳು ಎಲ್ಲ ಮಹಿಳಾ ಸರಪಂಚರಿಗೆ ಮನವಿ ಮಾಡಿದ್ದಾರೆ- ‘ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ ಸಾವು ನಿಲ್ಲಬೇಕೆಂದರೆ ಮಹಿಳೆಯರೇ ಮಹಿಳೆಯರಿಗಾಗಿ ಧ್ವನಿಎತ್ತುವ ಸಮಯ ಬಂದಿದೆ. ಹೆಣ್ಣು ಹತ್ಯೆಯ ಹೇಯಕೃತ್ಯ “ticking bomb’ ಆಗಿದೆ. ಇದನ್ನು ನಾವು ಇಂದು ಡಿಫ್ಯೂಸ್ ಮಾಡದಿದ್ದರೆ ವಿನಾಶ ಕಟ್ಟಿಟ್ಟಬುತ್ತಿ‘.

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ‘- ಅಂದರೆ, ‘ಎಲ್ಲಿ ಮಹಿಳೆಗೆ ಮನ್ನಣೆ ಇರುತ್ತದೋ ಅಲ್ಲಿ ದೇವರು ನೆಲೆಸುತ್ತಾನೆ.’ ‘ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ, ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮೋನಮಃ’ ಎಂದು ನಮ್ಮ ಜನನಿಯನ್ನೂ ಜಗಜ್ಜನನಿಯನ್ನೂ ಪೂಜಿಸೋಣ. ಸ್ವಾಮಿ ವಿವೇಕಾನಂದರು ಹೇಳಿದರು- ‘ಹಿಂದಿನ ಕಾಲದಲ್ಲಿ ಶೂರವೀರ ಧೀರ ಪುರುಷರು ಸಾಮ್ರಾಜ್ಯ ಕಟ್ಟುತ್ತಿದ್ದರು. ಮಹಿಳೆಯರಿಗಾಗಿ ಅವು ನಾಶವಾಗುತ್ತಿದ್ದವು (ರೋಮನ್ ಸಾಮ್ರಾಜ್ಯ ‘ಹೆಲೆನ್ ಆಫ್ ಟ್ರಾಯ್‘ಗಾಗಿ ನಾಶವಾಯಿತು). ಮುಂದಿನ ಸಮಾಜವನ್ನು ಸುಸಂಸ್ಕೃತ, ಸುಶೀಲ ಮಹಿಳೆಯರು ಕಟ್ಟಿ ಬೆಳೆಸಿ ನಮ್ಮ ಸಂಸ್ಕೃತಿಯನ್ನು ಉಳಿಸುವರು‘.

ನಿಜ, ತಾಯಿ ಇದ್ದರೆ ಮನೆ- ಅವಳಿದ್ದರೆ ಅದು ಅರಮನೆ, ಅವಳಿಲ್ಲದಿದ್ದರೆ ಅದು ಮರಳಮನೆ. ತನುವಿಗೆ ತಂಪು ಕೊಡುವುದು ಚಂದನ. ಮನಸ್ಸಿಗೆ ತಂಪು ಕೊಡುವುದು ಅವಳ ಸಾಂತ್ವನ. ಮಮತಾಮಯಿ, ತ್ಯಾಗಮಯಿ ತಾಯಂದಿರನ್ನು ಉಳಿಸೋಣ ಬೆಳೆಸೋಣ. ನಮ್ಮ ದೇಶದ ತಾಯಿಬೇರನ್ನು ರಕ್ಷಿಸೋಣ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top