ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಶೇಷ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡಲು ಅನುದಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು.ನಗರದಲ್ಲಿ ಸಚಿವರನ್ನು ಗುರುವಾರ ಭೇಟಿಯಾದ ದೀಪಾ ಕುಡಚಿ, ಆರ್‌ಸಿಯು ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ವಿವಿ ಅಡಿ 389 ಸಂಯೋಜಿತ ಕಾಲೇಜುಗಳಿದ್ದು, 1.35 ಲಕ್ಷ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ.
ಆರ್‌ಸಿಯುನ ಭೂಗೋಳಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆ ವಿಭಾಗವು ಜಿಐಎಸ್ ಮತ್ತು ಡಿಜಿಟಲ್ ಕಾರ್ಟೋಗ್ರಫಿ ಕುರಿತು ಕೌಶಲಾಭಿವೃದ್ಧಿ ಕೇಂದ್ರ ತೆರೆಯಲು ಉದ್ದೇಶಿಸಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಖಾಸಗಿ ಸಹಭಾಗಿತ್ವದಿಂದ 13 ಲಕ್ಷ ರೂಪಾಯಿ ಅನುದಾನ ಸಂಗ್ರಹಿಸಲಾಗಿದೆ. ಇನ್ನೂ 4.5 ಕೋಟಿ ರೂ. ಅನುದಾನದ ಕೊರತೆಯಿದ್ದು, ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರದ ನೂತನ ಕ್ರಮದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದರು.