ಹೆಚ್ಚುತ್ತಿದೆ ಕೋಳಿ ಅಂಕ ಹಾವಳಿ

ಶಿವರಾಜ ಎಂ. ಬೆಂಗಳೂರು

ಕೋಳಿ ಅಂಕ ಹೆಸರಿನಲ್ಲಿ ಜೂಜಾಟ ಬೆಂಗಳೂರು ಗ್ರಾಮಾಂತರದಲ್ಲೂ ಬೇರುಬಿಡುತ್ತಿದೆ. ಹುಂಜಗಳನ್ನು ಜೂಜಾಟಕ್ಕಿಟ್ಟು ಕ್ರೌರ್ಯ ಮೆರೆಯುವ ದಂಧೆಯನ್ನು ಬೇರುಸಹಿತ ಕಿತ್ತೊಗೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಇತ್ತೀಚಿಗೆ ಜಿಲ್ಲೆಯ ಎರಡು ಕಡೆ ಜೂಜಾಟದ ಮೇಲೆ ದಾಳಿ ನಡೆಸಿರುವ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನೆಲಮಂಗಲ ವ್ಯಾಪ್ತಿಯ ಹುಲ್ಲೆಗೌಡನಹಳ್ಳಿಯ ಸಾಮಿಲ್​ನಲ್ಲಿ ಕೋಳಿ ಪಂದ್ಯದಲ್ಲಿ ತೊಡಗಿದ್ದ 24 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮತ್ತೊಂದು ಪ್ರಕರಣದಲ್ಲಿ ದೇವನಹಳ್ಳಿ ತಾಲೂಕು ಅಣಿಘಟ್ಟ ಕೆರೆಯಂಗಳದ ಗ್ರಾಮದಲ್ಲಿ ದಾಳಿ ನಡೆಸಿ 6 ಮಂದಿಯನ್ನು ವಶಕ್ಕೆ ಪಡೆದ ವಿಶ್ವನಾಥಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವೆರಡು ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತಿರುವ ಜಿಲ್ಲಾ ಪೊಲೀಸರು ಜಿಲ್ಲೆಯಲ್ಲಿ ಕೋಳಿ ಪಂದ್ಯ ಬೇರುಬಿಡುತ್ತಿರುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಯುವಕರ ವ್ಯಸನ: ಮುಂಗಾರು ಕೈಕೊಟ್ಟು ಬಿತ್ತನೆ ಕಾರ್ಯ ಕುಂಠಿತವಾಗಿರುವ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಯುವಕರು ಇಂಥ ಜೂಜಾಟಕ್ಕೆ ಬಲಿಯಾಗುತ್ತಿದ್ದಾರೆ. ಕೃಷಿ ಚಟುವಟಿಕೆ ನಿಂತ ನೀರಾಗಿರುವುದರಿಂದ ರೈತಾಪಿ ವರ್ಗವು ಸುಲಭವಾಗಿ ಇದರತ್ತ ಆಕರ್ಷಿತವಾಗುತ್ತಿದೆ. ಜೂಜಾಟದಲ್ಲಿ ಹಣ ಕಳೆದುಕೊಳ್ಳುವವರು ಕಡೆಗೆ ಮನೆಯ ವಸ್ತುಗಳನ್ನೇ ಮಾರಿ ಹಣ ಹೊಂದಿಸುವ ವ್ಯಸನಕ್ಕೆ ಸಿಲುಕುತ್ತಾರೆ. ಇಸ್ಟೀಟ್ ಆಟಕ್ಕಿಂತಲೂ ಹೆಚ್ಚು ಕ್ರೇಜ್ ಸೃಷ್ಟಿಸುತ್ತಿರುವ ಈ ಜೂಜಾಟ ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡುತ್ತಿರುವುದು ಆತಂಕ ಸೃಷ್ಟಿಮಾಡಿದೆ.

ರಾಜ್ಯಕ್ಕೆ ಅಂಟಿಕೊಂಡಿರುವ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಪ್ರಭಾವದಿಂದ ಕೋಳಿ ಪಂದ್ಯ ಎಂಬ ಜೂಜಾಟ ರಾಜ್ಯದ ಗಡಿದಾಟಿ ಜಿಲ್ಲೆಗೆ ಕಾಲಿಟ್ಟಿದೆ ಎನ್ನಲಾಗಿದೆ.

ಹುಂಜದ ಬೆಲೆ ಐದಾರು ಸಾವಿರ: ಇಂಥ ಜೂಜಾಟಕ್ಕೆ ಸಾಮಾನ್ಯ ಹುಂಜಗಳನ್ನು ಬಳಸುವುದಿಲ್ಲ. ಇವಕ್ಕೆ ವಿಶೇಷ ತರಬೇತಿ ನೀಡಲಾಗಿರುತ್ತದೆ. ಕೋಳಿಗಳ ಪಂದ್ಯಕ್ಕೆಂದೇ ಸಾಕುವ ಜಾಯ್, ನವಿಲು, ಬಿಳಿ ನವಿಲು ಮತ್ತಿತರ ತಳಿಗಳ ಕೋಳಿಗಳು ಐದಾರು ಸಾವಿರ ಬೆಲೆ ಬಾಳುತ್ತವೆ. ತಮಿಳುನಾಡು ಹಾಗೂ ಆಂಧ್ರದ ಕೆಲವು ಆಯ್ದ ಪ್ರದೇಶಗಳಲ್ಲಿ ಈ ಹುಂಜಗಳನ್ನು ಖರೀದಿಸಲಾಗುತ್ತದೆ ಎನ್ನಲಾಗಿದೆ.

ಬಾಜಿಯಲ್ಲಿ ಕ್ರೌರ್ಯ: ಈ ಪಂದ್ಯದಲ್ಲಿ ಸೆಣಸುವ ಎರಡು ಹುಂಜಗಳ ಕಾಲುಗಳಿಗೆ ಹರಿತವಾದ ಕತ್ತಿ ಕಟ್ಟಲಾಗಿರುತ್ತದೆ. ಒಂದು ಮತ್ತೊಂದರ ವಿರುದ್ಧ ಸೆಣಸುವಾಗ ಎರಡೂ ಹುಂಜಗಳಲ್ಲಿ ನೆತ್ತರು ಹರಿಯುತ್ತದೆ. ಇಂಥ ಕ್ರೌರ್ಯವನ್ನು ಆಸ್ವಾದಿಸುವ ಜೂಜುಕೋರರರು ಸೈಕೋಗಳಂತೆ ವರ್ತಿಸುತ್ತಾರೆ. ಕತ್ತಿಗಳ ಮೂಲಕ ಹುಂಜ ಪ್ರತಿಸ್ಪರ್ಧಿ ಹುಂಜವನ್ನು ಕೊಲ್ಲುವುದೇ ಈ ಪಂದ್ಯದ ನಿಯಮ. ಸೆಣಸುವ ಹುಂಜಗಳ ಪರ ಹಾಗೂ ವಿರೋಧವಾಗಿ ಜೂಜುಕೋರರರು ಹಣವನ್ನು ಬಾಜಿ ಕಟ್ಟುತ್ತಾರೆ.

ವ್ಯವಸ್ಥಿತ ಜಾಲ: ಕೋಳಿ ಪಂದ್ಯ ಆಡಿಸುವ ಪ್ರತ್ಯೇಕ ತಂಡಗಳೇ ಕಾರ್ಯಾಚರಣೆಯಲ್ಲಿ ತೊಡಗುತ್ತವೆ. ಗ್ರಾಮದ ಹೊರವಲಯಗಳಲ್ಲಿ ಜನ ಸಂಚಾರವಿಲ್ಲದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದೇ ಸ್ಥಳದಲ್ಲಿ ಮತ್ತೆ ಪಂದ್ಯ ಆಯೋಜನೆ ಮಾಡುವುದಿಲ್ಲ. ಪ್ರತಿ ಬಾರಿ ಬೇರೆ ಬೇರೆ ಕಡೆ ಸ್ಥಳಾಂತರಿಸಲಾಗುತ್ತಿರುತ್ತದೆ. ಇದರ ಸುಳಿವು ಜೂಜುಕೋರರು ಹೊರತು ಪಡಿಸಿ ಯಾರಿಗೂ ಗೊತ್ತಾಗುವುದಿಲ್ಲ.

ಅಪರಾಧ ಚಟುವಟಿಕೆ ತಾಣ: ಕೋಳಿ ಅಂಕದಲ್ಲಿ ನೂರಾರು ಮಂದಿ ಪಾಲ್ಗೊಳ್ಳುತ್ತಾರೆ. ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯೊಂದಿಗೆ ಬಾಜಿಯಲ್ಲಿ ತೊಡಗುತ್ತಾರೆ. ಸೋತವರು ಗೆದ್ದವರ ನಡುವೆ ದ್ವೇಷ ಬೆಳೆಯುತ್ತದೆ, ಗಲಾಟೆ, ಕಲಹಗಳಿಗೆ ಎಡೆಮಾಡಿಕೊಡುತ್ತದೆ. ಪರಿಸ್ಥಿತಿ ಅತಿರೇಕಕ್ಕೆ ಹೋಗಿ ಹೊಡೆದಾಟ, ಕೊಲೆಯಂತಹ ಕೃತ್ಯಗಳು ನಡೆಯುವ ಸಾಧ್ಯತೆ ಇರುತ್ತದೆ.

ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚಿಗೆ ಕೆಲವು ಕಡೆಗಳಲ್ಲಿ ಕೋಳಿ ಜೂಜಾಟ ಆರಂಭವಾಗಿದೆ. ಇದನ್ನು ಬೇರುಮಟ್ಟದಿಂದಲೇ ತಡೆಹಿಡಿಯಲು ಹದ್ದಿನಕಣ್ಣಿಡಲಾಗಿದೆ. ಎಲ್ಲಿಯಾದರೂ ಇಂಥ ಕೃತ್ಯ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ.

| ಶಿವಕುಮಾರ್ ಎಸ್​ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ

Leave a Reply

Your email address will not be published. Required fields are marked *