ಹೆಚ್ಚುತ್ತಲಿದೆ ಸಾವಿನ ಸರತಿ

ಯಲ್ಲಾಪುರ:  ತಾಲೂಕಿನ ಗ್ರಾಮೀಣ ಭಾಗಗಳ ವಿದ್ಯುತ್ ಲೈನ್ 4 ದಶಕಗಳಷ್ಟು ಹಳೆಯದಾಗಿದ್ದು, ಪದೇ ಪದೆ ತುಂಡಾಗಿ ಅವಾಂತರ ಸೃಷ್ಟಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಲೈನ್ ತುಂಡಾಗಿ ಬಿದ್ದು, ಅನಾಹುತ ಸಂಭವಿಸುತ್ತಿರುವುದರಿಂದ ವಿದ್ಯುತ್ ತಂತಿಯನ್ನು ಬದಲಿಸಬೇಕೆಂಬ ಆಗ್ರಹ ವ್ಯಾಪಕವಾಗಿ ಕೇಳಿ ಬರುತ್ತಿದೆ.

ವಿದ್ಯುತ್ ಲೈನ್​ಗಳು ತುಂಬಾ ಹಳೆಯದಾಗಿರುವುದರಿಂದ ತುಕ್ಕು ಹಿಡಿದು, ಆಗಾಗ ತುಂಡಾಗಿ ಬೀಳುತ್ತಲೇ ಇವೆ. ಅಲ್ಲಲ್ಲಿ ರಸ್ತೆಯ ಪಕ್ಕ ಕೈಗೆಟಕುವ ಸ್ಥಿತಿಯಲ್ಲಿ ಜೋತಾಡುತ್ತಿವೆ. ಹಲವೆಡೆ ತಂತಿ ಹಾಗೂ ಕಂಬದ ಸುತ್ತ ಹಸಿರು ಬಳ್ಳಿಗಳು ಸುತ್ತಿಕೊಂಡಿದ್ದರೂ ಅದನ್ನು ತೆರವುಗೊಳಿಸುವ ಕಾರ್ಯ ಆಗುತ್ತಿಲ್ಲ.  ಅವಘಡಗಳು ಸಂಭವಿಸಿದಾಗಲೆಲ್ಲ ಹಳೇ ತಂತಿಗಳ ಬದಲಾವಣೆಯ ಕುರಿತು ಆಗ್ರಹ ಕೇಳಿ ಬಂದರೂ ನಂತರದ ದಿನಗಳಲ್ಲಿ ಅದರತ್ತ ಯಾರೂ ಗಮನ ಹರಿಸುತ್ತಿಲ್ಲ. ಕಳೆದ ವರ್ಷ ಚಿನ್ನಾಪುರದಿಂದ ತೇಲಂಗಾರ, ವಜ್ರಳ್ಳಿ, ಕಳಚೆ ಮಾರ್ಗ ಸೇರಿ ಕೆಲವೆಡೆ ಹಳೆಯ ತಂತಿಯನ್ನು ಬದಲಿಸಲಾಗಿದೆ. ತಾಲೂಕಿನ ಎಲ್ಲ ವಿದ್ಯುತ್ ಮಾರ್ಗಗಳಲ್ಲೂ ಹಳೆಯ ತಂತಿ ಬದಲಾವಣೆಯ ಕಾರ್ಯವನ್ನು ಹೆಸ್ಕಾಂ ಕೈಗೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳು ತಪ್ಪಬಹುದೆಂಬ ಅಭಿಪ್ರಾಯ ಜನತೆಯಿಂದ ವ್ಯಕ್ತವಾಗುತ್ತಿದೆ.

ಮಾಸದ ಕಹಿ ನೆನಪು

ಎರಡು ವರ್ಷಗಳ ಹಿಂದೆ ಕುಂದರಗಿ ಸಮೀಪ ಗದ್ದೆ ನಾಟಿ ಮಾಡುತ್ತಿರುವ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದರು. ನಾಲ್ಕು ದಿವಸಗಳ ಹಿಂದೆ ಪಟ್ಟಣದಲ್ಲಿ ಕಟ್ಟಡದ ಕೆಲಸದಲ್ಲಿ ನಿರತನಾಗಿದ್ದ ಕಾರ್ವಿುಕನೊಬ್ಬ ವಿದ್ಯುತ್ ತಂತಿ ರ್ಸ³ಸಿ ಮೃತಪಟ್ಟಿದ್ದ. ಈ ಘಟನೆ ಮಾಸುವ ಮುನ್ನವೇ ಜುಲೈ 17ರಂದು ತಾಲೂಕಿನ ಗುಂಡ್ಯಾನಕೊಪ್ಪದ ಬಳಿ ಕೃಷಿ ಕಾರ್ಯ ನಿರತ ಇಬ್ಬರು ರೈತರು ಧಾರುಣವಾಗಿ ಮೃತಪಟ್ಟಿದ್ದಾರೆ. ಇದಲ್ಲದೆ ಎರಡು ವರ್ಷಗಳಲ್ಲಿ ತುಂಡಾಗಿ ಬಿದ್ದ ವಿದ್ಯುತ್ ಲೈನ್ ರ್ಸ³ಸಿ 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.

ವಿದ್ಯುತ್ ಜೊತೆ ಆಟ ಸಲ್ಲದು

ಪ್ರಾಣಿಗಳಿಂದ ಬೆಳೆಯ ರಕ್ಷಣೆಗಾಗಿ ಜಮೀನಿನ ಪಕ್ಕ ಹಾದು ಹೋದ ವಿದ್ಯುತ್ ತಂತಿಯಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಜಮೀನಿನ ಸುತ್ತ ತಂತಿ ಅಳವಡಿಸುವ ರೈತರೂ ಕೆಲವೆಡೆ ಇದ್ದಾರೆ. ಇಂತಹ ಅಕ್ರಮವನ್ನು ತಡೆಯಲು ಹೆಸ್ಕಾಂ ಎಷ್ಟೇ ಪ್ರಯತ್ನಿಸಿದರೂ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ರೈತರು ವಿದ್ಯುತ್ ಜೊತೆ ಇಂತಹ ದುಸ್ಸಾಹಸಕ್ಕೆ ಕೈಹಾಕದೇ ಇರುವ ಕುರಿತು ಅವರಲ್ಲೇ ಅರಿವು ಮೂಡಬೇಕಿದೆ.

 ತಾಲೂಕಿನ ಎಲ್ಲ ವಿದ್ಯುತ್ ಮಾರ್ಗಗಳ ತಂತಿ ಬದಲಾವಣೆಯ ಅಗತ್ಯತೆಯಿದೆ. ಕೆಲವೆಡೆ ತಂತಿ ಬದಲಾವಣೆ ಕಾರ್ಯ ನಡೆಯುತ್ತಿದೆ. ಎಲ್ಲ ತಂತಿಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದ್ದು, 4 ಕೋಟಿ ರೂ. ವೆಚ್ಚದ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಶೀಘ್ರ ತಂತಿ ಬದಲಾವಣೆಯ ಕಾರ್ಯ ಕೈಗೊಳ್ಳಲಾಗುವುದು
 | ವಿಶಾಲ ಧರೆಪ್ಪಗೋಳ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್