ಹೆಚ್ಚಿದ ಮತದಾನ ಪ್ರಮಾಣ

ಕಾರವಾರ: ಚುನಾವಣಾ ಆಯೋಗ ಕೈಗೊಳ್ಳುತ್ತಿರುವ ನಿರಂತರ ಮತ ಜಾಗೃತಿಯ ಪರಿಣಾಮ ಕಳೆದ ಲೋಕಸಭೆ ಚುನಾವಣೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಕ್ಷೇತ್ರದಲ್ಲಿ ಶೇ. 74.07 ರಷ್ಟು ಮತದಾನವಾಗಿದ್ದು, ಎರಡನೇ ಹಂತದಲ್ಲಿ ಮಂಗಳವಾರ ಮತದಾನ ನಡೆದ ರಾಜ್ಯದ 14 ಜಿಲ್ಲೆಗಳಲ್ಲಿ ಕ್ಷೇತ್ರ ಎರಡನೇ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿದ್ದ 15,52,544 ಮತದಾರರ ಪೈಕಿ 11,49,993 ಮತದಾರರು ಹಕ್ಕು ಚಲಾಯಿಸಿದ್ದಾರೆ. ಅದರಲ್ಲಿ 5,90,991 ಪುರುಷರು, 5,58,998 ಮಹಿಳೆಯರಿದ್ದಾರೆ. ಅಂಚೆ ಮತದಾನದ ಪ್ರಮಾಣ ಇನ್ನೂ ಸೇರಬೇಕಿದ್ದು ಒಟ್ಟಾರೆ ಪ್ರಮಾಣದಲ್ಲಿ ಶೇ. 1.5 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 2014 ರಲ್ಲಿ ಶೇ. 69.20ರಷ್ಟು ಮತ ಚಲಾವಣೆಯಾಗಿತ್ತು. 2009ರಲ್ಲಿ ಕೇವಲ 59.09 ರಷ್ಟು ಮತ ಚಲಾವಣೆಯಾಗಿತ್ತು.

ಶಾಂತಿಯುತ: ಉತ್ತರ ಕನ್ನಡ ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಮಂಗಳವಾರ ಶಾಂತಿಯುತ, ಭಾಗಶಃ ಸುಗಮ ಮತದಾನ ಮಂಗಳವಾರ ನಡೆಯಿತು. ಯುವ ಜನತೆ, ವೃದ್ಧರಾದಿಯಾಗಿ ಉತ್ಸುಕತೆಯಿಂದ ಮತ ಚಲಾಯಿಸಿದರು. ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆ ನಿಧಾನಗತಿಯಲ್ಲಿ, ಮಧ್ಯಾಹ್ನದ ನಂತರ ಚುರುಕಾಗಿ ಮತದಾನ ನಡೆಯಿತು. ಹೊರ ದೇಶ, ಹೊರ ರಾಜ್ಯಗಳಲ್ಲಿದ್ದವರೂ ಬಂದು ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.

ಬಿಗಿ ಭದ್ರತೆ: ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಮತ್ತು ಒಂದೇ ಕಡೆ ನಾಲ್ಕಕ್ಕೂ ಹೆಚ್ಚು ಮತಗಟ್ಟೆಗಳಿರುವ ಕಡೆ ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಾರವಾರ ಹಾಗೂ ಅಂಕೋಲಾದಲ್ಲಿ ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ ಸಿಬ್ಬಂದಿ ಬಂದೂಕು ಹಿಡಿದು ಕರ್ತವ್ಯ ನಿಭಾಯಿಸಿ ಶಾಂತಿಯುತ ಮತದಾನಕ್ಕೆ ನೆರವಾದರು.

ಶತಾಯುಷಿ ಮತದಾನ

ಕಾರವಾರದ ಅಸ್ನೋಟಿಯ ಮತಗಟ್ಟೆಯಲ್ಲಿ ಗ್ರಾಮದ 102 ವರ್ಷದ ವೃದ್ಧ ಗಣಪತಿ ಸಾಳುಂಕೆ ಮತದಾನ ಮಾಡಿದರು. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಕಳೆದ ಎಲ್ಲ ಚುನಾವಣೆಗಳಲ್ಲಿ ಮತದಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 66 ಶತಾಯುಷಿ ಮತದಾರರಿದ್ದಾರೆ.

ಹಲವೆಡೆ ಕೈಕೊಟ್ಟ ಮತ ಯಂತ್ರ

ಜಿಲ್ಲೆಯಲ್ಲಿ ಒಟ್ಟು 18 ಕಡೆಗಳಲ್ಲಿ ಮತ ಯಂತ್ರದಲ್ಲಿ ಸಣ್ಣಪುಟ್ಟ ದೋಷದಿಂದ ಮತದಾನಕ್ಕೆ ವಿಳಂಬವಾಯಿತು. ಕಾರವಾರ ನಗರದ ಬಾಯಿ ಕುವರಬಾಯಿ ಶಾಲೆ, ಸರ್ಕಾರಿ ಉರ್ದು ಶಾಲೆಯಲ್ಲಿ ಮತದಾನ ಅರ್ಧ ಗಂಟೆಯ ನಂತರ ಪ್ರಾರಂಭವಾಯಿತು. ಅಮದಳ್ಳಿ ಮತಗಟ್ಟೆಯಲ್ಲಿ ಅಂಕೋಲಾದ ಕೇಣಿಯ ಎರಡು ಮತಗಟ್ಟೆಯಲ್ಲಿ ಸುಮಾರು ಒಂದು ತಾಸು ವಿಳಂಬವಾಗಿ ಮತದಾನ ಪ್ರಾರಂಭವಾಯಿತು. ಕಾರವಾರದ ಸದಾಶಿವಗಡ ಶಿವಾಜಿ ವಿದ್ಯಾಲಯದ ಮತಗಟ್ಟೆಯಲ್ಲಿ ಮತದಾನದ ನಡುವೆ ಎರರ್ ಬಂದಿದ್ದರಿಂದ ಕೆಲ ಕಾಲ ಗೊಂದಲ ಉಂಟಾಗಿತ್ತು. ನಂತರ ಸೆಕ್ಟರ್ ಅಧಿಕಾರಿ ಆಗಮಿಸಿ ಪರಿಸ್ಥಿತಿ ಸರಿಪಡಿಸಿದರು.

ಕಾರವಾರದ ಕುರ್ನಿಪೇಟೆ ಹಾಗೂ ಗೋಪಶಿಟ್ಟಾ ಮತಗಟ್ಟೆಯಲ್ಲಿ ಮತ ಯಂತ್ರ ಮತದಾನದ ನಡುವೆ ಕೈ ಕೊಟ್ಟಿದ್ದರಿಂದ ಕಂಟ್ರೋಲ್ ಯುನಿಟ್ ಬದಲಾಯಿಸಲಾಯಿತು. ನಾಲ್ಕು ಕಡೆಗಳಲ್ಲಿ ಬ್ಯಾಲೆಟ್ ಯುನಿಟ್​ಗಳನ್ನು ಬದಲಾಯಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಅಭಿಜಿನ್ ತಿಳಿಸಿದ್ದಾರೆ.

ಯಾದಿಯಲ್ಲಿ ಹೆಸರು ನಾಪತ್ತೆ

ಅಂಕೋಲಾ: ಲೋಕಸಭಾ ಚುನಾವಣೆಗೆ ವಿವಿಧ ಬೂತ್​ಗಳಲ್ಲಿ ಮತದಾರರು ಬೆಳಗ್ಗೆಯಿಂದಲೇ ಖುಷಿಯಿಂದ ತಮ್ಮ ಹಕ್ಕು ಚಲಾಯಿಸಿದರು.

ಮತದಾರರ ಯಾದಿಯಲ್ಲಿ ಹೆಸರು ನಾಪತ್ತೆ: ತಾಲೂಕಿನ ಹತ್ತಾರು ಕಡೆಗಳಲ್ಲಿ 100ಕ್ಕೂ ಅಧಿಕ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ದೋಷವನ್ನು ಎತ್ತಿ ಹಿಡಿಯಿತು. ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರ ಹೆಸರುಗಳಿವೆ. ಆದರೆ, ಬದುಕಿದ್ದವರ ಹೆಸರು ಇರಲಿಲ್ಲ. ಕೆಲವರು ಮತದಾನದ ಗುರುತಿನ ಚೀಟಿ ತೆಗೆದುಕೊಂಡು ಹೋದರೂ ಮತ ಹಾಕಲಾಗದೆ ವಾಪಸ್ ತೆರಳಿದ ಘಟನೆ ಹಲವೆಡೆ ನಡೆದಿವೆ.