ಬೆಂಗಳೂರು: ಭಾರತ ಮಧುಮೇಹಿಗಳ ತವರಾಗಿ ಬದಲಾಗುತ್ತಿದೆ. ಮಕ್ಕಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರೋಗಕ್ಕೆ ತುತ್ತಾಗುತ್ತಿದ್ದು, ಹಸುಳೆಗಳಲ್ಲೂ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯೊಂದರಲ್ಲೇ 450 (6 ತಿಂಗಳಿಂದ-16 ವರ್ಷ ವಯಸ್ಸಿನ) ಮಕ್ಕಳು ಟೈಪ್-1 ಮಧುಮೇಹ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಜನತೆಯಲ್ಲಿ ಟೈಪ್-2 ಹೆಚ್ಚಿನ ಪ್ರಮಾಣದಲ್ಲಿದೆ. ಇತ್ತೀಚೆಗೆ ಹುಟ್ಟುವ ಮಕ್ಕಳಲ್ಲಿಯೂ ಮಧುಮೇಹ ಕಾಣಿಸಿಕೊಳ್ಳುತ್ತಿದ್ದು, ನ್ಯೂನೆಟಿಕಲ್ ಡಿಯಾಬಿಟಿಕ್ ಎಂದು ಗುರುತಿಸಲಾಗಿದೆ. ಆದರೆ ಇದಕ್ಕೆ ನಿಖರ ಕಾರಣ ಪತ್ತೆ ಆಗಿಲ್ಲ ಎನ್ನುತ್ತಾರೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ತಜ್ಞ ಡಾ. ನಿಜಗುಣ.
ಕಾರಣವೇನು: ಮಧುಮೇಹ ಯುವಜನರನ್ನು (30-40 ವರ್ಷವಯಸ್ಸಿನವರು) ಹೆಚ್ಚು ಆವರಿಸುತ್ತಿದ್ದು, ಇವರಲ್ಲಿ ನಗರ ಪ್ರದೇಶದವರೇ ಅಧಿಕವಾಗಿದ್ದಾರೆ. ಬದಲಾದ ಆಹಾರ ಹಾಗೂ ಜೀವನ ಶೈಲಿ ಯುವಜನರಲ್ಲಿ ಮಧುಮೇಹ ಹೆಚ್ಚಲು ಕಾರಣವಾಗಿದೆ. ಇದಲ್ಲದೆ ಅಶಿಸ್ತು, ಮಾನಸಿಕ ಒತ್ತಡ, ಸೋಮಾರಿತನ, ದೇಹಕ್ಕೆ ವ್ಯಾಯಾಮವಿಲ್ಲದಿರುವುದು, ಬೊಜ್ಜು, ಜಂಕ್ಫುಡ್ ಸೇವನೆ ಸಹ ಕಾರಣ ಇದೇ ರೀತಿ ಮುಂದುವರಿದರೆ 2020 ವೇಳೆಗೆ ಭಾರತ ಮಧುಮೇಹಿಗಳ ತವರಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಇದಕ್ಕೆ ಪುಷ್ಠಿ ನೀಡಿದಂತೆ 2000ದಲ್ಲಿ ಭಾರತದಲ್ಲಿ 31.7 ದಶಲಕ್ಷದಷ್ಟಿದ್ದ ಮಧುಮೇಹಿಗಳ ಸಂಖ್ಯೆ ಈಗ 62.4 ದಶಲಕ್ಷ ಮೀರಿದೆ. ಜಗತ್ತಿನ ಪ್ರತಿ ಏಳರಲ್ಲಿ ಒಬ್ಬರಿಗೆ ಮಧುಮೇಹವಿದೆ ಎಂದು ಅಂದಾಜಿಸಲಾಗಿದ್ದು, ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ(ಐಡಿಎಫ್) ಸಮೀಕ್ಷೆ ಪ್ರಕಾರ 2030ರ ವೇಳೆಗೆ ದೇಶದ ಜನಸಂಖ್ಯೆಯಲ್ಲಿ ಶೇ.9 ಜನರಿಗೆ ಮಧುಮೇಹ ಆವರಿಸಿಕೊಳ್ಳುವ ಸಾಧ್ಯತೆಗಳಿವೆ.
ಮಧುಮೇಹದ ವಿಧಗಳು
ಟೈಪ್-1: ದೇಹವು ಇನ್ಸುಲಿನ್ ಉತ್ಪಾದಿಸಲು ವಿಫಲವಾಗುತ್ತದೆ. ಇದರಿಂದ ರೋಗಿ ಜೀವನಪರ್ಯಂತ ಇನ್ಸುಲಿನ್ ಚುಚ್ಚುಮದ್ದು ಅವಲಂಬಿಸಬೇಕಾಗುತ್ತದೆ. 16 ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಟೈಪ್-2: ಇನ್ಸುಲಿನ್ಗೆ ದೇಹ ಪ್ರತಿರೋಧ ಒಡ್ಡುತ್ತದೆ. ಜೀವನ ಶೈಲಿ ಮತ್ತು ಆಹಾರದಲ್ಲಿನ ಬದಲಾವಣೆಯಿಂದ ಬರುವ ಈ ಕಾಯಿಲೆ ಅನುವಂಶಿಕವಾಗಿ ಬರುವ ಸಾಧ್ಯತೆ ಶೇ. 30ರಷ್ಟಿರುತ್ತದೆ. ಯುವಜನ ಮತ್ತು ವಯಸ್ಕರಲ್ಲಿ ಇದು ಹೆಚ್ಚು.
ಟೈಪ್ -3: ಹೊಟ್ಟೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ, ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗಳಿಗಾಗಿ ಹೆಚ್ಚು ಮಾತ್ರೆ ಮತ್ತು ಔಷಧ ಸೇವನೆ, ಜೀರ್ಣಶಕ್ತಿಯಲ್ಲಿ ವ್ಯತ್ಯಾಸ ಉಂಟಾದಾಗ, ಥೈರಾಯ್್ಡ ಸಮಸ್ಯೆ ಇದ್ದವರಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇತರ ಕಾಯಿಲೆಗೆ ಆಹ್ವಾನ
ಮಧುಮೇಹ ಜೀವಿತಾವಧಿಯ ಕಾಯಿಲೆ. ಇದನ್ನು ನಿರ್ಲಕ್ಷಿಸಿದರೆ ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಪಾರ್ಶ್ವವಾಯು, ಅಂಧತ್ವ ಕಾಡಬಹುದು. ಗಾಯ ವಾಸಿಯಾಗದೆ ಗ್ಯಾಂಗ್ರಿನ್ಗೆ ತಿರುಗಬಹುದು. ಇದು ಬಂಜೆತನಕ್ಕೂ ಕಾರಣವಾಗಲಿದೆ. ಆದ್ದರಿಂದ ಎಚ್ಚರಿಕೆ ಅತಿ ಮುಖ್ಯ. ಉತ್ತಮ ಆಹಾರ ಸೇವನೆ, ವ್ಯಾಯಾಮ, ವೈದ್ಯರ ಸಲಹೆಯಂತೆ ನಿಯಮಿತ ತಪಾಸಣೆಯಿಂದ ಇದನ್ನು ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ಕರ್ನಾಟಕ ಇನ್ಸಿ್ಟಟ್ಯೂಟ್ ಎಂಡೋಕ್ರೖೆನಾಲಜಿ ಅಂಡ್ ರಿಸರ್ಚ್ನ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್.
ಮಧುಮೇಹ ಎಂದರೇನು?
ಮಧುಮೇಹ (ಡಯಾಬಿಟಿಸ್) ದೇಹವು ಅಗತ್ಯವಾದಷ್ಟು ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ ಅಥವಾ ಇನ್ಸುಲಿನ್ ಪರಿಚಲನೆ ಪ್ರಕ್ರಿಯೆಗೆ ತೊಡಕುಂಟಾದಾಗ ಇದು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿನ ಮೇದೋಜೀರಕ ಗ್ರಂಥ ತಯಾರಿಸುವ ಇನ್ಸುಲಿನ್ ಜೀವಕೋಶಗಳಿಗೆ ಗ್ಲುಕೋಸ್ (ಸಕ್ಕರೆ) ಬಳಸಿಕೊಂಡು ಅದನ್ನು, ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ನೆರವಾಗುತ್ತದೆ. ಯಾವಾಗ ದೇಹ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುವುದಿಲ್ಲವೋ ಆಗ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಮಧುಮೇಹ ಬರುತ್ತದೆ. ಹೀಗಾಗಿ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಎಚ್ಚರವಹಿಸಬೇಕು ಎನ್ನುತ್ತಾರೆ ತಜ್ಞರು.
|ಪಂಕಜ ಕೆ.ಎಂ.