ಹೆಗಡೇಶ್ವರ ದೇಗುಲದ ಹುಂಡಿ ಕಳವು

ಶ್ರೀರಂಗಪಟ್ಟಣ: ತಾಲೂಕಿನ ಮೇಳಾಪುರ ಗ್ರಾಮದ ಕಾವೇರಿ ನದಿ ತಟದಲ್ಲಿರುವ ಹೆಗಡೇಶ್ವರ ದೇವಾಲಯದ ಬಾಗಿಲು ಮುರಿದು ಹುಂಡಿ ಕಳವು ಮಾಡಲಾಗಿದೆ.

ಬುಧವಾರ ತಡರಾತ್ರಿ ಕಳ್ಳತನ ಮಾಡಲಾಗಿದ್ದು, ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ದೇವಾಲಯದ ಪಾರ್ವತಿ ಗುಡಿಯ ಬಾಗಿಲ ಬೀಗಮುರಿಯಲು ಯತ್ನಿಸಿ ವಿಫಲವಾಗಿದ್ದು, ಹೆಗಡೇಶ್ವರ ಗುಡಿಯ ಬಾಗಿಲನ್ನು ಮುರಿದು ಹುಂಡಿ ಕದ್ದೊಯ್ದಿದ್ದಾರೆ. ಸಮೀಪದ ಕಬ್ಬಿನ ಗದ್ದೆಯಲ್ಲಿ ಹುಂಡಿ ಹೊಡೆದಿರುವ ಕಳ್ಳರು, ಹಣ ತೆಗೆದುಕೊಂಡು ಹುಂಡಿಯನ್ನು ಅಲ್ಲಿಯೇ ಬಿಸಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ತಿಂಗಳ ಹಿಂದಷ್ಟೇ ದೇವಾಲಯದ ಆಡಳಿತ ಮಂಡಳಿ ಹುಂಡಿ ತೆರೆದು ಎಣಿಕೆ ನಡೆಸಿ ಹಣ ಪಡೆದಿತ್ತು. ಹಾಗಾಗಿ ಹೆಚ್ಚಿನ ಹಣ ಹುಂಡಿಯಲ್ಲಿ ಸಂಗ್ರಹವಾಗಿರಲಿಲ್ಲ. ಸುಮಾರು 8 ಸಾವಿರ ರೂ.ಗಳಷ್ಟು ಹಣ ಸಿಕ್ಕಿರಬಹುದು’ ಎಂದು ಅರ್ಚಕ ತ್ಯಾಗರಾಜು ತಿಳಿಸಿದ್ದಾರೆ.