ಹೆಗಡೆ ಗ್ರಾಪಂಗೆ ಸಾರ್ವಜನಿಕರ ಮುತ್ತಿಗೆ

ಕುಮಟಾ: ತಾಲೂಕಿನ ಹೆಗಡೆಯ ಗಾಂಧೀನಗರದಲ್ಲಿ ನಿರ್ವಿುಸಲಾದ ಶುದ್ಧ ಕುಡಿಯುವ ನೀರಿನ ಘಟಕ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಸ್ಥಳೀಯರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಗುರುವಾರ ಮುತ್ತಿಗೆ ಹಾಕಿ ಒತ್ತಾಯಿಸಿದರು.

ಒಂದು ವರ್ಷದ ಹಿಂದೆ ಸಾರ್ವಜನಿಕ ಬಾವಿಯ ಪಕ್ಕದಲ್ಲಿ ಕೆಆರ್​ಐಡಿ ಯೋಜನೆಯಡಿ ಕುಡಿಯುವ ನೀರಿನ ಘಟಕ ನಿರ್ವಿುಸಿ ಸಾಂಕೇತಿಕವಾಗಿ ಉದ್ಘಾಟನೆಯನ್ನೂ ಮಾಡಲಾಗಿದೆ. ಆದರೆ, ಘಟಕಕ್ಕೆ ನೀರು ಪೂರೈಕೆ ವ್ಯವಸ್ಥೆಯೇ ಆಗಿಲ್ಲ.

ಸದ್ಯ ನೀರಿನ ಅಭಾವ ಮಿತಿಮೀರಿದೆ. ಘಟಕವಾದರೂ ಬಳಕೆಗೆ ಯೋಗ್ಯವಾಗಿದ್ದರೆ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿರಲಿಲ್ಲ ಎಂದು ಪಿಡಿಒ ಎಂ.ವಿ. ಜೋಶಿಗೆ ತಿಳಿಸಿದರು. ಪಿಡಿಒ ಅವರಿಂದ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷರನ್ನು ಕರೆಯಿಸಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಬಳಿಕ ಹೆಗಡೆ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಟಗಾರ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ‘ಶುದ್ಧ ನೀರಿನ ಘಟಕಕ್ಕೆ ಪೈಪ್​ಲೈನ್, ಪಂಪ್ ಅಳವಡಿಸುವುದು ಹಾಗೂ ಇತರ ಕೆಲಸಗಳಿಗೆ 1.50ಲಕ್ಷ ರೂ. ಮೀಸಲಿಟ್ಟು ಪ್ರಸ್ತಾವನೆ ಕಳುಹಿಸಲಾಗಿದೆ. ನೀತಿ ಸಂಹಿತೆಯಿಂದಾಗಿ ವಿಳಂಬವಾಗಿದೆ. ಸದ್ಯವೇ ಮಂಜೂರಾತಿ ದೊರಕುವ ಭರವಸೆ ಇದ್ದು, ಎರಡ್ಮೂರು ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ’ ಎಂದು ವಿವರಿಸಿದರು. ರವಿ ಮುಕ್ರಿ ಮಾತನಾಡಿ, ಮುಂದಿನ ದಿನಗಳಲ್ಲಿ ಪಂಚಾಯಿತಿಯಿಂದ ಮನೆಮನೆಗೂ ನೀರು ಪೂರೈಕೆಗೆ ನಲ್ಲಿ ಅಳವಡಿಸಿ ಎಂದು ಕೋರಿದರು. ಗ್ರಾಪಂ ಸದಸ್ಯೆ ನಾಗವೇಣಿ ಮುಕ್ರಿ, ಕವಿತಾ ಶೆಟ್ಟಿ, ದೇವಿ ಮುಕ್ರಿ, ಸ್ಥಳೀಯರಾದ ಮಹೇಶ, ಚಂದನ ನಾಯ್ಕ ಸೇರಿ 50ಕ್ಕೂ ಹೆಚ್ಚು ಜನ ಇದ್ದರು.

Leave a Reply

Your email address will not be published. Required fields are marked *