ಹೆಂಗಿದ್ದ ಹೆಂಗಾದ ಗೊತ್ತಾ?!

ಮುಂದೊಂದು ದಿನ ಹೀರೋ ಆಗ್ತೀನಿ ಎಂದು ಮನೆ ಬಿಟ್ಟು ಓಡಿ ಬಂದಿದ್ದ ಚಿಂದಿ ಆಯುವ ಬಾಲಕ ನಿಜಕ್ಕೂ ಈಗ ಹೀರೋನೆ. ಫೋರ್ಬ್ಸ್​ನ ಇಂಡಿಯಾಸ್ ಅಂಡರ್ 30 ಮತ್ತು ವೋಗ್​ನ ಇಂಡಿಯಾಸ್ ಅಂಡರ್ 40 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈತ ಬ್ರಿಟನ್​ನ ಪ್ರಿನ್ಸ್ ಎಡ್ವರ್ಡ್ ಜತೆೆ ಬಕಿಂಗ್​ಹ್ಯಾಮ್ ಅರಮನೆಯಲ್ಲಿ ಕೂತು ಊಟ ಮಾಡಲು ಆಮಂತ್ರಣ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾನೆ. ಅಷ್ಟೇ ಏಕೆ ವಿಶ್ವದ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆನಿಸಿಕೊಂಡಿರುವ ಮೆಸಾಚುಸೆಟ್ಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಫೋಟೋಗ್ರಫಿ ಫೆಲೋಷಿಪ್ ಪಡೆದುಕೊಂಡಿದ್ದಾನೆ.

|ಅಕ್ಷತಾ ಮುಂಡಾಜೆ

ಸಿನಿಮಾದಲ್ಲಿ ನಾಯಕನಾಗಲು ಬಂದವನ ಜೀವನವೇ ಒಂದು ಸಿನಿಮಾ ಕಥೆ ಇದ್ದಂತಿದೆ. ಆ ಹೀರೋನೇ ವಿಕ್ಕಿ ರಾಯ್. ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಜನಿಸಿದ ವಿಕ್ಕಿಯ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆ ವೃತ್ತಿಯಲ್ಲಿ ಟೈಲರ್ ದಿನಕ್ಕೆ 25 ರೂ. ಸಂಬಳ. 7 ಜನ ಮಕ್ಕಳು ತಂದೆ ತಾಯಿ ಸೇರಿ 9 ಜನರ ಜೀವನ ಇದರಲ್ಲೇ ನಡೆಯಬೇಕಿತ್ತು. ತೀರಾ ಕಷ್ಟವೆನಿಸಿದಾಗ ವಿಕ್ಕಿಯನ್ನು ಅಜ್ಜಿಯ ಮನೆಗೆ ಕಳುಹಿಸಿಕೊಟ್ಟಿದ್ದರು ಅಪ್ಪ ಅಮ್ಮ. ಅಲ್ಲಿ ವಿಪರೀತ ಎನಿಸುವಂತಹ ಶಿಸ್ತು. ಸಣ್ಣಪುಟ್ಟ ತಪ್ಪಿಗೂ ಚರ್ಮ ಕಿತ್ತು ಬರುವಂತ ಪೆಟ್ಟು, ಮಂಡಿ ನೋವು ಬರುವಂತ ಶಿಕ್ಷೆ. ಇವೆಲ್ಲ ಸಾಕು ಎನಿಸಿದಾಗಲೇ ವಿಕ್ಕಿ ಹೀರೋ ಆಗುವ ಕನಸು ಹೊತ್ತು ಮುಂಬೈ ರೈಲು ಹತ್ತಿದ್ದ. ಆದರೆ ಮಹಾನಗರಿಯ ಜೀವನದ ಅರಿವಾಗಿದ್ದೆ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದಾಗ. ಹಿಂದೆ ಹೋಗಲೂ ಆಗುತ್ತಿಲ್ಲ ಎಂದಾಗ ಬೇರೆ ದಾರಿಯಿಲ್ಲದೆ ವಿಕ್ಕಿ ಚಿಂದಿ ಆಯುವ ಹುಡುಗರೊಂದಿಗೆ ಸೇರಿಕೊಂಡಿದ್ದ. ಆರು ತಿಂಗಳು ಬೀದಿ ಬೀದಿ ಸುತ್ತಿ ಕಸದ ರಾಶಿಯಲ್ಲಿ ಹುಡುಕಾಡಿ ಚಿಂದಿ ಆಯುವ ಕಾಯಕ ಮಾಡಿದ್ದ. ಆದರೆ ಈ ವೃತ್ತಿಯಲ್ಲಿ ದಿನನಿತ್ಯ ಆಗುತ್ತಿದ್ದ ಗಲಾಟೆ ಪುಟ್ಟ ವಿಕ್ಕಿಯನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಅಲ್ಲಿಂದ ಹೊರಬಂದ ವಿಕ್ಕಿ ಹೋಟೆಲೊಂದರಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಬಿಟ್ಟ. ಹೀಗೆ ಜೀವನ ಸಾಗುತ್ತಿದ್ದಾಗಲೇ ವಿಕ್ಕಿ ಜೀವನಕ್ಕೆ ಬೆಳಕಾಗಿ ಬಂದವರು ಸಂಜಯ್ ಶ್ರೀವಾತ್ಸವ. ಅವರು ಸಲಾಂ ಬಾಲಕ್ ಟ್ರಸ್ಟ್ ಎನ್ನುವ ಎನ್​ಜಿಒಗೆ ವಿಕ್ಕಿಯನ್ನು ಸೇರಿಸಿದ್ದರು. ಸಂಜಯ್ ಕೂಡ ವಿಕ್ಕಿ ರೀತಿಯಲ್ಲೇ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದು ಎನ್​ಜಿಒ ಸಂಪರ್ಕಕ್ಕೆ ಬಂದವರು. ಎನ್​ಜಿಒದ ಆಶ್ರಯ ತಾಣದಲ್ಲಿ ವಿಕ್ಕಿ ಬದುಕು ಬದಲಾಗತೊಡಗಿತು. ವಿಕ್ಕಿ ಸರ್ಕಾರಿ ಶಾಲೆಯೊಂದರಲ್ಲಿ 6ನೇ ತರಗತಿಗೆ ಸೇರಿಕೊಂಡ. 10ನೇ ತರಗತಿಯನ್ನು ಹಾಗೋ ಹೀಗೋ ಮುಗಿಸಿದ ವಿಕ್ಕಿಗೆ ಫೋಟೋಗ್ರಫಿ ಸೆಳೆದಿತ್ತು.

2000ರಲ್ಲಿ ಫೋಟೋಗ್ರಫಿ ಕೋರ್ಸ್ ಸೇರಿಕೊಂಡರು. ಇದಾಗಿ ಕೆಲವೇ ವರ್ಷದಲ್ಲಿ ಇವರು ಟ್ರಸ್ಟ್​ನ ಆಶ್ರಯ ತಾಣವನ್ನೂ ತೊರೆಯಬೇಕಾಗಿ ಬಂತು. 18 ವರ್ಷ ತುಂಬಿದ ಮೇಲೆ ಅಲ್ಲಿರಬಾರದು ಎನ್ನುವುದು ಅಲ್ಲಿನ ನಿಯಮವಾಗಿದ್ದಿತು. ಆದರೆ ಟ್ರಸ್ಟ್ ದೆಹಲಿ ಮೂಲದ ಫೋಟೋಗ್ರಾಫರ್ ಅನಯ್ ಮನ್ ಜತೆಗೆ ಅಪ್ರೆಂಟಿಸ್​ಷಿಪ್ ಮಾಡಲು ವಿಕ್ಕಿಗೆ ಅವಕಾಶವನ್ನು ಮಾಡಿಕೊಟ್ಟಿತು.

ಜೀವನದ ದಾರಿ ಬದಲಾದ ಕ್ಷಣ: 2007ರಲ್ಲಿ ವಿಕ್ಕಿ ಮೊದಲ ಬಾರಿ ‘ಸ್ಟ್ರೀಟ್ ಡ್ರೀಮ್್ಸ’ ಎನ್ನುವ ಸೋಲೋ ಎಕ್ಸಿಬಿಷನ್ ಆಯೋಜಿಸಿದ್ದರು. ನವದೆಹಲಿಯ ಇಂಡಿಯ ಹ್ಯಾಬಿಟೇಟ್ ಸೆಂಟರ್​ನಲ್ಲಿ ಆಯೋಜಿಸಿದ್ದ ಈ ಎಕ್ಸಿಬಿಷನ್ ಮೂಲಕ ತಮ್ಮ ಜೀವನದ ಕಥೆಯನ್ನೇ ವಿಕ್ಕಿ ಜನರ ಮುಂದಿಟ್ಟಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದೊಡ್ಡ ದೊಡ್ಡ ಫೋಟೋಗ್ರಾಫರ್​ಗಳೂ ವಿಕ್ಕಿ ಕಾರ್ಯವನ್ನು ಮೆಚ್ಚಿದ್ದರು. ಇದಾಗಿ ಒಂದು ವರ್ಷದಲ್ಲಿ ಅಮೆರಿಕ ಮೂಲದ ಮೇಬಾಚ್ ಫೌಂಡೇಶನ್ ವಿಕ್ಕಿಯನ್ನು ಸಂರ್ಪಸಿತು. ನ್ಯೂಯಾರ್ಕ್​ನ ವರ್ಲ್ಡ್ ಟ್ರೇಡ್ ಸೆಂಟರ್​ನ ಪುನರ್ ನಿರ್ವಣದ ಫೋಟೋ ಡಾಕ್ಯುಮೆಂಟ್ ತೆಗೆಯುವ ಕಾರ್ಯವನ್ನು ವಿಕ್ಕಿ ಹೆಗಲಿಗೆ ಹೊರಿಸಿತು. ಇದರ ಜತೆಗೆ ನ್ಯೂಯಾರ್ಕ್​ನ ಇಂಟರ್​ನ್ಯಾಷನಲ್ ಸೆಂಟರ್ ಫಾರ್ ಫೋಟೋಗ್ರಫಿಯಲ್ಲಿ ಡಾಕ್ಯುಮೆಂಟರಿ ಫೋಟೋಗ್ರಫಿ ಬಗ್ಗೆ ಕೋರ್ಸ್ ಮಾಡುವುದಕ್ಕೂ ಅವಕಾಶ ನೀಡಿತು. ಇಲ್ಲಿಂದ ವಿಕ್ಕಿ ಹಿಂತಿರುಗಿ ನೋಡಲೇ ಇಲ್ಲ. ಬ್ರಿಟನ್, ಅಮೆರಿಕ, ಸಿಂಗಾಪುರ, ಜರ್ಮನಿ, ಶ್ರೀಲಂಕಾ, ರಷ್ಯಾ ಮತ್ತು ಬಹ್ರೇನ್ ಸೇರಿದಂತೆ ದೇಶ ವಿದೇಶಗಳಲ್ಲಿ ಹಲವು ಎಕ್ಸಿಬಿಷನ್​ಗಳು ನಡೆಸಿದರು. ವಿಶ್ವವಿಖ್ಯಾತ ಫೋಟೋಗ್ರಾಫರ್ ಎನಿಸಿಕೊಂಡರು.

ಬದುಕು ಕೊಟ್ಟ ಫೋಟೋ: ಒಂದೇ ಒಂದು ಫೋಟೋ ಸಾವಿರ ಪದಗಳನ್ನು ಹೇಳುತ್ತದಂತೆ. ಹೀಗೆಯೇ ವಿಕ್ಕಿಯ ಒಂದೇ ಒಂದು ಫೋಟೋ ಒಬ್ಬರ ಜೀವನವನ್ನೇ ಬದಲಿಸಿ ಅವರ ಕನಸು ನನಸು ಆಗುವಂತೆ ಮಾಡಿದೆ. ಸೇವ್ ದಿ ಚಿಲ್ಡ್›ನ್ ಎನ್ನುವ ಪ್ರಾಜೆಕ್ಟ್ ಗಾಗಿ ಕೆಲಸ ಮಾಡುತ್ತಿದ್ದ ವಿಕ್ಕಿ, ಜಾಮಾ ಮಸೀದಿ ಪಕ್ಕದಲ್ಲಿ ಕುಟುಂಬವೊಂದು ರಿಕ್ಷಾದಲ್ಲಿ ಜೀವನ ನಡೆಸುತ್ತಿರುವುದರ ಚಿತ್ರ ತೆಗೆದು ಫೇಸ್​ಬುಕ್​ಗೆ ಹಾಕಿದ್ದರು. ಇದರಿಂದ ರಾಜೇಶ್ವರಿ ಕಣ್ಣನ್ ಪ್ರಚೋದಿತರಾಗಿ ಅವರಿಗೆ ಸಹಾಯ ಮಾಡಲು ಮುಂದಾದರು. ರಾಜೇಶ್ವರಿ 40,000 ರೂ. ನೀಡಿದರೆ, ವಿಕ್ಕಿ ತಮ್ಮಕೈಯಿಂದಲೇ 10,000 ರೂ. ನೀಡಿ ರಾಜಸ್ಥಾನದಲ್ಲಿ ಸಣ್ಣ ಅಂಗಡಿಯೊಂದನ್ನು ಕೊಡಿಸಿದ್ದರು. ಅಲ್ಲಿಂದ ಅವರ ಜೀವನವೇ ಬದಲಾಗಿದೆ. ನೆಮ್ಮದಿಯ ಜೀವನ ನಡೆಸುವಂತಾಗಿದೆ.

ಗುರುವಿನಿಂದ ಬದುಕು

ಗುರುವೆಂದರೆ ನಯವಾಗಿ ಮಾತಾಡಿ ಕೊಂಡಿರಬೇಕು ಮಾಡಿದ ತಪು್ಪ ಗಳನ್ನೆಲ್ಲ ಮನ್ನಿಸಬೇಕು ಎಂದು ಎಲ್ಲ ವಿದ್ಯಾರ್ಥಿಗಳೂ ಬಯಸುತ್ತಾರೆ. ಆದರೆ ವಿಕ್ಕಿಗೆ ಸಿಕ್ಕ ಗುರು ಹಾಗಲ್ಲ, ತಪು್ಪ ಮಾಡಿದಾಗ ಬುದ್ಧಿ ಹೇಳಿ ತಿದ್ದಿದಾತ. ವಿಕ್ಕಿ ಮಾತಿನಲ್ಲೇ ಹೇಳುವುದಾದರೆ ‘ಅನಯ್ ನನ್ನಲ್ಲಿರುವ ಫೋಟೋಗ್ರಫಿಯ ಕೌಶಲವನ್ನು ತಿದ್ದಿ ತೀಡಿದ್ದು ಮಾತ್ರವಲ್ಲ ಜತೆಗೆ ನನ್ನನ್ನೋರ್ವ ವೃತ್ತಿಪರನಾಗಿ ಬೆಳೆಸಲು ನೆರವಾದರು’. ತಿಂಗಳಿಗೆ 3000 ಸಂಬಳ, ಒಂದು ಬೈಕು ಮತ್ತು ಒಂದು ಮೊಬೈಲು ಕೊಟ್ಟು ಕೆಲಸ ಆರಂಭಿಸಲು ತಿಳಿಸಿದ್ದರು. ಅನಯ್ಗೆ ದೇಶಾದ್ಯಂತ ಬೇಡಿಕೆ ಇದ್ದಿದ್ದರಿಂದ ವಿಕ್ಕಿಗೂ ದೇಶಾದ್ಯಂತ ಸಂಚರಿಸುವ ಅವಕಾಶ ಸಿಕ್ಕಿತ್ತು. ಆದರೆ ನಗರದಲ್ಲಿ ಅವರ ಖರ್ಚುವೆಚ್ಚಗಳನ್ನು ತೂಗಿಸಲು ಕೆಟರಿಂಗ್ ಮುಂತಾದ ಅರೆಕಾಲಿಕ ಕೆಲಸಗಳನ್ನೂ ಮಾಡಬೇಕಾಯಿತು. ನಂತರ ದುಬಾರಿ ಕ್ಯಾಮರಾ ಖರೀದಿಗೂ ಟ್ರಸ್ಟ್ ಸಾಲ ನೀಡಿ ಸಹಾಯ ಮಾಡಿತು.

ಮತ್ತೆ ಗೂಡು ಸೇರಿದ ವಿಕ್ಕಿ

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ವಿಕ್ಕಿ ಕಳೆದುಕೊಂಡಿದ್ದ ತಮ್ಮ ಮನೆಯವರನ್ನು ಹುಡುಕಿದ್ದಾರೆ. 2016ರ ತಾಯಿಯಂದಿರ ದಿನದಂದು 3 ಬೆಡ್​ರೂಂಗಳಿರುವ ತಮ್ಮದೆ ಸ್ವಂತ ಸೂರೊಂದನ್ನು ಕಟ್ಟಿಕೊಂಡು ಮನೆಯವರೊಂದಿಗೆ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು, ಲಕ್ಷಾಂತರ ರೂಪಾಯಿ ಸಂಪಾದಿಸಿ, ಪ್ರಖ್ಯಾತಿ ಪಡೆದುಕೊಂಡ ಮೇಲೂ ವಿಕ್ಕಿ ತಮ್ಮನ್ನು ಯಶಸ್ವಿ ಫೋಟೋಗ್ರಾಫರ್ ಅಂದುಕೊಳ್ಳುವುದೇ ಇಲ್ಲವಂತೆ. ಹಾಗಂದುಕೊಂಡ ದಿನ ಪ್ರಯಾಣ ನಿಂತುಬಿಡುತ್ತದೆ. ಹೀಗಾಗಿ ದಿನ ದಿನ ಹೊಸದನ್ನು ಕಲಿತು ತನ್ನ ಕೌಶಲವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇನೆ ಎನ್ನುತ್ತಾರೆ. ಇವರೇ ನಿಜವಾದ ಹೀರೋ ಅಲ್ಲವೇ?

One Reply to “ಹೆಂಗಿದ್ದ ಹೆಂಗಾದ ಗೊತ್ತಾ?!”

Leave a Reply

Your email address will not be published. Required fields are marked *