Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಹೃದಯದಲಿ ಇದೇನಿದು ನದಿಯೊಂದು ಓಡಿದೆ…

Sunday, 07.01.2018, 3:05 AM       No Comments

ಕನ್ನಡ ಸಿನಿಮಾದ ಇತಿಹಾಸವನ್ನೊಮ್ಮೆ ಕೆದಕಿದರೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿರುವ ಸಾವಿರಾರು ಹಾಡುಗಳು ಸಿಗುತ್ತವೆ. ಸುಂದರವಾದ ಶಬ್ದಗಳನ್ನು ಪೋಣಿಸಿದ ಸುಮಧುರ ಗೀತೆಗಳು ಕಿವಿದುಂಬುತ್ತವೆ. ಹೀಗಿರುವಾಗ ಗೀತರಚನೆಕಾರರನ್ನು ಕವಿಗಳೆಂದೇ ಪರಿಗಣಿಸಬಾರದೇಕೆ? ಅವರ ಪದ್ಯಗಳನ್ನು ಕಾವ್ಯ ಎಂದೆನ್ನಬಾರದೇಕೆ?

ಮೊನ್ನೆ ಕಾರಿನ ರೇಡಿಯೋ ತಿರುಗಿಸಿದ ಕೂಡಲೇ ತಟ್ಟನೆ ಹರಿದು ಬಂತು ಈ ಹಾಡು-

ಇದೇ ನನ್ನ ಉತ್ತರ/ಇದೇ ನನ್ನ ಉತ್ತರ

ನಿನ್ನ ಒಗಟಿಗೆ ಉತ್ತರ/ಕೊಡುವೆ ಬಾರೆ ಹತ್ತಿರ

ಪುಟ್ಟಣ್ಣ ಕಣಗಾಲ್ ಮೊಟ್ಟ ಮೊದಲು ಕನ್ನಡದಲ್ಲಿ ನಿರ್ದೇಶನ ಮಾಡಿದ ‘ಬೆಳ್ಳಿ ಮೋಡ’ ಸಿನಿಮಾದ ಒಂದು ಹಾಡಿನ ಪಲ್ಲವಿ ಇದು. ಈ ಸಿನಿಮಾ ಬಿಡುಗಡೆಯಾಗಿಯೇ ಐವತ್ತು ವರ್ಷ ಆಗಿದೆ. ನಾನು ‘ಬೆಳ್ಳಿಮೋಡ’ ನೋಡಿ ಏನಿಲ್ಲವೆಂದರೂ 35 ವರ್ಷ ಆಗಿರಬಹುದು. ಸಿನಿಮಾದ ಕಥೆ ನೆನಪಿನಲ್ಲಿಲ್ಲ. ಒಂದು ಕಾಫಿ ತೋಟದಲ್ಲಿ ನಡೆಯುವ ಒಂದು ವಿಲ ಪ್ರೇಮಕಥೆ ಅನ್ನುವಷ್ಟು ಮಾತ್ರ ನೆನಪಿನಲ್ಲಿದೆ. ಆದರೆ ಆ ಸಿನಿಮಾದ ಹಾಡುಗಳನ್ನು ಮಾತ್ರ ನಾನೇ ಪ್ರಯತ್ನಿಸಿದರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಬೇಂದ್ರೆಯವರ ಶ್ರೇಷ್ಠ ಪದ್ಯಗಳಲ್ಲೊಂದಾದ ‘ಬೆಳಗು’ ಪದ್ಯವನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಪುಟ್ಟಣ್ಣ. ಆ ಪದ್ಯ ಬಯಸುವ ಮಾಧುರ್ಯವನ್ನೆಲ್ಲಾ ಬಸಿದು ರಾಗ ಸಂಯೋಜಿಸಿದ್ದಾರೆ ವಿಜಯಭಾಸ್ಕರ್. ಎಸ್. ಜಾನಕಿಯವರ ದನಿಯಲ್ಲಿ ಅದೊಂದು ಅಲೌಕಿಕ ಅನ್ನಿಸುವಂತ ಸವಿ ಸೋರಿ ಸೋರಿ ಬರುತ್ತದೆ. ಕಪ್ಪುಬಿಳುಪಿನ ಛಾಯಾಗ್ರಹಣದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲೇ ಅನನ್ಯ ಅನಿಸುವಷ್ಟು ಸೊಗಸಾಗಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ ಛಾಯಾಗ್ರಾಹಕ ಆರ್.ಎನ್. ಕೃಷ್ಣಪ್ರಸಾದ್. ನಟಿ ಕಲ್ಪನಾ ಕೂಡಾ ಪಾತ್ರವೇ ತಾವಾಗಿ ಅಭಿನಯಿಸಿದ್ದಾರೆ. ಅಂತೂ ಬೇಂದ್ರೆಯವರ ‘ಬೆಳಗು’ ಪ್ರೇಕ್ಷಕನಿಗೊಂದು ಅನುಭವವಾಗುವಂತೆ ಮಾಡಿದ್ದಾರೆ. ನೀವು ನೋಡಿಲ್ಲವಾದರೆ ಒಮ್ಮೆ ನೋಡಿಬಿಡಿ- ಈಗೇನು? ನೋಡುವುದಕ್ಕೆ ಅವಕಾಶ ಅಂಗೈಯಲ್ಲೇ ಇರುತ್ತದೆ.

ಇದಲ್ಲದೆ ‘ಬೆಳ್ಳಿಮೋಡ’ ಸಿನಿಮಾದಲ್ಲಿ ಇನ್ನೂ ಮೂರು ಹಾಡುಗಳಿವೆ-‘ ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಆಶಾಕಿರಣ’ ‘ಮುದ್ದಿನ ಗಿಣಿಯೇ ಬಾರೋ, ಮುತ್ತನು ತರುವೆ ಬಾರೋ’ ಮತ್ತು ಮೇಲೆ ಹೇಳಿದ -‘ಇದೇ ನನ್ನ ಉತ್ತರ’. ಸಿನಿಮಾದಲ್ಲಿ ಹಾಡಿನ ಸನ್ನಿವೇಶ ನನಗೆ ನೆನಪಾಗುತ್ತಿಲ್ಲ. ಹೀಗೆಂದುಕೊಳ್ಳಿ, ಚಿತ್ರದ ನಾಯಕಿ ನಾಯಕನನ್ನು ‘ನಾನು ಒಂದು ಒಗಟು ಹೇಳ್ತೀನಿ ಉತ್ತರ ಕೊಡ್ತೀರಾ? ’ ಅಂದಿರಬೇಕು. ಆಗ ನಾಯಕ ಈ ಹಾಡಿನಲ್ಲಿ ಉತ್ತರ ಕೊಡುತ್ತಿರಬೇಕು. (ಹೀಗಲ್ಲದೆಯೂ ಇರಬಹುದು. ಆದರೂ ಹೀಗೇ ಅಂದುಕೊಳ್ಳಿ) ಪಿ.ಬಿ. ಶ್ರೀನಿವಾಸ್ ದನಿ ಅಂದರೆ ಕೇಳಬೇಕಾ?- ಜೇನುತುಪ್ಪದಲ್ಲಿ ತೋಯ್ದ ಹಣ್ಣಿನಂತೆ! ಎಷ್ಟೋ ಬಾರಿ ಈ ಹಾಡನ್ನು ಕೇಳಿದ್ದೆನಾದರೂ ಆವತ್ತೊಂದು ವಿಶೇಷ ಮಾಧುರ್ಯ ಮನಸ್ಸು ತುಂಬಿಕೊಂಡಿತು. ಕವಿ ಆರ್.ಎನ್. ಜಯಗೋಪಾಲ್ ಎಷ್ಟು ಸೊಗಸಾಗಿ, ರಮ್ಯವಾಗಿ ಹಾಡು ಕಟ್ಟಿದ್ದಾರೆ ಅನ್ನಿಸಿತು. ನಮ್ಮ ನವೋದಯ ಕವಿಗಳದ್ದೊಂದು ಭಾವಗೀತೆ ಕೇಳಿದಂತೆನಿಸಿತು. ನಾಯಕ ನಾಯಕಿಯ ಒಗಟಿಗೆ ಕೊಡುವ ಉತ್ತರ ಎಂಥ ಉತ್ತರವಂತೆ ಗೊತ್ತಾ? ಹಾಡು ಕೇಳಿ-

ಬಳಸಿ ನಿಂತ ಬಳ್ಳಿಗೆ ಮರವು ಕೊಡುವ ಉತ್ತರ/ಅರಳಿ ನಿಂತ ಹೂವಿಗೆ ದುಂಬಿ ಕೊಡುವ ಉತ್ತರ/ಕುಲುಕಿ ನಡೆವ ಹೆಜ್ಜೆಗೆ ಗೆಜ್ಜೆ ಕೊಡುವ ಉತ್ತರ/ತನ್ನ ಮಿಡಿವ ಬೆರಳಿಗೆ ವೀಣೆ ಕೊಡುವ ಉತ್ತರ/ಹುಡುಕಿ ಬಂದ ಜೀವನದಿಗೆ ಕಡಲು ಕೊಡುವ ಉತ್ತರ/ಮನವ ಸೆಳೆದ ನಲ್ಲೆಗೆ ಇನಿಯ ಕೊಡುವ ಉತ್ತರ/

ಬಹುಶಃ ಕವಿತೆಗೆ ವ್ಯಾಖ್ಯಾನ ಬೇಕಿಲ್ಲ. ಇಲ್ಲಿ ಬೇಕೆಂದೇ ಆರ್.ಎನ್. ಜಯಗೋಪಾಲ್ ಅವರನ್ನು ಕವಿ ಎಂದೂ, ಈ ಹಾಡನ್ನು ‘ಕವಿತೆ’ ಎಂದೂ ಕರೆದಿದ್ದೇನೆ. ಯಾಕೆಂದರೆ ನನಗೆಷ್ಟೋ ಬಾರಿ ಅನ್ನಿಸಿದ್ದಿದೆ, ಎಷ್ಟೋ ಸಿನಿಮಾ ಹಾಡುಗಳನ್ನು ಕವಿತೆಗಳೆಂದು ಕರೆಯದೆ, ಗೀತರಚನೆಕಾರರನ್ನು ಕವಿಯೆಂದು ಕರೆಯದೆ ನಮ್ಮ ಕಾವ್ಯದ ಓದಿಗೆ ನಾವೇ ಅನ್ಯಾಯ ಮಾಡಿಕೊಂಡಿದ್ದೇವೆ. ಒಂದು ವಿಶೇಷವಾದ ಹೊಳಹಿಲ್ಲದೆ, ಚಿಂತನೆಯಿಲ್ಲದೆ, ಭಾಷೆಯ ನಡಿಗೆಗೊಂದು ಅರ್ಥವಿಲ್ಲದೆ, ಲಯವಿಲ್ಲದೆ ‘ಕವನ’ಗಳನ್ನು ಬರೆದು ಅದಕ್ಕೊಂದು ಖ್ಯಾತನಾಮರ ದಾಕ್ಷಿಣ್ಯದ ಮುನ್ನುಡಿ ಸೇರಿಸಿಕೊಂಡು ‘ಕವನ ಸಂಕಲನ’ ಪ್ರಕಟಿಸಿ ‘ಕವಿ’ಯೆಂದು ಕರೆಸಿಕೊಂಡು ವಿವಿಧ ಕವಿಗೋಷ್ಠಿಗಳಿಗೆ ಹಕ್ಕುದಾರ ಆಹ್ವಾನಿತರಾಗಿ ಬಂದು ಕೊಟ್ಟದ್ದಕ್ಕಿಂತ ಹೆಚ್ಚು ಸಮಯವನ್ನು ಒತ್ತುವರಿ ಮಾಡಿಕೊಂಡು ಪದ್ಯ ಓದಿ ಪ್ರಾಣ ಹಿಂಡುವ ಹಲಮಂದಿ ಕವಿಗಳನ್ನು ನಾನೂ ನೋಡಿದ್ದೇನೆ. ನೀವೂ ನೋಡಿದ್ದೀರಿ. ಅಂಥಾದ್ದರಲ್ಲಿ ತಾವು ಸಿನಿಮಾಕ್ಕೆ ಬರೆಯುತ್ತಿರುವುದೇ ಮೈಲಿಗೆ ಅಂದುಕೊಂಡು ತಮ್ಮನ್ನು ತಾವು ಕವಿಯೆಂದು ಕರೆದುಕೊಳ್ಳುವುದಕ್ಕೂ ಸಂಕೋಚಪಟ್ಟುಕೊಳ್ಳುವ ಚಿತ್ರಸಾಹಿತಿಗಳನ್ನೂ ನೋಡಿದ್ದೇವೆ. ಅದನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳುತ್ತಿದ್ದ ಹಾಗೆಯೇ ನಮ್ಮ ಚಿತ್ರ ಸಾಹಿತಿಗಳು ಎಂತಹ ಸುಂದರ ಪದ್ಯಗಳನ್ನು ಬರೆದಿದ್ದಾರಲ್ಲಾ ಅನ್ನುವುದಕ್ಕೆ ಎಷ್ಟೋ ಗೀತೆಗಳು ಸಾಲು ಸಾಲಾಗಿ ಬಂದು ಮನಸ್ಸಿನ ತುಂಬಾ ಅಲೆದಾಡಲು ತೊಡಗಿದವು. ಪದ್ಯಗಳು ನೂರು, ಸಾವಿರಗಳ ಲೆಕ್ಕದಲ್ಲಿ ನೆನಪಾಗುವುದರಿಂದ ಈ ಅಂಕಣದ ಮಿತಿಗೆ ಬರೀ ಗಂಡು ಹೆಣ್ಣಿನ ಶೃಂಗಾರ ಪದ್ಯಗಳನ್ನಷ್ಟೇ ಜ್ಞಾಪಿಸಿಕೊಳ್ಳೋಣ. ಉಳಿದ ಬಗೆ ಪದ್ಯಗಳನ್ನು ಇನ್ನಾವಾಗಲಾದರೂ ಜ್ಞಾಪಿಸಿಕೊಂಡರಾಯಿತು.

ಇದೇ ಆರ್.ಎನ್.ಜಯಗೋಪಾಲ್ ‘ಬೇಡಿ ಬಂದವಳು’ ಅನ್ನುವುದೊಂದು ಅಪ್ರಸಿದ್ಧ ಸಿನಿಮಾಕ್ಕೆ ಬರೆದ ಈ ಚಂದದ ಹಾಡು ನೋಡಿ. ಮದುವೆಯ ಸಂದರ್ಭದಲ್ಲಿ ಹೆಣ್ಣು-ಗಂಡು ಪರಸ್ಪರ ಬೆರಳಿಗೆ ಉಂಗುರ ತೊಡಿಸುತ್ತಾರಷ್ಟೆ. ಆದರೆ ಒಲಿದ ಹೃದಯಗಳಿಗೆ ತಮ್ಮ ಸುತ್ತಮುತ್ತಲೂ ಯಾವ್ಯಾವ ಎಷ್ಟೊಂದು ಬಗೆಯ ಉಂಗುರಗಳು ಕಾಣುತ್ತವೆ ನೋಡಿ. ‘ನೀರಿನಲ್ಲಿ ಅಲೆಯ ಉಂಗುರಾ’ ಎಂದು ಆರಂಭವಾಗುವ ಈ ಹಾಡು ಯಾವ್ಯಾವ ಬಗೆ ಉಂಗುರಗಳ ಪಟ್ಟಿ ಮಾಡುತ್ತದೆ ನೋಡಿ, ಕ್ಷಮಿಸಿ ‘ಪಟ್ಟಿ’ ಅಂದುಬಿಟ್ಟೆನಾ? ಇದು ‘ಪಟ್ಟಿ’ಯಲ್ಲ ಕಾವ್ಯ.

ನೀರಿನಲ್ಲಿ ಅಲೆಯ ಉಂಗುರ/ಭೂಮಿ ಮೇಲೆ ಪ್ರೇಮದುಂಗುರ/ಮನಸೆಳೆದ ನಲ್ಲ ಕೊಟ್ಟನಲ್ಲ/ಕೆನ್ನೆ ಮೇಲೆ ಪ್ರೇಮದುಂಗುರ/

ಇನ್ನು ಯಾವ್ಯಾವ ಉಂಗುರಗಳು? – ಕಾಲಿಗೆ ಅಂದಿಗೆಯ ಉಂಗುರ, ತನುವಿಗೆ ತಬ್ಬಿಕೊಂಡ ತೋಳುಗಳ ಉಂಗುರ, ಹೆಣ್ಣು ನಾಚಿಕೊಂಡು ಹೆಬ್ಬೆರಳಿಂದ ಗುಂಡಗೆ ಗೀರಿ ಮಣ್ಣಲ್ಲಿ ಮೂಡಿಸಿದ ಉಂಗುರ, ಪ್ರೇಮದಾಯಾಸದಿಂದ ಆ ಹುಡುಗಿ, ಅಥವಾ ಹುಡುಗನ ಹಣೆಯ ಮೇಲೆ ಮೂಡುವ ಬೆವರಿನ ಉಂಗುರ! ಬೆಳ್ಳಿ ಬಂಗಾರದಲ್ಲಿ ಮಾತ್ರ ಉಂಗುರಗಳನ್ನು ಕಾಣಬಲ್ಲವನು ಸಾಮಾನ್ಯ ಲೌಕಿಕ. ಮೇಲೆ ಹೇಳಿದ ಬಗೆಬಗೆಯ ಉಂಗುರಗಳನ್ನು ಕಾಣುವವನು ಕವಿ.

ಯಾಕೋ ಮತ್ತೆ ಜಯಗೋಪಾಲ್ ಅವರೇ ನೆನಪಾಗುತ್ತಿದ್ದಾರೆ. ‘ಭಾಗ್ಯಜ್ಯೋತಿ’ ಸಿನಿಮಾದ ಹಾಡು ಇದು. ಹುಡುಗಿಯ ಹಣೆಯ ಮೇಲೆ ಬಿಸಿಲಿಗೋ ಬೆವರಿಗೋ ಕುಂಕುಮ ಕರಗಿ ಒಂದಿಷ್ಟು ಕೆಳಗೆ ಹರಿದಿದೆ. ಹೆಣ್ಣುಮಕ್ಕಳು ಹಣೆಗೆ ಪುಡಿಕುಂಕುಮ ಹಚ್ಚಿಕೊಳ್ಳುತ್ತಿದ್ದ ಕಾಲದಲ್ಲಿ ಹಾಗೆ ಕರಗಿ ಹರಿಯುತ್ತಿದ್ದ ಕುಂಕುಮವನ್ನು ನಾವು ನೋಡಿದ್ದೇವಲ್ಲ. ಇಲ್ಲಿ ಕವಿ ಹೀಗೆ ಕಲ್ಪಿಸಿಕೊಂಡಿರುವುದೇ ಒಂದು ಚೆಂದ. ಕವಿಗೆ ಆ ಹಣೆಯಲ್ಲಿ ಕರಗಿದ ಕುಂಕುಮ ಏನೇನೋ ಕತೆಯನ್ನು ಹೇಳುತ್ತದೆಯಂತೆ. ಎಂಥ ಚೆಂದವಾಗಿ ಆರಂಭವಾಗುತ್ತದೆ ನೋಡಿ ಈ ಹಾಡು-

ಕುಂಕುಮ ಹಣೆಯಲಿ ಕರಗಿದೆ/ಏನೇನೋ ಕತೆಯಾ ಹೇಳುತಿದೆ

ಈ ಪದ್ಯದ ಎರಡನೇ ಚರಣ ಸಹಜವಾದ ಪ್ರಾಸಾನುಪ್ರಾಸ ಅಂತ್ಯಪ್ರಾಸಗಳನ್ನು ಧರಿಸಿಕೊಂಡು ಲಾಸ್ಯವಾಡುತ್ತದೆ-

ಕುರುಳಿನ ಸುರುಳಿ ಬೀಸಿದೆ ಗಾಳ/ತಲುಪಿದೆ ನನ್ನ ಹೃದಯದ ಆಳ/ಮೈಕೈ ಸೋಕಿ ನಡೆಸಿದೆ ಮೇಳ/ಎದೆಯಲಿ ಏನೋ ತಪ್ಪಿದೆ ತಾಳ/

ಪ್ರತೀ ಸಿನಿಮಾದಲ್ಲೂ ಪ್ರೀತಿ ಪ್ರೇಮವನ್ನು ವ್ಯಕ್ತಪಡಿಸುವ ಒಂದೆರಡು ಮೂರು ಹಾಡುಗಳಿದ್ದೇ ಇರುತ್ತವೆ. ನನಗೆ ಆಶ್ಚರ್ಯವಾಗುತ್ತದೆ ಅದೇ ಹುಡುಗ-ಹುಡುಗಿ, ಪ್ರೇಮ-ಪ್ರೀತಿ ಅಂತ ಅದೆಷ್ಟು ಹಾಡುಗಳನ್ನು ಬರೆಯಬಹುದು? ಅದೇ ಸಿನಿಮಾ ಕವಿತ್ವದ ವಿಶೇಷ. ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಇರುವ ಕೆಲವೇ ಕವಿಗಳು- ಹತ್ತೋ ಹದಿನೈದೊ ಜನ ಅನ್ನಿ, ಈ ಸುಮಾರು ಎಪ್ಪತ್ತು ವರ್ಷಗಳಲ್ಲಿ ಸಾವಿರಾರು ಶೃಂಗಾರ ಹಾಡುಗಳನ್ನು ಸೃಷ್ಟಿ ಮಾಡಿದ್ದಾರೆ. ‘ಇದೇ ಮಹಾಸುದಿನಾ, ಇದೇ ಮಹಾಸುದಿನ’, ‘ಪ್ರಿಯ ಮಧುವನದಲಿ ಓಲಾಡುವ ಬಾ’ ಎಂಬ ಬಗೆ ಹಾಡುಗಳಿಂದ ಆರಂಭವಾಗಿ ‘ಅತಿಮಧುರ ಅನುರಾಗ, ಜೀವನ ಸಂಧ್ಯಾರಾಗ’, ‘ಮೆಲ್ಲುಸಿರೇ ಸವಿಗಾನ, ಎದೆ ಝಲ್ಲೆನೆ ಹೂವಿನ ಬಾಣ’, ‘ಸೊಂಪಾದ ಸಂಜೆ ವೇಳೆ, ತಂಗಾಳಿ ಬೀಸೋ ವೇಳೆ’ ಮುಂತಾದ ಬಗೆ ಹಾಡುಗಳಲ್ಲಿ ಮುಂದುವರಿದು ‘ನೀ ತಂದ ಕಾಣಿಕೆ ನಗೆ ಹೂವ ಮಾಲಿಕೆ’, ‘ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು’, ‘ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ’, ‘ಗಂಗಿ ನಿನ್ ಮ್ಯಾಲ್ ನನ್ಗೆ ಮನಸೈತೆ, ಕಣ್ತುಂಬ ನಿನ್ನ ಗೊಂಬೆ ತುಂಬೈತೆ’, ‘ಬೆಟ್ಟದ ಮ್ಯಾಲಿಂದ ಬೋರಮ್ಮ ಬಂದವ್ಳೆ ತಾನೀ ತಂದಾನ, ಪುಟ್ಟಾ ದೊರೆ ಮ್ಯಾಲೆ ಕಣ್ಣನ್ನೇ ಮಡಗವ್ಳೆ ತಾನಿ ತಂದಾನ’, ‘ಸಾಗರಕೇ ಚಂದಿರ ತಂದ ಪ್ರಥಮ ಚುಂಬನ, ಕಟ್ಟಿದೇ ನೀನೀ ಮನೆಗೆ ಹಸಿರು ತೋರಣಾ, ನೀಡಿದೆ ನೀ ಅನುರಾಗದಾ ಸಿಹಿ ಹೂರಣಾ’, ‘ರಾಜಾ ಮುದ್ದು ರಾಜಾ ನೂಕುವಂಥ ಕೋಪ ನನ್ನಲ್ಲೇಕೆ?’, ‘ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು, ಓ ರಾಜಾ!’, ‘ನಿನದೇ ನೆನಪು ದಿನವೂ ಮನದಲ್ಲಿ, ನೋಡುವಾ ಆಸೆಯೂ ತುಂಬಿದೆ ನನ್ನಲೀ ನನ್ನಲೀ’, ‘ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ’, ‘ಪ್ರೀತಿನೇ ಆ ದ್ಯಾವ್ರ ತಂದ ಆಸ್ತಿ ನಮ್ಮ ಬಾಳ್ವೆಗೆ’, ‘ಏನೇನೋ ಆಸೆ ನೀ ತಂದ ಭಾಷೆ’,‘ ಬಿಡಲಾರೆ ಎಂದೂ ನಿನ್ನ , ನೀನಾದೆ ನನ್ನ ಪ್ರಾಣ’, ‘ಎಂದೆಂದೂ ನಿನ್ನನು ಮರೆತು ನಾನಿರಲಾರೆ’, ‘ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ’, ‘ನಾನು ನೀನು ಒಂದಾದ ಮೇಲೆ ಇನ್ನೇಕೆ ನೀ ದೂರ ಓಡುವೆ’, ‘ಬಯಸದೆ ಬಳಿ ಬಂದೆ ಬಯಕೆಯ ಸಿಹಿತಂದೆ’, ‘ಆಕಾಶದಿಂದ ಧರೆಗಿಳಿದ ರಂಭೆ, ಇವಳೇ ಇವಳೇ ಚಂದನದ ಗೊಂಬೆ’, ‘ಬಾನಲ್ಲೂ ನೀನೆ ಭುವಿಯಲ್ಲೂ ನೀನೆ’,‘ಎಲ್ಲಿರುವೇ ಮನವ ಕಾಡುವ ರೂಪಸಿಯೇ’, ‘ಮಲೆನಾಡ ಹೆಣ್ಣ ಮೈಬಣ್ಣ ಬಲುಚೆನ್ನ, ನಡುಸಣ್ಣ, ಮನಸೋತೆನೇ ಚಿನ್ನ’, ‘ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು ನಿನ್ನ ಕೈಲಾಡೋ ಬೊಂಬೆ ನಾನಯ್ಯ’, ‘ಹೃದಯದಲಿ ಇದೇನಿದು ನದಿಯೊಂದು ಓಡಿದೆ’, ‘ನೀ ಬಂದೆ ಮನದೆ ನಿಂದೆ’, ‘ಅಲ್ಲೆ ನಿಲ್ಲು ನಿಲ್ಲಯ್ಯ ಓ ಚೆನ್ನಿಗರಾಯ’, ‘ಬಣ್ಣಾ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ’ ಮುಂತಾದ ಬಗೆ ಬಗೆಯ ಹಾಡುಗಳನ್ನು ಬಳಸಿಕೊಂಡು ‘ಈ ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು’, ‘ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೆ ಏಕೆ ನಗುವೆ’, ‘ಇವ ಯಾವ ಊರ ಗಂಡು ಕಾಣವ್ವೋ’,‘ಇವಳ್ಯಾರ ಮಗಳೋ ಹಿಂಗವಳಲ್ಲಾ’, ‘ಮಣಿ ಮಣಿ ಮಣಿಗೊಂದು ದಾರ’, ‘ಬಿದ್ದೆ ಬಿದ್ದೆ ಬಾತ್‌ರೂಮಲ್ಲಿ ಲವ್ವಲ್ಲಿ ಬಿದ್ದೆ, ಬಾಯೆಲ್ಲಾ ಒದ್ದೆ, ಮೈಯೆಲ್ಲಾ ಮುದ್ದೆ, ಇನ್ನೆಲ್ಲಿ ನಿದ್ದೆ ಬೇಬಿ’, ‘ಒಂದಾನೊಂದು ಕಾಲದಲ್ಲಿ ಆರಂಭ’, ಇಂಥ ಪ್ರಯೋಗಗಳನ್ನೂ ದಾಟಿಕೊಂಡು ಆಮೇಲೆ ಜಯಂತ ಕಾಯ್ಕಿಣಿಯಂಥವರ ಪ್ರವೇಶದಿಂದ ‘ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು’, ‘ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ, ಇಲ್ಲೇ ಒಲವಾಗಿದೆ ಎಂದು ಕನಸೊಂದು ಬೀಳುತಿದೆ’, ‘ಕನಸಲಿ ನಡೆಸು ಬಿಸಿಲಾದರೆ, ಒಲವನೆ ಬಡಿಸು ಹಸಿವಾದರೆ’ ಇಂಥಾ ಹಾಡುಗಳನ್ನೂ ಕಂಡು ಯೋಗರಾಜ ಭಟ್ಟರು ಸೃಷ್ಟಿಸಿದ ಹೊಸಭಾಷೆಯಿಂದ ‘ಹಳೆ ಪಾತ್ರೆ, ಹಳೆ ಕಬ್ಬುಣ, ಹಳೆ ಪೇಪರ್ ಥರಾ ಹೋಯಿ’, ‘ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ’,‘ಪುಣ್ಯಾತ್‌ಗಿತ್ತಿ ನಿನ್ಗೆ ಎಷ್ಟು ಬಾಯ್‌ರ್ೆಂಡ್ಸು ಅವ್ರೆ? ಹೇಳ್ಬಾರ್ದ?’, ‘ಓಪನ್ ಹೇರು ಬಿಟ್ಕೊಂಡು, ಕೂದಲು ಹಾರಾಡಿಸ್ಕೊಂಡು ಏರಿಯಾದಲ್ಲಿ ಓಡಾಡಬೇಡ್ವೆ’ ಇಂಥಾ ಹಾಡುಗಳೂ ಬಂದು ಮಡಿವಂತರ ಕೈಯಲ್ಲಿ ಬಯ್ಸಿಕೊಂಡು ಬಯ್ಸಿಕೊಂಡೇ ಜನಪ್ರಿಯವಾದವು.

ಬರೀ ಹಾಡುಗಳ ಪಟ್ಟಿಯಿಂದಲೇ ಲೇಖನ ತುಂಬಿಹೋಗಿದೆ ಅನ್ನಿಸುತ್ತಿರಬೇಕಲ್ವಾ? ಹೌದು ಬೇಕೆಂದೇ ಬರೆದೆ. ನಿಮಗೆ ಈ ಬಗೆ ಹಾಡುಗಳನ್ನು ಕೇಳುವ ಅಭ್ಯಾಸವಿದ್ದಲ್ಲಿ ನೆನಪಿಗೆ ತಂದುಕೊಂಡು ಗುನುಗಿ ನೋಡಿ. ನಮ್ಮ ಚಿತ್ರಗೀತೆಕಾರರ ಶಬ್ದಸಂಪತ್ತು, ಲಯಬದ್ಧ ನಡಿಗೆ, ಭಾಷಾ ಜ್ಞಾನ, ಅನುಭವ ಸಾಮಗ್ರಿ, ಕಾವ್ಯದ ಗೆಗಿನ ತಿಳಿವಳಿಕೆ ನಿಮಗೂ ಅರಿವಾಗುತ್ತದೆ. ಹತ್ತತ್ತಿರ ಈ ಎಪ್ಪತ್ತು ವರ್ಷಗಳ ಕನ್ನಡ ಸಿನಿಮಾ ಇತಿಹಾಸದಲ್ಲಿ ಪ್ರತೀ ಹತ್ತು ವರ್ಷಗಳಿಗೊಮ್ಮೆ ನಮ್ಮ ಕವಿಗಳ ಶಬ್ದ ಸಂಪತ್ತು, ಕವಿತೆ ಕಟ್ಟುವ ಕ್ರಮ ಬದಲಾಗಿರುವುದನ್ನು ಕಾಣುತ್ತೀರಿ. ಕಡೆಗೊಂದು ಸುಂದರ ಶೃಂಗಾರ ಕವಿತೆಯ ಬಗ್ಗೆ ಹೇಳಿ ಮುಗಿಸುತ್ತೇನೆ. ಇದು ‘ಬಭ್ರುವಾಹನ’ ಸಿನಿಮಾಕ್ಕಾಗಿ ಹುಣಸೂರು ಕೃಷ್ಣಮೂರ್ತಿಯವರು ಬರೆದಿರುವ ಹಾಡು. ಸುಭದ್ರೆಯನ್ನು ಅಪಹರಿಸಲಿಕ್ಕಾಗಿ ಕಪಟ ಸನ್ಯಾಸಿಯಾಗಿ ಬಂದಿರುವ ಅರ್ಜುನ ಸುಭದ್ರೆಯನ್ನು ಎದುರಿಗೆ ಕೂರಿಸಿಕೊಂಡು ಶಿವನನ್ನು ಪೂಜಿಸುತ್ತಾನೆ. ಆಗ ಹಾಡುವ ಪದ್ಯ‘ ಆರಾಧಿಸುವೆ ಮದನಾರಿ’ ಎಂಬ ಹಾಡು. ಈ ಹಾಡಿನ ವಿಶೇಷವೆಂದರೆ ಇದೊಂದು ಶ್ಲೇಷಾರ್ಥದ ಪದ್ಯ. ಶಿವನಿಗೆ ಅನ್ವಯಿಸಿದರೆ ಇದೊಂದು ಭಕ್ತಿಗೀತೆ. ಸುಭದ್ರೆಗೆ ಅನ್ವಯಿಸಿದರೆ ಶೃಂಗಾರ ಕವಿತೆ. ಮದನಾರಿ ಎನ್ನುವುದನ್ನು ಮದನ+ಅರಿ ಅಂದರೆ ಮನ್ಮಥ ವೈರಿ, ಶಿವ ಎಂದೂ ಅರ್ಥೈಸಬಹುದು. ಹಾಗೇ ‘ಮದಿಸಿದ ನಾರಿ’ ಎಂದೂ ಅರ್ಥೈಸಬಹುದು. ಇಲ್ಲಿ ಆರಾಧನೆ ಭಕ್ತಿಯ ಆರಾಧನೆಯಾಗಬಹುದು. ಇಲ್ಲಿ ‘ಮೈದೋರಿ ಮುಂದೆ ಸಹಕರಿಸಿ’ ಎಂಬ ಸಾಲು ಬರುತ್ತದೆ. ಮೈದೋರು ಎಂದರೆ ‘ಪ್ರತ್ಯಕ್ಷನಾಗು’ ಎಂಬರ್ಥವೂ ಇದೆ(ಅದು ಶಿವನಿಗೆ). ಮೈದೋರು ಅಂದರೆ ಮೈಯನ್ನು ತೋರಿಸು (ಅದು ಸುಭದ್ರೆಗೆ) ಎಂಬ ರಸಿಕ ಬಯಕೆಯ ಅರ್ಥವೂ ಇದೆ. ಹಾಗೇ ‘ಆ ಮಾರನುರವಗೆ ಪರಿಹರಿಸು, ಪ್ರೇಮಾಮೃತವನು ನೀನುಣಿಸು, ತನ್ಮಯಗೊಳಿಸು ಮೈಮರೆಸು’ ಈ ಎಲ್ಲಾ ಸಾಲುಗಳನ್ನೂ ಶಿವನಿಗೂ, ಸುಭದ್ರೆಗೂ ಅನ್ವಯಿಸಿ ಅರ್ಥೈಸಬಹುದು.

ಇದನ್ನೆಲ್ಲಾ ಇಲ್ಲಿ ಹೀಗೆ ಬರೆದುಕೊಂಡಿದ್ದರ ಉದ್ದೇಶವಿಷ್ಟೆ- ನಮ್ಮ ಚಿತ್ರರಂಗದಲ್ಲಿ ಕೆಲಸ ಮಾಡಿದ ಕುರಾಸೀ, ಚಿ.ಸದಾಶಿವಯ್ಯ, ಕಣಗಾಲ್ ಪ್ರಭಾಕರ ಶಾಸಿ, ಜಿ.ವಿ.ಅಯ್ಯರ್, ವಿಜಯ ನಾರಸಿಂಹ, ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್, ಹಂಸಲೇಖ, ವಿ. ಮನೋಹರ್, ನಾಗೇಂದ್ರ ಪ್ರಸಾದ್, ಕವಿರಾಜ್, ಕಲ್ಯಾಣ್, ಯೋಗರಾಜ ಭಟ್ ಮುಂತಾದವರೂ ನಮ್ಮ ಕನ್ನಡದ ಹೆಮ್ಮೆಯ ಕವಿಗಳೇ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top