ಹೃತಿಕ್ ಪಾಲಿನ ಸೂಪರ್ ಸಿನಿಮಾ

ಆಕರ್ಷಕ ದೇಹಸಿರಿಯಿಂದಲೇ ಅಭಿಮಾನಿಗಳ ಪಾಲಿಗೆ ‘ಗ್ರೀಕ್ ಗಾಡ್’ ಆಗಿರುವ ನಟ ಹೃತಿಕ್ ರೋಷನ್ ಈಗ ಹೊಸ ಗೆಟಪ್​ನಲ್ಲಿ ಬರುತ್ತಿದ್ದಾರೆ. ಖ್ಯಾತ ನಿರ್ದೇಶಕ ವಿಕಾಸ್ ಬಹ್ಲ್ ಬತ್ತಳಿಕೆಯಿಂದ ಬಂದಿರುವ ‘ಸೂಪರ್ 30’ ಚಿತ್ರದಲ್ಲಿ ಅವರಿಗೆ ಉಪನ್ಯಾಸಕನ ಪಾತ್ರ ನೀಡಲಾಗಿದೆ. ಈ ಚಿತ್ರದ ಇಂದು (ಜು.12) ವಿಶ್ವಾದ್ಯಂತ ತೆರೆಕಾಣುತ್ತಿದೆ. ಕಲರ್​ಫುಲ್ ಕಾಸ್ಟ್ಯೂಮ್ ಇಲ್ಲ, ಸಿಕ್ಸ್ ಪ್ಯಾಕ್ ಪ್ರದರ್ಶನಕ್ಕೆ ಅವಕಾಶವಿಲ್ಲ, ಡ್ಯುಯೆಟ್ ಹಾಡಲು ಸುಂದರವಾದ ನಾಯಕಿ ಇಲ್ಲ, ವಿದೇಶಿ ಲೊಕೇಷನ್​ಗಳಿಲ್ಲ.. ಹೀಗೆ ಎಲ್ಲ ಬಗೆಯ ಸಿದ್ಧ ಸೂತ್ರಗಳನ್ನು ಬದಿಗೊತ್ತಿ ಈ ಚಿತ್ರ ತಯಾರಾಗಿದೆ. ಹೃತಿಕ್ ಪಾಲಿಗೆ ‘ಸೂಪರ್ 30’ ವಿಶೇಷ ಸಿನಿಮಾ. ಯಾಕೆಂದರೆ, 2017ರಲ್ಲಿ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲಿ ಸೋತ ‘ಕಾಬಿಲ್’ ಬಳಿಕ ಅವರ ಯಾವ ಚಿತ್ರವೂ ಬಂದಿಲ್ಲ. ಅಂದರೆ ಅಂದಾಜು ಮೂರು ವರ್ಷದ ನಂತರ ಅವರು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಗೆಲ್ಲುವ ಅನಿವಾರ್ಯತೆ ಹೃತಿಕ್ ಮುಂದಿದೆ.

ಪ್ರತಿ ವರ್ಷ ಬಡ ಕುಟುಂಬದ 30 ಮಕ್ಕಳಿಗೆ ಉಚಿತ ಕೋಚಿಂಗ್ ನೀಡಿ, ಅವರನ್ನು ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಿಗೆ ಸೇರುವಂತೆ ಮಾಡಿದ ಆನಂದ್ ಕುಮಾರ್ ಕುರಿತು ಈ ಚಿತ್ರ ತಯಾರಾಗಿದ್ದು, ಆನಂದ್ ಕುಮಾರ್ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ದೇಹ ತೂಕ ಕಡಿಮೆ ಮಾಡಿಕೊಂಡು ಕ್ಯಾಮರಾ ಎದುರಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ ಮತ್ತು ಟ್ರೇಲರ್​ನಿಂದಾಗಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ, ಅಲ್ಲದೆ, ಹಲವು ವಿವಾದಗಳಿಗೂ ‘ಸೂಪರ್ 30’ ಸಿಲುಕಿತ್ತು. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿರುವ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರ ನೀಡಿದೆ. ಈಗಾಗಲೇ ಸಿನಿಮಾ ನೋಡಿರುವ ಹೃತಿಕ್ ಮಾಜಿ ಪತ್ನಿ ಸೂಸಾನೆ ಖಾನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವಿಚ್ಛೇದನ ಪಡೆದ ನಂತರವೂ ಇಬ್ಬರ ನಡುವೆ ಸ್ನೇಹ ಮುಂದುವರಿದಿರುವುದು ವಿಶೇಷ. ಇನ್ನು, ಈ ಚಿತ್ರಕ್ಕೆ ನಿರ್ದೇಶನ ಮಾಡಿರುವ ವಿಕಾಸ್ ಮೇಲೂ ಸಿನಿಪ್ರಿಯರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯಾಕೆಂದರೆ, 2011ರಲ್ಲಿ ಭಾರಿ ಸೌಂಡು ಮಾಡಿದ ‘ಚಿಲ್ಲರ್ ಪಾರ್ಟಿ’ ಹಾಗೂ 2014ರಲ್ಲಿ ಸೂಪರ್ ಹಿಟ್ ಎನಿಸಿಕೊಂಡ ‘ಕ್ವೀನ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಇದೇ ವಿಕಾಸ್.

Leave a Reply

Your email address will not be published. Required fields are marked *