ಹೂ ಬಿಟ್ಟ ಮಾವಿಗೆ ರಾಜಕಳೆ

ಗದಗ: ಹಣ್ಣುಗಳ ರಾಜ ಮಾವು ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುವುದು ಖಚಿತ. ಪ್ರಸಕ್ತ ವರ್ಷ ಮಾವಿನ ಗಿಡಗಳು ಹೂಗಳಿಂದ ಮೈತುಂಬಿಕೊಂಡು ನಳನಳಿಸುತ್ತಿದ್ದು, ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ ಮಾವು ಬೆಳೆಗಾರರು.

ನಾಲ್ಕೈದು ವರ್ಷಗಳಿಂದ ಬರಗಾಲ, ಹವಾಮಾನ ವೈಪರೀತ್ಯ ಹಾಗೂ ಕೀಟಬಾಧೆಯಿಂದ ಇಳುವರಿ ಕುಂಠಿತಗೊಂಡಿದ್ದರಿಂದ ಮಾವು ಬೆಳೆಗಾರರು ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ವರ್ಷ ಉತ್ತಮ ಇಳುವರಿ ಬರಬಹುದೆಂಬ ನಿರೀಕ್ಷೆಯಲ್ಲಿ ಹರ್ಷಗೊಂಡಿದ್ದಾರೆ. ಕಡಿಮೆ ನೀರಿನಲ್ಲಿ ಮತ್ತು ಒಣ ಪ್ರದೇಶದಲ್ಲಿ ಮಾವು ಸೂಕ್ತವಾಗಿ ಬೆಳೆಯುತ್ತವೆ. ಪ್ರಸಕ್ತ ವರ್ಷ ಮಾವಿನ ಗಿಡಗಳಲ್ಲಿ ಹೂವುಗಳು ನಳನಳಿಸುತ್ತಿವೆ. ಈಗ ಕಾಣಿಸಿಕೊಂಡಿರುವ ಹೂವುಗಳೆಲ್ಲವೂ ಕಾಯಿ ಕಟ್ಟಲು ಸಾಧ್ಯವಿಲ್ಲವಾದರೂ, ಈಗಿರುವ ಹೂವಿನಲ್ಲಿ ಶೇ. 75ರಷ್ಟಾದರೂ ಗಿಡಗಳಲ್ಲಿ ಉಳಿದು ಕಾಯಿ ಕಟ್ಟಿದರೂ ಬಂಪರ್ ಬೆಳೆ ಕಾಣಬಹುದು. ಆದರೆ, ಮುಂದಿನ ದಿನಗಳಲ್ಲಿ ಹೂವು ಕಾಯಿಯಾಗುವ ಸಂದರ್ಭದಲ್ಲಿ ಯಾವುದೇ ರೋಗ ಬರದಿರಲಿ ಎಂದು ದೇವರಲ್ಲಿ ಮೊರೆ ಇಡುತ್ತಿದ್ದಾರೆ.

ಮಾವು ಪ್ರದೇಶ

ಗದಗ ತಾಲೂಕಿನಲ್ಲಿ ಹುಲಕೋಟಿ, ಕುರ್ತಕೋಟಿ, ದುಂದೂರ ಸೇರಿದಂತೆ 750 ಹೆಕ್ಟೇರ್, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಹಮ್ಮಿಗಿ, ನಾಗರಳ್ಳಿ, ಹೆಸರೂರು ಭಾಗದ 178 ಹೆಕ್ಟೇರ್, ಶಿರಹಟ್ಟಿ ತಾಲೂಕಿನ ಲಕ್ಷೆ್ಮೕಶ್ವರ, ಬಾಲೆಹೊಸೂರ, ಶಿಗ್ಲಿ ಭಾಗದ 150 ಹೆಕ್ಟೇರ್, ರೋಣ ತಾಲೂಕಿನ ನರೇಗಲ್, ಗಜೇಂದ್ರಗಡ, ರಾಜೂರು, ಕುಂಟೋಜಿ ಭಾಗದ 100 ಹೆಕ್ಟೇರ್ ಮತ್ತು ನರಗುಂದ ತಾಲೂಕಿನ ವಿವಿಧೆಡೆ 35 ಹೆಕ್ಟೇರ್ ಸೇರಿದಂತೆ ಒಟ್ಟು 1,350 ಹೆಕ್ಟೇರ್ ಪ್ರದೇಶ ಮಾವು ಬೆಳೆಯಲಾಗಿದೆ. ಅದರಲ್ಲಿ ಕೆಲ ಮಾವಿನ ಗಿಡಗಳು ಚಿಕ್ಕದಾಗಿದ್ದು, 400-500 ಹೆಕ್ಟೇರ್ ಪ್ರದೇಶದಲ್ಲಿ ಇಳುವರಿ ಬರಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಉತ್ತಮ ಇಳುವರಿ ನಿರೀಕ್ಷೆ

2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 1,084 ಹೆಕ್ಟೇರ್ ಪ್ರದೇಶವಿದ್ದ ಮಾವು, 2018-19ರಲ್ಲಿ 1,213 ಹೆಕ್ಟೇರ್ ಪ್ರದೇಶ ಹೊಂದಿತ್ತು. ಪ್ರಸಕ್ತ ವರ್ಷ 1,350 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಕಳೆದೆರಡು ವರ್ಷಗಳಲ್ಲಿ ಹೆಕ್ಟೇರ್​ಗೆ 7ರಿಂದ 8 ಟನ್ ಇಳುವರಿ ಪಡೆದಿದ್ದ ಮಾವು ಬೆಳೆಗಾರರು, ಪ್ರಸಕ್ತ ವರ್ಷ ಹೆಕ್ಟೇರ್ ಪ್ರದೇಶದಲ್ಲಿ 10-15 ಟನ್ ಮಾವು ಬೆಳೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಕೀಟಬಾಧೆ ನಿರ್ವಹಣೆಗೆ ಸಲಹೆ

ಮಾವು ಹೂ ಬಿಡುವ ಸಮಯದಲ್ಲಿ ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದರೆ ವಿವಿಧ ಕೀಟ ಮತ್ತು ರೋಗಗಳ ಹಾವಳಿ ಕಂಡುಬರುತ್ತವೆ. ಜಿಗಿ ಹುಳು ನಿಯಂತ್ರಣಕ್ಕಾಗಿ ಮಾವು ಹೂವು ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೂಡಲೇ ಗಿಡಗಳಿಗೆ 40 ಗ್ರಾಂ ಕಾರ್ಬರಿಲ್ ಅಥವಾ 2.5 ಮಿ.ಲೀ. ಇಮಿಡಾಕ್ಲೋಪಿಡ್ ಅನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೂದಿ ರೋಗ ನಿಯಂತ್ರಣಕ್ಕಾಗಿ 30 ಗ್ರಾಂ ಗಂಧಕ ಅಥವಾ 10 ಗ್ರಾಂ ಕಾರ್ಬನ್ ಡೈಜಿಂ ಅನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಳಿಗಳು…

ಗದಗ ಜಿಲ್ಲೆಯಲ್ಲಿ ಅಲ್ಪಾನ್ಸೋ ಹೆಚ್ಚಾಗಿ ಬೆಳೆಯುತ್ತಿದ್ದು, ಅದರ ಜತೆಗೆ ಕೇಸರ, ದಶೇರಿ, ಮಲ್ಲಿಕಾ, ತೋತಾಪುರಿ, ನೀಲಂನಂತಹ ಮಾವಿನ ವಿವಿಧ ತಳಿಗಳನ್ನು ಬೆಳೆಯುತ್ತಾರೆ.

ಕಳೆದ ಬಾರಿ ಮೋಡ ಮುಸುಕಿದ ವಾತಾವರಣ, ಇಬ್ಬನಿ ಬಿದ್ದ ಪರಿಣಾಮ ಉತ್ತಮವಾಗಿ ಹೂ ಬಿಟ್ಟಿದ್ದರೂ ಕಾಯಿ ಬಿಡುವ ಹಂತದಲ್ಲಿ ಉದುರಿ ಹೋಗಿದ್ದರಿಂದ ಇಳುವರಿ ಕುಂಠಿತ ಗೊಂಡಿತ್ತು. ಪ್ರಸಕ್ತ ವರ್ಷ ಮೋಡ ಸೇರಿದಂತೆ ಇಬ್ಬನಿ ತೊಂದರೆ ಕಾಣಿಸಿಕೊಂಡಿಲ್ಲ. ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿದ್ದೇವೆ.

| ರಾಮಣ್ಣ ಜಂಬಗಿ ಮಾವು ಬೆಳೆಗಾರ

ಪ್ರಸಕ್ತ ವರ್ಷ ಮಾವು ಉತ್ತಮ ಇಳುವರಿ ಪಡೆಯಲು ಪೂರಕ ವಾತಾವರಣವಿದೆ. ಹೂವು ಬಿಡುವ ಸಮಯದಲ್ಲಿ ಇಬ್ಬನಿ, ಮಳೆ ಹಾಗೂ ಮೋಡ ಮುಸುಕಿದ ವಾತಾವರಣ ಇರದ ಕಾರಣ ಕೀಟ ಬಾಧೆ ಅಷ್ಟಾಗಿ ಕಾಣಿಸಿಲ್ಲ. ಮಾವು ಗಿಡದ ತುಂಬೆಲ್ಲ ಹೂವುಗಳು ಅರಳಿದ್ದು, ಕೆಲವೆಡೆ ಮಿಡಿ ಕಾಯಿಗಳು ಬಿಟ್ಟಿವೆ. ಮುಂದೆ ಬರಬಹುದಾದ ರೋಗಗಳ ನಿಯಂತ್ರಣಕ್ಕೆ ರೈತರಿಗೆ ತಾಂತ್ರಿಕ ಸಲಹೆ ನೀಡಲಾಗಿದೆ. ಮಾವಿನಲ್ಲಿ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳು ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ.

| ವೈ.ಎಸ್. ಜಾಲವಾಡಗಿ ಸಹಾಯಕ ತೋಟಗಾರಿಕೆ ನಿರ್ದೇಶಕರು