ಧಾರವಾಡ: ಅನೇಕ ಬಹುರಾಷ್ಟ್ರೀಯ ಕಂಪನಿಗಳು ಈಗ ಚೀನಾದಿಂದ ಹೊರಬರಲು ಮುಂದಾಗಿವೆ. ಮುಂಬರುವ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಅಂತಾರಾಷ್ಟ್ರೀಯ ಬಂಡವಾಳ ಹೂಡಿಕೆದಾರರು ಉತ್ಸುಕರಾಗಿದ್ದಾರೆ. ಅವರನ್ನು ಸೆಳೆಯಲು ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾರ್ಯಪಡೆ ರಚಿಸಲು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಟೋಮೊಬೈಲ್ ಸೇರಿ ಹಲವು ಉದ್ಯಮಗಳಲ್ಲಿ ಕರ್ನಾಟಕವು ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಕರೊನಾ ಹರಡುವಿಕೆ ನಂತರ ಜಪಾನ್, ಅಮೆರಿಕ ಸೇರಿ ಅನೇಕ ರಾಷ್ಟ್ರಗಳು ಚೀನಾ ಬಗ್ಗೆ ಅಸಮಾಧಾನ ಹೊಂದಿವೆ. ಚೀನಾದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಬೇರೆ ದೇಶಗಳಿಗೆ ಸ್ಥಳಾಂತರಿಸಲು ಚಿಂತನೆ ನಡೆಸಿವೆ. ನೂರಾರು ಅಂತಾರಾಷ್ಟ್ರೀಯ ಹೂಡಿಕೆದಾರರು ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಬಂಡವಾಳ ಹೂಡಲು ತಾತ್ವಿಕವಾಗಿ ಉತ್ಸುಕರಾಗಿದ್ದಾರೆ. ಅವರನ್ನು ಸೆಳೆಯಲು ರಾಜ್ಯದ ಪ್ರಮುಖ ಉದ್ಯಮಿಗಳಾದ ನಂದನ್ ನಿಲೇಕಣಿ, ಕಿರಣ್ ಮುಜುಂದಾರ್ ಷಾ, ಇನ್ಪೋಸಿಸ್ನಂಥ ಕೈಗಾರಿಕೋದ್ಯಮಿಗಳ ಸಂಘಟನೆಗಳ ಪದಾಧಿಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪ್ರಸ್ತಾವನೆ ತಯಾರಿಸಿ ಮುಖ್ಯಮಂತ್ರಿಗೆ ಸಲ್ಲಿಸಲಿದ್ದಾರೆ. ಶೀಘ್ರವೇ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಕಾರ್ಯಗಳು ಪ್ರಾರಂಭವಾಗಲಿವೆ ಎಂದರು.
ಕೈಗಾರಿಕೆಗಳಿಗೆ ಉತ್ತೇಜನ: ಹಲವು ಕೈಗಾರಿಕೆಗಳು ಈ ಸಂಕಷ್ಟ ಎದುರಿಸಲು ಕಡಿಮೆ ಬಡ್ಡಿ ದರದಲ್ಲಿ ದುಡಿಯುವ ಬಂಡವಾಳ, ಕಾರ್ವಿುಕರಿಗೆ ಏಪ್ರಿಲ್ ವೇತನ ನೀಡಲು ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ ಒಂದು ವರ್ಷದ ನಂತರ ಈ ಸಾಲಗಳ ಮರುಪಾವತಿ ಕೈಗೊಳ್ಳಲು ಮನವಿ ಮಾಡಿವೆ. ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಚಿವ ಶೆಟ್ಟರ್ ತಿಳಿಸಿದರು.
ಮದ್ಯ ಮಾರಾಟದಲ್ಲಿ ತಪ್ಪೇನಿದೆ?: ಮದ್ಯ ಮಾರಾಟ ಈಗಿನಿಂದ ಪ್ರಾರಂಭವಾಗಿಲ್ಲ. ಮೊದಲಿನಿಂದಲೂ ಇದೆ. ಲಾಕ್ಡೌನ್ ವೇಳೆ ಬಂದ್ ಮಾಡಲಾಗಿತ್ತು. ಅದನ್ನು ಪುನಃ ಪ್ರಾರಂಭಿಸಲಾಗಿದ್ದು, ಅದರಲ್ಲಿ ತಪ್ಪೇನಿದೆ? ಎಂದು ಸಚಿವ ಶೆಟ್ಟರ್ ಪ್ರಶ್ನಿಸಿದರು. ಹು-ಧಾ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ದೇಶಾದ್ಯಂತ ಮದ್ಯ ನಿಷೇಧಿಸಬೇಕು ಎಂದು ಪ್ರಸ್ತಾಪಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ನಡೆಸುವುದೇ ಬೇರೆ. ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವುದೇ ಬೇರೆ. ಕೆಲ ಮಠಾಧೀಶರೂ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಮದ್ಯ ಸೇವನೆ ಮಾಡುವವರಿಗೆ ಮಠಕ್ಕೆ ಪ್ರವೇಶವಿಲ್ಲ ಎಂದು ನಾಮಫಲಕ ಹಾಕಲಿ ಎಂದು ಶೆಟ್ಟರ್ ಸವಾಲೆಸೆದರು.
ವೈದ್ಯರು, ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ: ಕರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಸೂಚಿಸುವ ಪ್ರತಿ ಹಂತಗಳ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಿಮ್್ಸ, ಪಾಲಿಕೆ ಪೌರ ಕಾರ್ವಿುಕರು, ಪೊಲೀಸ್ ಆಯುಕ್ತ, ಜಿ.ಪಂ. ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಾರ್ವಿುಕ, ಆಹಾರ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಾರ್ತಾ ಹಾಗೂ ಇತರ ಇಲಾಖೆಗಳು ಅಗತ್ಯ ಸೇವೆಗಳ ಇಲಾಖೆಗಳ ಜೊತೆಗೆ ಮಾಧ್ಯಮಗಳೂ ಜಿಲ್ಲೆಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿವೆ. ಪರಿಣಾಮ ಉಳಿದ ಜಿಲ್ಲೆಗಳಿಗೆ ಹೋಲಿಸಿದಾಗ ಧಾರವಾಡದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಒಗ್ಗೂಡಿ ತಂಡವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಅಭಿನಂದನೀಯ ಎಂದು ಸಚಿವರು ಶ್ಲಾಘಿಸಿದರು.
ಪ್ಯಾಕೇಜ್ ಅಭಿನಂದನೀಯ: ಕ್ಷೌರಿಕರು, ಮಡಿವಾಳರು, ಹೂವು, ತರಕಾರಿ, ಹಣ್ಣು ಬೆಳೆಗಾರರು, ಆಟೋ ರಿಕ್ಷಾ ಚಾಲಕರು, ಕಾರ್ವಿುಕರು ಸೇರಿ ಹಲವು ವರ್ಗಗಳ ಜನರಿಗೆ ಸರ್ಕಾರ ನೆರವಿನ ಪ್ಯಾಕೇಜ್ಗಳನ್ನು ಘೊಷಿಸಿರುವ ಕ್ರಮಕ್ಕೆ ವ್ಯಾಪಕ ಸ್ವಾಗತ ಮತ್ತು ಅಭಿನಂದನೆ ವ್ಯಕ್ತವಾಗಿದೆ. ಜನಪರವಾದ ಆಡಳಿತಕ್ಕೆ ಸಿಕ್ಕ ಮೆಚ್ಚುಗೆಯಾಗಿದೆ ಎಂದು ಸಚಿವರು ಹೇಳಿದರು.