ಹುಲುಗಾಮನ ಮೂರ್ತಿ ಮೆರವಣಿಗೆ

ಶಿರಹಟ್ಟಿ: ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು. ತಾಲೂಕಿನ ಸಂಸ್ಕೃತಿ ಬಿಂಬಿಸುವ ಹುಲುಗಾಮನ ಮೂರ್ತಿ ತಯಾರಿಸಿ ಮೆರವಣಿಗೆ ಮಾಡುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಗುರುವಾರ ರಾತ್ರಿ 10 ಗಂಟೆಗೆ ವಾಲ್ಮೀಕಿ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಯುವಕರು, ಮಕ್ಕಳು ಜಗ್ಗಲಗೆ ಬಾರಿಸುತ್ತ, ಕಾಮರತಿಯರ ಜಾನಪದ ಹಾಡು ಹೇಳುತ್ತ ರಾತ್ರಿಯಿಡೀ ಪಟ್ಟಣದಲ್ಲೆಲ್ಲ ಸಂಚರಿಸಿದರು. ಬೆಳಗ್ಗೆ ಮತ್ತದೇ ಸ್ಥಳಕ್ಕಾಗಮಿಸಿ ಕಾಮದಹನ ಮಾಡಿ ರಂಗಿನಾಟಕ್ಕೆ ಚಾಲನೆ ನೀಡಲಾಯಿತು.

ಖಾನಾಪೂರ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಕಾಮಪ್ರತಿಷ್ಠಾಪನೆ, ದಹನ, ಹಲಿಗೆ ಬಾರಿಸುವುದು, ಬಣ್ಣ ಎರೆಚಾಟ ಯಾವುದು ನಡೆಯುವದಿಲ್ಲ. ಆದರೆ, ಹಿಂದುಗಳೆಲ್ಲ ಮನೆ ಮುಂದೆ ಬೆನಕನನ್ನು ಪ್ರತಿಷ್ಠಾಪಿಸಿ ಅದಕ್ಕೆ ಪೂಜಿಸುತ್ತಾರೆ. ಗ್ರಾಮದ ಸುಭಿಕ್ಷೆಗಾಗಿ ಸರ್ವಧರ್ವಿುಯರೆಲ್ಲ ಸೇರಿ ತ್ರಿವಿಧ ದಾಸೋಹಿ ಶರಣಬಸವೇಶ್ವರ ಪುರಾಣ, ಅನ್ನದಾಸೋಹ ಸಾಮೂಹಿಕ ಮದುವೆಯಂಥ ಧರ್ವಚರಣೆ ಕಾರ್ಯದಲ್ಲಿ ತೊಡಗುತ್ತಾರೆ.

ಗಜೇಂದ್ರಗಡದಲ್ಲಿ ಹೋಳಿ ಸಂಭ್ರಮ: ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೋಳಿ ಆಚರಿಸಲಾಯಿತು. ಯುವಕ-ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಶುಕ್ರವಾರ ಪಟ್ಟಣದ ಮುಖ್ಯರಸ್ತೆಗಳಲ್ಲಿ ಇರುವ ಬಹುಪಾಲು ಅಂಗಡಿ-ಮುಂಗಟ್ಟುಗಳ ಕದ ತೆರೆಯಲಿಲ್ಲ. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ, ಬಣ್ಣದಾಟದಲ್ಲಿ ಪಾಲ್ಗೊಂಡರು.