ಕಾನಹೊಸಹಳ್ಳಿ: ಹುಲಿಕುಂಟೆ ಗ್ರಾಮ ಹೊರವಲಯದ ಹೊಸಕೆರೆ ಕಟ್ಟೆ ಬಳಿ ಮೈಸೂರು ಒಡೆಯರ ಕಾಲದ ಅಪ್ರಕಟಿತ ಶಿಲಾಶಾಸನ ಪತ್ತೆಯಾಗಿದೆ. ಕೂಡ್ಲಿಗಿ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಒ.ಓಬಯ್ಯ ಅವರ ತಂಡದ ಕ್ಷೇತ್ರಕಾರ್ಯದಲ್ಲಿ ಶಿಲಾಶಾಸನ ಶನಿವಾರ ಬೆಳಕಿಗೆ ಬಂದಿದೆ.

ಶಿಲಾಶಾಸನ 6.5 ಅಡಿ ಉದ್ದ, 1.10 ಅಡಿ ಅಗಲವಿದೆ. ಶಾಸನದಲ್ಲಿ ಸೂರ್ಯ ಮತ್ತು ಚಂದ್ರ ಚಿತ್ರಗಳ ಮಧ್ಯೆ ಶ್ರೀ ಎಂಬ ಅಕ್ಷರವಿದೆ. ಶ್ರೀ ಕೃಷ್ಣ ಎಂಬ ಉಲ್ಲೇಖವಿದೆ. 1890ರಲ್ಲಿ ಹುಲಿಕುಂಟೆಯ ಭೀಮನಗಾನು ಈ ಜಮೀನಿನಲ್ಲಿ ಕೆರೆ ಕಟ್ಟಿಸಿದ ಹಾಗೂ ಕೆರೆ ನಿರ್ಮಾಣಕ್ಕೆ ತಗುಲಿದ ವೆಚ್ಚದ ಕುರಿತು ಶಾಸನ ಮಾಹಿತಿ ನೀಡುತ್ತದೆ.
ಈ ಶಾಸನವು ಕನ್ನಡ ಲಿಪಿಯ 16 ಸಾಲುಗಳನ್ನು ಒಳಗೊಂಡಿದೆ. ಅಲ್ಲಲ್ಲಿ ಕನ್ನಡ ಮತ್ತು ಆಂಗ್ಲ ಅಂಕಿಗಳನ್ನು ಬಳಸಿರುವುದು ಕಂಡು ಬರುತ್ತಿದೆ. ಹುಲಿಕುಂಟೆ ಗ್ರಾಮದ ಕುರಿಗಾಹಿ ರಮೇಶ ಅವರ ಸಹಕಾರದೊಂದಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಜಿ.ದರ್ಶನ್, ಆರ್.ತಿಪ್ಪೇಸ್ವಾಮಿ, ಕಿರಣ್ ಕುಮಾರ, ಹಳೆಯ ವಿದ್ಯಾರ್ಥಿ ಜೆ.ಲಿಂಬ್ಯಾನಾಯ್ಕ ಇದ್ದರು.