ಹುಬ್ಬಳ್ಳಿ ಅಂದರೆ ನನಗೆ ಖುಷಿ

ಹುಬ್ಬಳ್ಳಿ: ‘ಹುಬ್ಬಳ್ಳಿ ಅಂದರೆ ನನಗೆ ಖುಷಿಯಾಗುತ್ತದೆ’ ಇಲ್ಲಿ ಹಲವು ಬಾರಿ ಕ್ರಿಕೆಟ್ ಆಡಿದ್ದೇನೆ. ಹುಬ್ಬಳ್ಳಿಗರು ಪ್ರೀತಿ, ಪ್ರೋತ್ಸಾಹ ನೀಡಿದ್ದಾರೆ ಎಂದು ಭಾರತದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹುಬ್ಬಳ್ಳಿಯೊಂದಿಗಿನ ತಮ್ಮ ಕ್ಷಣಗಳನ್ನು ಹಂಚಿಕೊಂಡರು.

ಹುಬ್ಬಳ್ಳಿ ಸ್ಟೋರ್ಟ್ಸ್ ಕ್ಲಬ್​ನಿಂದ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ನಿರ್ವಿುಸಿದ ‘ಆಸ್ಟ್ರೋ ಟರ್ಫ್ ಪ್ರಾಕ್ಟಿಸ್ ವಿಕೆಟ್’ ಸೌಲಭ್ಯವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ಕರ್ನಾಟಕದ ಪ್ರಿಯವಾದ ಸ್ಥಳಗಳಲ್ಲಿ ಹುಬ್ಬಳಿಯೂ ಒಂದು. ಈಗ ಹುಬ್ಬಳ್ಳಿಗೆ ಕೆಪಿಎಲ್ ಪಂದ್ಯವಾಡಲು ಬಂದಿದ್ದಕ್ಕೆ ಅತೀವ ಸಂತೋಷವಾಗಿದೆ. ಕ್ರಿಕೆಟ್ ಆಟಗಾರರು ‘ಆಸ್ಟ್ರೋ ಟರ್ಫ್ ಪ್ರಾಕ್ಟಿಸ್ ವಿಕೆಟ್’ನ ಸೌಲಭ್ಯ ಪಡೆದು ಭವಿಷ್ಯದ ಆಟಗಾರರಾಗಬೇಕು ಎಂದರು.

ಕ್ರಿಕೆಟಿಗ ರಾಜು ಭಟ್ಕಳ, ಹುಬ್ಬಳ್ಳಿ ಸ್ಟೋರ್ಟ್ಸ್ ಕ್ಲಬ್ ಅಧ್ಯಕ್ಷ ವೀರಣ್ಣ ಸವಡಿ, ಮುರಗೇಶ ಹಂಚಿನ , ಸಂಜಯ್ ಗಾಮಿ, ಸಮೀರ್ ಒಸ್ವಾಲ್, ವಿನೋದ ಭತ್ತದ, ಲಿಂಗರಾಜ ಪಾಟೀಲ ಇತರರಿದ್ದರು.

ನೆರೆಯಿಂದ ಕೊಡಗು ನಾಶವಾಗಿರುವುದಕ್ಕೆ ನನಗೆ ಬಹಳ ಬೇಸರವಾಗಿದೆ. ಆಸ್ಪತ್ರೆಗಳು, ಮನೆಗಳ ನಿರ್ಮಾಣ ಸೇರಿದಂತೆ ಎಲ್ಲ ರೀತಿಯಿಂದಲೂ ಕೊಡಗನ್ನು ಮತ್ತೆ ಕಟ್ಟಬೇಕಾಗಿದೆ. ಅಲ್ಲಿನ ಸಂತ್ರಸ್ತರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಎಲ್ಲರೂ ಸಹಾಯ, ಸಹಕಾರ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ರಾಬಿನ್ ಉತ್ತಪ್ಪ ಉತ್ತರಿಸಿದರು.