ಹುಬ್ಬಳ್ಳಿಯಿಂದ ಪಾದಯಾತ್ರೆ, ಪಲ್ಲಕ್ಕಿ ಉತ್ಸವ

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಬೂದನಗುಡ್ಡ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗುರುವಾರ ‘ಹುಬ್ಬಳ್ಳಿ ಜಾತ್ರೆ’ ಅದ್ದೂರಿಯಾಗಿ ನಡೆಯಿತು.

ಪ್ರತಿ ವರ್ಷ ಶ್ರಾವಣದಲ್ಲಿ ಶ್ರೀಕ್ಷೇತ್ರ ಬೂದನಗುಡ್ಡಕ್ಕೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಪಲ್ಲಕ್ಕಿ ಉತ್ಸವಗಳು ಬರುವುದು ವಾಡಿಕೆ. ಅದರಂತೆ ನಗರದ ವಿವಿಧೆಡೆಯಿಂದ ಬೆಳಗ್ಗೆ ಪಲ್ಲಕ್ಕಿ ಉತ್ಸವಗಳು ತೆರಳಿದವು. ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು. ಹಾಗಾಗಿ ಗುರುವಾರ ಹುಬ್ಬಳ್ಳಿ ಜಾತ್ರೆಯಾಗಿ ಪರಿಣಮಿಸಿತು.

ನಗರದ ಗೋಪನಕೊಪ್ಪ, ಕೇಶ್ವಾಪುರ, ಕೃಷ್ಣಾಪುರ ಓಣಿ, ಗಣೇಶಪೇಟ ಹಾಗೂ ಜಂಗ್ಲಿಪೇಟಗಳಿಂದ ಐದು ಪಲ್ಲಕ್ಕಿ ಉತ್ಸವಗಳು ಗುರುವಾರ ಬೆಳಗ್ಗೆ ಹೊರಟು ಮಧ್ಯಾಹ್ನ 1ಗಂಟೆ ಹೊತ್ತಿಗೆ ಕ್ಷೇತ್ರ ಬೂದನಗುಡ್ಡ ತಲುಪಿದವು.

ಅಲ್ಲಿ ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸದ್ಭಕ್ತ ಮಂಡಳಿ ಪರವಾಗಿ ಅನ್ನಸಂತರ್ಪಣೆ ಜರುಗಿತು.

ಬೂದನಗುಡ್ಡ ಬಸವಣ್ಣ ದೇವಸ್ಥಾನದಲ್ಲಿ ಬೆಳಗ್ಗೆ ಮಹಾರುದ್ರಾಭಿಷೇಕ, ನಂತರ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು ಎಂದು ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಈರಣ್ಣ ಎಮ್ಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *