ಹುಬ್ಬಳ್ಳಿಯಲ್ಲಿ ಪಿರಮಿಡ್ ಉದ್ಘಾಟನೆ 

ಹುಬ್ಬಳ್ಳಿ: ಅವಳಿ ನಗರ ಅಭಿವೃದ್ಧಿ ಹಾಗೂ ಸ್ವಚ್ಛತೆಯಲ್ಲಿ ನಾಗರಿಕರು ಸಹಕರಿಸಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಮನವಿ ಮಾಡಿದರು.

ನೃಪತುಂಗ ಬೆಟ್ಟದ ಬಳಿ ನಿರ್ವಣಗೊಂಡ ಪಿರಾಮಿಡ್ (ಧ್ಯಾನ ಮಂದಿರ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಟೆಂಡರ್ ಸ್ಯೂರ್ ರಸ್ತೆ ನಿರ್ವಣಕ್ಕೆ ಶಿರೂರ್ ಪಾರ್ಕ್​ನಲ್ಲಿ ಅಡ್ಡಿಯಾಗಿದ್ದ ಅಕ್ರಮ ಕಟ್ಟಡ ತೆರವಿಗೆ ನಾಗರಿಕರು ಸಹಕರಿಸಿರಲಿಲ್ಲ. ಬಳಿಕ ಬಲ ಪ್ರಯೋಗ ಮಾಡಿ ತೆರವುಗೊಳಿಸಬೇಕಾಯಿತು. ನಗರದಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲುವುದು, ಉಗುಳುವುದನ್ನು ಮಾಡಬಾರದು ಎಂದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಮನಃಶಾಂತಿಗಾಗಿ ಪಿರಾಮಿಡ್ ರಚಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಕ್ಟೋಬರ್ 3ರಂದು ಬ್ರಹ್ಮಶ್ರೀ ಪತ್ರಿಜೀಯವರು ಈ ಪಿರಾಮಿಡ್​ನಲ್ಲಿ 2-3 ತಾಸು ಧ್ಯಾನ ಹೇಳಿಕೊಡಲಿದ್ದಾರೆ ಎಂದು ತಿಳಿಸಿದರು.

ಪ್ರೇಕ್ಷಣೀಯ ಸ್ಥಳ: ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹೊರಗಿನವರು ಬಂದು ನೋಡಿಕೊಂಡು ಹೋಗುವಂತೆ ಪಿರಾಮಿಡ್​ನನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸಬೇಕಿದೆ. ಪಾಲಿಕೆ ಅಥವಾ ಹುಡಾದಿಂದ ಇದರ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಬೇಕಿದೆ. ಇಂಥ ಹಲವು ವಿಷಯಗಳ ಕುರಿತು ರ್ಚಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ನೀರಿನ ಬಾಟಲಿಗಳೇ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಅವಳಿ ನಗರದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಉಪ ಮೇಯರ್ ಮೇನಕಾ ಹುರುಳಿ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಹುಡಾ ಮಾಜಿ ಅಧ್ಯಕ್ಷರಾದ ಲಿಂಗರಾಜ ಪಾಟೀಲ, ದತ್ತಾ ಡೋರ್ಲೆ, ಅನ್ವರ ಮುಧೋಳ, ಪಾಲಿಕೆ ಹೆಚ್ಚುವರಿ ಆಯುಕ್ತ ಎ.ಆರ್. ದೇಸಾಯಿ, ಇತರರು ಇದ್ದರು.

3ನೇ ದೊಡ್ಡ ಪಿರಾಮಿಡ್

ಆಕಾರದಲ್ಲಿ ದೇಶದ 3ನೇ ದೊಡ್ಡ ಪಿರಾಮಿಡ್ ಇದಾಗಿದೆ. ಹೈದ್ರಾಬಾದ್​ನಲ್ಲಿ ದೇಶದ ಅತಿ ದೊಡ್ಡ ಪಿರಾಮಿಡ್ ಇದೆ. ರಾಜ್ಯದ ಕನಕಪುರದಲ್ಲಿ ಇರುವುದು 2ನೇ ದೊಡ್ಡ ಪಿರಾಮಿಡ್ ಆಗಿದೆ. ಕೆಲ ತಿಂಗಳುಗಳ ಹಿಂದೆ ಪಿರಾಮಿಡ್ ಉದ್ಘಾಟನೆ ಮುಂದೂಡಲ್ಪಟ್ಟಿತ್ತು. ಇದೀಗ ಸೋಮವಾರ ಉದ್ಘಾಟನೆಗೊಂಡು ಧ್ಯಾನಾಸಕ್ತರನ್ನು ಸೆಳೆಯುತ್ತಿದೆ.