ಹುಬ್ಬಳ್ಳಿ : ಹುಬ್ಬಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ಸಂಜೆ ಆಲಿಕಲ್ಲು ಮಳೆ ಸುರಿಯಿತು.
ಸಂಜೆ ಸುಮಾರು 6.30ಕ್ಕೆ ಕೆಲ ಹೊತ್ತು ಬಿರುಗಾಳಿ ಬೀಸಿತು. ಅದರ ಬೆನ್ನಲ್ಲೇ ಗುಡುಗು, ಸಿಡಿಲಿನೊಂದಿಗೆ ಆಲಿಕಲ್ಲು ಮಳೆ ಸುರಿಯಿತು. ಧಾರಾಕಾರ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ದಾಜಿಬಾನಪೇಟೆ ತುಳಜಾಭವಾನಿ ರಸ್ತೆ ಎದುರು ನೀರು ನಿಂತಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಬೇಕಾಯಿತು. ಅಪಾರ್ಟ್ವೆುಂಟ್ಗಳ ರ್ಪಾಂಗ್ನಲ್ಲಿ ನೀರು ನುಗ್ಗಿತು.
ಬಿರುಗಾಳಿಯಿಂದಾಗಿ ಕೆಲವೆಡೆ ಮರಗಳು ಧರೆಗುರುಳಿದ್ದವು. ಕೆಲವೆಡೆ ಮರಗಳ ಕೊಂಬೆಗಳು ತುಂಡರಿಸಿ ಬಿದ್ದಿದ್ದವು. ಇದರಿಂದಾಗಿ ಕೆಲ ಬಡಾವಣೆಗಳಲ್ಲಿ ಒಂದು ತಾಸಿಗೂ ಹೆಚ್ಚು ಸಮಯದವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಮಳೆಯಿಂದಾಗಿ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಕೆಲವೆಡೆ ನೀರು ನಿಂತಿತ್ತು. ಗಣೇಶ ನಗರ, ಲೋಹಿಯಾ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತ್ತು. ಕಳೆದ ಎರಡು ದಿನಗಳಿಂದ ಸಂಜೆ ಹೊತ್ತಿಗೆ ಮಳೆ ಸುರಿಯುತ್ತಿರುವುದರಿಂದ ರಾಜಕಾಲುವೆ ತುಂಬಿ ಹರಿಯುತ್ತಿದೆ. ಮಂಗಳವಾರವೂ ಸುರಿದ ಮಳೆಯಿಂದಾಗಿ ರಾಜಕಾಲುವೆಯಲ್ಲಿ ಹೆಚ್ಚಿನ ನೀರಿನ ಹರಿವು ಕಂಡುಬಂದಿತು.
ಧಾರವಾಡ ಜಿಲ್ಲೆಯ ವಿವಿಧೆಡೆಯೂ ಮಳೆ ಸುರಿದ ವರದಿಯಾಗಿದೆ. ಭಾನುವಾರ ಹಾಗೂ ಸೋಮವಾರ ಮಳೆ ಸುರಿದಿದ್ದರೂ ಮಂಗಳವಾರ ಬೆಳಗ್ಗೆಯಿಂದಲೇ ಬಿಸಿಲಿನ ತಾಪ ಹೆಚ್ಚಿತ್ತು. ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ವಣಗೊಂಡಿತ್ತು.