ಕಾರವಾರ: ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ (ಕೆಡಿಎ) ಅನಾಥವಾಗಿದೆ. ಹೊರ ಗುತ್ತಿಗೆ ನೌಕರರೇ ಕಚೇರಿ ನಡೆಸುವ ಪರಿಸ್ಥಿತಿ ಉಂಟಾಗುತ್ತಿದ್ದು, ಸಾರ್ವಜನಿಕರು ಕೆಲಸಕ್ಕಾಗಿ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ವಣವಾಗಿದೆ.
ಕಮೀಷನರ್, ಟೌನ್ ಪ್ಲಾನರ್, ಅಕೌಂಟೆಂಟ್, ಜೂನಿಯರ್ ಇಂಜಿನಿಯರ್, ಡ್ರಾಫ್ಟ್ಸ್ಮನ್, ಎಫ್ಡಿಸಿ, ಎಸ್ಡಿಸಿ, ಡ್ರೖೆವರ್, ಪ್ಯೂನ್ ಸೇರಿ 9 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 8 ಹುದ್ದೆಗಳು ಖಾಲಿ ಇವೆ. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಾಯಂ ಕಮೀಷನರ್ ಇಲ್ಲದೇ ನಾಲ್ಕೈದು ತಿಂಗಳು ಕಳೆದಿದೆ. ಶಿರಸಿಯ ಕಮೀಷನರ್ ಅವರನ್ನು ಪ್ರಭಾರಿಯಾಗಿ ನೇಮಿಸಲಾಗಿದೆ. ನಗರ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನೂ ಅವರಿಗೇ ವಹಿಸಿದ್ದರಿಂದ ವಾರಕ್ಕೊಮ್ಮೆ ಅವರು ಕಚೇರಿಗೆ ಬಂದು ಹೋಗುತ್ತಾರಷ್ಟೆ. ಪ್ರಾಧಿಕಾರದಲ್ಲಿ ಒಬ್ಬ ಕಾಯಂ ಕಿರಿಯ ಇಂಜಿನಿಯರ್ ಮಾತ್ರ ಇದ್ದಾರೆ. ಅವರು ರಜೆಯ ಮೇಲೆ ಹೋದರೆ ಕಚೇರಿಯ ಸಂಪೂರ್ಣ ಜವಾಬ್ದಾರಿಯು ಹೊರ ಗುತ್ತಿಗೆಯವರದ್ದಾಗುತ್ತದೆ.
ಕಡತಗಳ ರಾಶಿ: ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮನೆ, ವಾಣಿಜ್ಯ ಕಟ್ಟಡ ನಿರ್ವಣಕ್ಕೆ ಇಲ್ಲಿಂದಲೇ ಅನುಮತಿ ಪಡೆದುಕೊಳ್ಳಬೇಕು. ನಿರ್ಮಾಣ ಜಾಲ ತಾಣದ ಮೂಲಕ ನಗರ ಪ್ರದೇಶದ ಅನುಮತಿಯನ್ನು ಆನ್ಲೈನ್ನಲ್ಲಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ತಿಂಗಳೊಳಗೆ ಅರ್ಜಿಗಳಿಗೆ ಅನುಮತಿ ನೀಡಬೇಕು ಇಲ್ಲವೇ ತಿರಸ್ಕಾರ ಮಾಡಬೇಕು. ಆದರೆ, ಇದು ಸಮರ್ಪಕವಾಗಿ ಆಗುತ್ತಿಲ್ಲ. ಇನ್ನು, ಪ್ರಾಧಿಕಾರದ ವ್ಯಾಪ್ತಿಗೆ ಕಾರವಾರ ನಗರಸಭೆ ಜತೆ, ಕಡವಾಡ, ಶಿರವಾಡ, ಚೆಂಡಿಯಾ, ಸದಾಶಿವಗಡ ಗ್ರಾಪಂಗಳೂ ಸೇರುತ್ತವೆ. ಇಲ್ಲಿ ಮನೆ ನಿರ್ವಣಕ್ಕೆ ಮ್ಯಾನ್ಯುವಲಿ ಅನುಮತಿ ನೀಡಲಾಗುತ್ತದೆ. ಈ ಅನುಮತಿಗಾಗಿ ಬಂದ ಸಾಕಷ್ಟು ಕಡತಗಳು ಕೆಲ ತಿಂಗಳಿಂದ ಬಿದ್ದುಕೊಂಡಿವೆ. ಕಚೇರಿಯಲ್ಲಿ ಹುದ್ದೆ ಖಾಲಿ ಇರುವುದು ಸರಿ. ಇದ್ದೊಬ್ಬ ಇಂಜಿನಿಯರ್ ಕೂಡ ಕಚೇರಿಯಲ್ಲಿ ಇರುವುದಿಲ್ಲ. ಹತ್ತಾರು ಬಾರಿ ಕಚೇರಿಗೆ ಬಂದು ವಾಪಸಾಗಬೇಕು. ಕಚೇರಿಯ ವಹಿಯಲ್ಲಿ ದಾಖಲಿಸದೇ ರಜೆ ಮಾಡುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.
ಮೂಲ ಉದ್ದೇಶವೇ ಈಡೇರಿಲ್ಲ: ವಸತಿ ಬಡಾವಣೆ ಮಾಡುವುದು, ನಗರದ ಮಹಾ ಯೋಜನೆ (ಮಾಸ್ಟರ್ ಪ್ಲ್ಯಾನ್) ತಯಾರಿಸುವುದು ನಗರಾಭಿವೃದ್ಧಿ ಪ್ರಾಧಿಕಾರದ ಮೂಲ ಉದ್ದೇಶ. ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ ರಚನೆ ನಂತರ ಒಂದೂ ವಸತಿ ಬಡಾವಣೆ ನಿರ್ವಿುಸಿಲ್ಲ. ನಗರ ಮಹಾ ಯೋಜನೆಯನ್ನು ನಿಯಮಿತ ಅವಧಿಗೆ ಪರಿಷ್ಕರಿಸಿಲ್ಲ. ಇದರಿಂದ ಪ್ರಾಧಿಕಾರಕ್ಕೆ ಆದಾಯವೂ ಇಲ್ಲ. ಕಟ್ಟಡ ನಿರ್ಮಾಣ ಅನುಮತಿ ಕೊಡುವ ಕಾರ್ಯವನ್ನು ಮಾತ್ರ ಮಾಡುತ್ತಿದೆ. ಕಳೆದ ಎರಡು ವರ್ಷದಿಂದ ಪ್ರಾಧಿಕಾರಕ್ಕೆ ಅಧ್ಯಕ್ಷರೂ ಇಲ್ಲ.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ತಾಂತ್ರಿಕ ಪರಿಣತಿಯ ಹುದ್ದೆಗಳಿರುವುದರಿಂದ ಬೇರೆ ಇಲಾಖೆಯವರನ್ನು ಈ ಸ್ಥಾನಕ್ಕೆ ನೇಮಕ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಇಲ್ಲಿಗೆ ಬರುವುದಿಲ್ಲ. ಇದರಿಂದ ಶಿರಸಿ ಕಮೀಷನರ್ಗೆ ಜವಾಬ್ದಾರಿ ನೀಡಲಾಗಿತ್ತು. ಅವರಿಗೆ ಒಟ್ಟಾರೆ ಮೂರು ಜವಾಬ್ದಾರಿ ಇರುವುದರಿಂದ ಕಾಯಂ ಇಲ್ಲಿರಲು ಸಾಧ್ಯವಿಲ್ಲ. ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದಿತ್ತು. ಬೇರೆಯವರನ್ನು ನೇಮಕ ಮಾಡಲು ಪ್ರಯತ್ನಿಸಲಾಗುವುದು.
| ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ ಉತ್ತರ ಕನ್ನಡ