ಹುತಾತ್ಮ ರೈತರಿಗೆ ನಾಡಿನ ಸಲಾಂ

ವಿಜಯವಾಣಿ ಸುದ್ದಿಜಾಲ ನರಗುಂದ

ರೈತರ ಚಳವಳಿಗೆ ಪ್ರೇರಣೆಯಾಗಿ ನಿಲ್ಲುವ ಸ್ಥಳ ನರಗುಂದ. ಅದು 1980 ಜುಲೈ 21ರಂದು ನಡೆದ ಬಂಡಾಯ. ಜಮೀನುಗಳಿಗೆ ನೀರು ಹರಿಯದಿದ್ದರೂ ಅಭಿವೃದ್ಧಿ ಕರ (ಬೆಟರ್​ವೆುಂಟ್ ಲೇವ್ಹಿ) ಪಾವತಿಸಬೇಕೆಂಬ ಅಂದಿನ ಆರ್.ಆರ್. ಗುಂಡೂರಾವ್ ಸರ್ಕಾರದ ಆದೇಶ ರದ್ದತಿಗೆ ಆಗ್ರಹಿಸಿ ರೈತರು ನಡೆಸಿದ ಹೋರಾಟದಲ್ಲಿ ಚಿಕ್ಕನರಗುಂದದ ರೈತ ವೀರಪ್ಪ ಕಡ್ಲಿಕೊಪ್ಪ, ನವಲಗುಂದ ತಾಲೂಕಿನ ಅಳಗವಾಡಿಯ ಬಸಪ್ಪ ಲಕ್ಕುಂಡಿ ಹುತಾತ್ಮರಾದರು. ಅವರ ನೆನಪಿನಲ್ಲಿ ಸ್ಥಾಪಿಸಲಾಗಿರುವ ವೀರಗಲ್ಲಿಗೆ ಭಾನುವಾರ ವಿವಿಧ ರೈತ ಸಂಘಟನೆಗಳ ಪ್ರಮುಖರು, ಜನಪ್ರತಿನಿಧಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

ಮಹದಾಯಿ-ಮಲಪ್ರಭೆ ನದಿ ಜೋಡಣೆ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು ಎಂದು ಆಗ್ರಹಿಸಿ ರೈತ ಸೇನಾ ಕರ್ನಾಟಕ ಸಂಘಟನೆಯಿಂದ ಒಂದು ವಾರದಲ್ಲಿ ಸುಪ್ರೀಂ ಕೋರ್ಟ್​ಗೆ ಪಿಐಎಲ್(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಹೇಳಿದರು.

ಕರ್ನಾಟಕ, ಗೋವಾ, ಮಹಾರಾಷ್ಟ್ರಕ್ಕೆ ಮಹದಾಯಿ ನ್ಯಾಯಾಧಿಕರಣದಲ್ಲಿ ಕಳೆದ ಆಗಸ್ಟ್​ನಲ್ಲಿ ನೀರು ಹಂಚಿಕೆಯಾಗಿದೆ. ಆದರೆ, ಗೋವಾ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರದ ನಾಯಕರು ಅಧಿಕಾರಕ್ಕಾಗಿ ರಾಜಕೀಯ ಕಿತ್ತಾಟದಲ್ಲಿ ತೊಡಗಿದ್ದಾರೆ. ಆದ್ದರಿಂದ ರೈತ ಸೇನಾ ಕರ್ನಾಟಕ ಸಂಘಟನೆಯಿಂದ ಪಿಐಎಲ್ ಸಲ್ಲಿಸಲಾಗುವುದು ಎಂದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಮಾತನಾಡಿ, ರೈತರ ಹೋರಾಟಕ್ಕೆ ಯಾವುದೇ ಸರ್ಕಾರಗಳಿಂದ ಸ್ಪಂದನೆ ಸಿಗುತ್ತಿಲ್ಲ. ಬಿಜೆಪಿ ಸಂಸದರಿಗೆ ಸಂಸತ್ತಿನಲ್ಲಿ ಮಹದಾಯಿ ಬಗ್ಗೆ ಮಾತನಾಡಲು ಧ್ವನಿ ಇಲ್ಲದಂತಾಗಿದೆ. ಆಗಸ್ಟ್ 2ರೊಳಗೆ ಮಹದಾಯಿ ಯೋಜನೆ ಕುರಿತು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದರೆ ಯೋಜನೆಗೆ ಬೇಕಾದ ಅನುದಾನವನ್ನು ರಾಜ್ಯ ಸರ್ಕಾರದಿಂದ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, 1980ರಿಂದ ಇಲ್ಲಿಯವರೆಗೆ ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಇದರಲ್ಲಿ ರಾಜ್ಯದ 139 ರೈತರು ಮೃತಪಟ್ಟಿದ್ದಾರೆ. ಆದರೆ, ದೇಶದಲ್ಲಿ ಅವರಿಗೆ ಯಾವುದೇ ಸರ್ಕಾರದಿಂದ ಅನುಕೂಲಕರ ವಾತಾವರಣ ಇಲ್ಲ. ನಾನು ಶಾಸಕನಾಗಿದ್ದಾಗ ನರಗುಂದ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನೀರಾವರಿ ಕಾಲುವೆ ನವೀಕರಣಗೊಳಿಸಲು ಸರ್ಕಾರದಿಂದ 1200 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಪಡಿಸಿದ್ದೇನೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ರೈತರ ಕೆಲಸ ಮಾಡುವವರಿಗೆ ಮತ ಹಾಕಲಿಲ್ಲ. ಬದಲಿಗೆ ರೈತ ವಿರೋಧಿ ಬಿಜೆಪಿಗೆ ಮತ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹದಾಯಿಗಾಗಿ ಮಹಾವೇದಿಕೆ ಸಂಘಟನೆಯಿಂದ ಪಟ್ಟಣದ ಕೃಷಿ ಇಲಾಖೆ ಕಚೇರಿ ಬಳಿ ಪ್ರತ್ಯೇಕವಾಗಿ ನಿರ್ವಿುಸಿದ್ದ ವೇದಿಕೆಯಲ್ಲಿ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಮಾತನಾಡಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ತರದಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಂದ ಬುದ್ಧಿ ಕಲಿಯಬೇಕಾಗುತ್ತದೆ ಎಂದರು.

ತಾಲೂಕಾಡಳಿತದಿಂದ ತಹಸೀಲ್ದಾರ್ ಕೆ.ಬಿ. ಕೋರಿಶೆಟ್ಟರ್ ಹಾಗೂ ಶಾಸಕ ಸಿ.ಸಿ. ಪಾಟೀಲ ಅನುಪಸ್ಥಿತಿಯಲ್ಲಿ ಅವರ ಪುತ್ರ ಉಮೇಶಗೌಡ ಪಾಟೀಲ ನೂರಾರು ಬಿಜೆಪಿ ಮುಖಂಡರು, ಕರವೇ ನಾರಾಯಣ ಗೌಡರ, ಪ್ರವೀಣಶೆಟ್ಟಿ ಬಣ, ನರಗುಂದ ತಾಲೂಕು ಮಾಜಿ ಸೈನಿಕರ ಸಂಘದ ಸದಸ್ಯರು, ಎಬಿವಿಪಿ ಮತ್ತಿತರ ಸಂಘಟನೆಗಳಿಂದ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಎಸ್ಪಿ ಶ್ರೀನಾಥ ಜೋಶಿ, ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಮಹದಾಯಿಗಾಗಿ ಮಹಾ ವೇದಿಕೆ ಸಂಚಾಲಕ ಶಂಕರಪ್ಪ ಅಂಬಲಿ, ಜಾಲೀಕಟ್ಟಿ ಕೃಷ್ಣಾನಂದ ಸ್ವಾಮಿಗಳು, ರಾಮಚಂದ್ರಪ್ಪ, ಬಸವರಾಜ ಸಾಬಳೆ, ವಿಠಲ ಜಾಧವ ಮಾತನಾಡಿದರು.

ಕಾರ್ಯಕ್ರಮಕ್ಕೂ ಪೂರ್ವ ಮಹದಾಯಿಗಾಗಿ ಮಹಾವೇದಿಕೆಯ ವಿವಿಧ ಸಂಘಟನೆಯವರಿಂದ ಪಟ್ಟಣದ ಕೆಂಪಗಸಿಯಿಂದ ವೀರಗಲ್ಲಿನವರೆಗೆ ಮೆರವಣಿಗೆ ನಡೆಯಿತು.

ನಾಗೇಶ ಅಪ್ರೋಜಿ, ಚಂದ್ರಕಾಂತ ಚವ್ಹಾಣ, ಚನ್ನು ನಂದಿ, ಜಗದೀಶ ಗೊಂಡಬಾಳ, ಈಶಪ್ಪ ನಾಯ್ಕರ, ಎಸ್.ಜಿ. ಪಾಟೀಲ, ಶಂಕರಗೌಡ ಪಾಟೀಲ, ಸಂಗಮೇಶ ಚಿಕ್ಕನರಗುಂದ, ಪರಶುರಾಮ ಜಂಬಗಿ, ಎಸ್.ಡಿ. ಕೊಳ್ಳಿಯವರ, ವಿಠಲ ಶಿಂಧೆ, ಪುರಸಭೆ ಸದಸ್ಯೆ ರಾಜೇಶ್ವರಿ ವೀರನಗೌಡ್ರ, ಎಂ.ಬಿ. ಮೆಣಸಗಿ, ಸಹದೇವಗೌಡ ಪಾಟೀಲ, ಉಮ್ಮಕ್ಕ ಜಾವೂರ, ಚಂದ್ರಗೌಡ ಪಾಟೀಲ, ಶ್ರೀಪಾದ ಆನೇಗುಂದಿ, ಅಂದಾನಯ್ಯ ಕುರ್ತಕೋಟಿಮಠ, ಪಿ.ಎಸ್. ಹಿರೇಮನಿ, ಜಗದೀಶ ಬೆಳವಟಗಿ, ಪ್ರವೀಣ ಯಾವಗಲ್, ರಾಜು ಕಲಾಲ, ಟಿ.ಬಿ. ಶಿರಿಯಪ್ಪಗೌಡ್ರ, ತಾಪಂ ಅಧ್ಯಕ್ಷ ಪ್ರಭು ಯಲಿಗಾರ, ಮಹೇಶ ಬಡಿಗೇರ, ವಿವೇಕ ಯಾವಗಲ್, ಸುಭಾಷ್ ದೇವಕ್ಕಿ, ಮಹೇಶ್ವರಯ್ಯ ಸುರೇಬಾನ, ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ ಇತರರಿದ್ದರು.

ಪ್ರಾಮಾಣಿಕ ಹೋರಾಟ ಅಗತ್ಯ: ಕಳಸಾ-ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ನರಗುಂದದ 1980ರ ರೈತ ಹೋರಾಟದಿಂದ ರಾಜ್ಯಾದ್ಯಂತ ರೈತ ಸಂಘಗಳು ಉದಯವಾದವು. ಆದರೆ, ಇಂದಿನ ಹೋರಾಟಗಳು ಅಸಹ್ಯ ಮೂಡಿಸುತ್ತಿವೆ. ಸರ್ಕಾರಗಳು ರೈತರ ಬೆಳೆಗೆ ಯೋಗ್ಯ ಬೆಂಬಲ ಬೆಲೆ ನೀಡಬೇಕು. ಮಹದಾಯಿ ಹೋರಾಟದಲ್ಲಿ ಕೆಲವರು ದುಡ್ಡು ಮಾಡಲು ಹೊರಟಿದ್ದಾರೆ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಹೋರಾಡಿ ನೀರು ತರಲು ಶ್ರಮಿಸಬೇಕು ಎಂದರು.

Leave a Reply

Your email address will not be published. Required fields are marked *