ಹುತಾತ್ಮರ ಕುಟುಂಬಕ್ಕೆ ನಿಧಿ ಸಂಗ್ರಹ

ನರಗುಂದ: ಹುತಾತ್ಮ ಯೋಧರ ಕುಟುಂಬ ವರ್ಗದವರಿಗೆ ಧನಸಹಾಯ ಮಾಡಲು ನಿಧಿ ಸಂಗ್ರಹ ಕಾರ್ಯಕ್ಕೆ ಕೊಣ್ಣೂರಿನ ಶಿವಕುಮಾರ ಶ್ರೀಗಳು ಗುರುವಾರ ಚಾಲನೆ ನೀಡಿದರು.

ಗ್ರಾಮದ ಕೆಇಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ವಿವಿಧ ಅಂಗಡಿ ಮುಂಗಟ್ಟು ಮತ್ತು ಪ್ರತಿ ಮನೆ, ಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ಗುರುವಾರ 52 ಸಾವಿರ ರೂ. ಹಾಗೂ ಶುಕ್ರವಾರ 5 ಸಾವಿರ ರೂ. ಸಂಗ್ರಹಿಸಿದ್ದಾರೆ. ಫೆ. 24 ರವರೆಗೆ ನಿಧಿ ಸಂಗ್ರಹ ಕಾರ್ಯ ನಡೆಯಲಿದೆ. ಬಳಿಕ 44 ಹುತಾತ್ಮ ಯೋಧರ ಕುಟುಂಬಗಳಿಗೆ ನಿಧಿಯನ್ನು ಸಮವಾಗಿ ಹಂಚಲಾಗುವುದು. ಒಟ್ಟು ದೇಣಿಗೆ ಹಣವನ್ನು ಫೆ. 25ರಂದು ಬ್ಯಾಂಕ್ ಮೂಲಕ ಅವರವರ ಖಾತೆಗೆ ಜಮಾ ಮಾಡಲಾಗುವುದು ಎಂದು ಕೊಣ್ಣೂರಿನ ನಿವೃತ್ತ ಯೋಧ ಶಂಕ್ರಪ್ಪ ವಾಲಿ ‘ವಿಜಯವಾಣಿ’ಗೆ ತಿಳಿಸಿದರು.

ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಬಿ.ಬಿ. ಶೆಲ್ಲಿಕೇರಿ, ಬಿ.ಎಸ್. ಪಾಟೀಲ, ವೆಂಕಣ್ಣ, ಎಸ್.ಸಿ. ಶೆಬಣ್ಣವರ, ಕೆಇಎಸ್ ಪ್ರೌಢಶಾಲೆ ಮುಖ್ಯಾಧ್ಯಾಪಕ ಜಿ.ಎಫ್. ಪಾಟೀಲ, ಶಿಕ್ಷಕರಾದ ಎಂ.ಎಚ್. ಹಂಗನಕಟ್ಟಿ, ಎಸ್.ಎಚ್.ಜುಟ್ಟಪ್ಪನವರ, ಮಾರುತಿ ಭಾಗಲೆ, ಎಂ.ಎಂ. ಅರ್ಭಣದ, ವಿ.ಎಸ್. ಕಿತ್ತೂರ, ಕೆ.ಬಿ. ಹೊಸಮನಿ, ಎಸ್.ಎಸ್. ಸಾಳಿಗೌಡ್ರ, ವಿಕ್ರಂ ಭೂಸರೆಡ್ಡಿ, ಇತರರು ಪಾಲ್ಗೊಂಡಿದ್ದರು.

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ನರೇಗಲ್ಲ: ಪುಲ್ವಾಮಾದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಪಟ್ಟಣದಲ್ಲಿ ಮುಸ್ಲಿಮರು ಸಂತೆ ಬಜಾರದ ಮಸೀದಿಯಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎ. ನವಲಗುಂದ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕರ ತ್ಯಾಗ ಬಲಿದಾನದಿಂದಾಗಿ ನಾಡಿನಲ್ಲಿ ನಾವೆಲ್ಲ ಸುರಕ್ಷತೆಯಿಂದ ಇರಲು ಸಾಧ್ಯವಾಗಿದೆ. ಸೈನಿಕರ ಮೇಲೆ ಉಗ್ರರ ದಾಳಿ ಪೈಶಾಚಿಕ ಕೃತ್ಯವಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ನಮ್ಮ ಭಾರತದ ಸೈನಿಕರು ನೀಡಿ ವೈರಿಗಳ ನಾಶಕ್ಕೆ ಮುಂದಾದಾಗ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಟ್ಟಣದ ಎಲ್ಲ ಯವಕರು ಸೈನಿಕ, ಕೃಷಿಕರನ್ನು ಗೌರವದಿಂದ ಕಾಣಬೇಕು ಎಂದರು.

ಸಮಾಜದ ಮುಖಂಡರಾದ ಅಬ್ದುಲ್​ರಹಮಾನ ಮುಲ್ಲಾ, ಬುಡ್ನೆಸಾಬ ದಳವಾಯಿ, ಅಬ್ದುಲ್​ರಹಮಾನ ರಾಹುತ, ಎ.ಐ. ಕುಂದಗೋಳ, ನಬಿಸಾಬ, ಶಫೀಕಸಾಬ ಸೂಡಿ, ಮಹಬೂಬಸಾಬ ನಶೇಖಾನ, ರೈಮಾನಸಾಬ ಹೊಸಮನಿ ಇದ್ದರು.